ಉತ್ತರ ಪ್ರದೇಶ: ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಹಾಗೂ ಗ್ಯಾಂಗ್‌ಸ್ಟರ್‌ಗಳ ಜಾಲದೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ಪಡೆ (UP ATS) ತನಿಖೆಯನ್ನು ತೀವ್ರಗೊಳಿಸಿದೆ.
ಕಳೆದ ನಾಲ್ಕು ತಿಂಗಳಲ್ಲಿ ಬಂಧಿಸಲಾದ 52 ಶಂಕಿತರನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದ ಬಳಿಕ, ಈಗ ಅವರೊಂದಿಗೆ ನಂಟು ಹೊಂದಿರುವ ಸುಮಾರು 150ಕ್ಕೂ ಹೆಚ್ಚು ಶಂಕಿತರ ಹಿನ್ನೆಲೆಯನ್ನು ಅಧಿಕಾರಿಗಳು ಜಾಲಾಡುತ್ತಿದ್ದಾರೆ.
ಎಟಿಎಸ್ ನೀಡಿರುವ ಮಾಹಿತಿಯ ಪ್ರಕಾರ, ಬಂಧಿತ ಆರೋಪಿಗಳು ಪಾಕಿಸ್ತಾನದ ಕುಖ್ಯಾತ ಗ್ಯಾಂಗ್‌ಸ್ಟರ್ ಶಹಜಾದ್ ಭಟ್ಟಿ ಹಾಗೂ ಆತನ ಜಾಲಕ್ಕೆ ‘ಸ್ಲೀಪರ್ ಸೆಲ್’ಗಳಾಗಿ ಕೆಲಸ ಮಾಡುತ್ತಿದ್ದರು. ಸಾರ್ವಜನಿಕ ಸ್ಥಳಗಳಲ್ಲಿ ಬೆಂಕಿ ಹಚ್ಚುವುದು, ಬಾಂಬ್ ಸ್ಪೋಟಕ್ಕೆ ಸಂಚು ರೂಪಿಸುವುದು ಮತ್ತು ಪಾಕಿಸ್ತಾನಿ ಗ್ಯಾಂಗ್‌ಸ್ಟರ್‌ಗಳ ಪೋಸ್ಟರ್‌ಗಳನ್ನು ಹಾಕಿ ದಿಗಿಲು ಹುಟ್ಟಿಸುವಂತಹ ಕೃತ್ಯಗಳಲ್ಲಿ ಈ ಜಾಲ ಭಾಗಿಯಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 60ಕ್ಕೂ ಹೆಚ್ಚು ಶಂಕಿತರನ್ನು ವಿಚಾರಣೆ ನಡೆಸಲಾಗಿದ್ದು, ಅವರ ಡಿಜಿಟಲ್ ಸಂವಹನ, ವಾಟ್ಸಾಪ್ ಹಾಗೂ ಇನ್‌ಸ್ಟಾಗ್ರಾಮ್ ಚಾಟ್‌ಗಳು, ಮತ್ತು ಬ್ಯಾಂಕಿಂಗ್ ವಹಿವಾಟುಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಕೇವಲ ಸಾಮಾನ್ಯ ಸಂಪರ್ಕದಲ್ಲಿದ್ದರೇ ಅಥವಾ ಉಗ್ರ ಜಾಲದ ಪ್ರಮುಖ ಕಾರ್ಯಾಚರಣೆಯ ಭಾಗವಾಗಿದ್ದರೇ ಎಂಬುದನ್ನು ಪತ್ತೆಹಚ್ಚಲು ಕೇಂದ್ರ ತನಿಖಾ ಸಂಸ್ಥೆಗಳ ನೆರವನ್ನು ಪಡೆಯಲಾಗುತ್ತಿದೆ





Leave a comment