Home ದಾವಣಗೆರೆ ಭದ್ರಾ ಮೇಲ್ದಂಡೆ ಯೋಜನೆ ಪ್ರಾಯೋಗಿಕ ಚಾಲನೆಗೆ 3 ಟಿಎಂಸಿ ನೀರು ಬಿಡಬೇಕೆಂಬ ಆದೇಶ ವಾಪಸ್ ಪಡೆಯದಿದ್ದರೆ ಉಗ್ರ ಹೋರಾಟ: ಜಿಲ್ಲಾ ರೈತರ ಒಕ್ಕೂಟ ಎಚ್ಚರಿಕೆ!
ದಾವಣಗೆರೆಬೆಂಗಳೂರು

ಭದ್ರಾ ಮೇಲ್ದಂಡೆ ಯೋಜನೆ ಪ್ರಾಯೋಗಿಕ ಚಾಲನೆಗೆ 3 ಟಿಎಂಸಿ ನೀರು ಬಿಡಬೇಕೆಂಬ ಆದೇಶ ವಾಪಸ್ ಪಡೆಯದಿದ್ದರೆ ಉಗ್ರ ಹೋರಾಟ: ಜಿಲ್ಲಾ ರೈತರ ಒಕ್ಕೂಟ ಎಚ್ಚರಿಕೆ!

Share
ಭದ್ರಾ
Share

ದಾವಣಗೆರೆ: ಭದ್ರಾ ಮೇಲ್ದಂಡೆ ಯೋಜನೆ ಪ್ರಾಯೋಗಿಕ ಚಾಲನೆಗೆ 3 ಟಿಎಂಸಿ ನೀರು ಬಿಡಬೇಕು ಎಂಬ ರಾಜ್ಯ ಸರ್ಕಾರದ ಆದೇಶ ಕೂಡಲೇ  ಹಿಂಪಡೆಯಬೇಕು ಎಂದು ಆಗ್ರಹಿಸಿ ಅಪರ ಜಿಲ್ಲಾಧಿಕಾರಿಯವರಿಗೆ ಜಿಲ್ಲಾ ರೈತರ ಒಕ್ಕೂಟದಿಂದ ಮನವಿ ಪತ್ರ ಸಲ್ಲಿಸಲಾಯಿತು. 

ಪ್ರಸ್ತುತ ದಾವಣಗೆರೆ ಜಿಲ್ಲೆಯ ರೈತರು ದಿನಬೆಳಗಾದರೂ ಮಳೆ ಕೊರತೆಯಿಂದ ಭದ್ರಾ ಡ್ಯಾಂ ತುಂಬಿಲ್ಲ. ಮುಂದೆ ಏನಪ್ಪಾ ಗತಿ ಎಂದು ದಿಕ್ಕು ತೋಚದೇ ತಲೆ ಮೇಲೆ ಕೈ ಹೊತ್ತು ಕುಳಿತಿರುವಾಗ ರಾಜ್ಯದ ಕಾಂಗ್ರೆಸ್ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆ ಪ್ರಾಯೋಗಿಕ ಚಾಲನೆಗೆ 3 ಟಿಎಂಸಿ ನೀರು ಬಿಡಬೇಕು ಎಂದು ಆದೇಶಿರುವುದು ರೈತ ವಿರೋಧಿ ನಿಲುವು ಆಗಿದೆ. ಇಲಿಗೆ ಪ್ರಾಣಸಂಕಟ ಬೆಕ್ಕಿಗೆ ಚಿನ್ನಾಟ ಎಂಬಂತೆ ಆಗಿದೆ ಎಂದು ಆರೋಪಿಸಲಾಗಿದೆ.

ದಾವಣಗೆರೆ ಜಿಲ್ಲೆಯ ರೈತರು ಪ್ರತಿ ನಿತ್ಯ ನೀರು ಹರಿಸುವ ವಿಚಾರದಲ್ಲಿ ಸಂಘರ್ಷಕ್ಕೀಳಿದಿದ್ದಾರೆ. ಆಗಸ್ಟ್ ತಿಂಗಳ ಅಂತ್ಯಕ್ಕೆ ಸಮೀಪಿಸಿದ್ರೂ ಡ್ಯಾಂ ಭರ್ತಿಯಾಗಿಲ್ಲ. ಇಂದು ಒಳಹರಿವು 5680 ಕ್ಯೂಸೆಕ್ ಇದ್ದು, ನೀರಿನ ಮಟ್ಟ 175 ಅಡಿ 11 ಇಂಚು ಇದೆ. ಒಟ್ಟು ನೀರಿನ ಸಂಗ್ರಹ 59.42 ಟಿಎಂಸಿ ನೀರು ಇದೆ. ಡ್ಯಾಂ ತುಂಬಲು ಇನ್ನೂ 12 ಟಿಎಂಸಿ ನೀರು ಬೇಕು. ಮಳೆಗಾಲದ ಹಂಗಾಮಿಗೆ ನೀರು ಕೊಡಬೇಕೋ, ನೀರು ಸಂಗ್ರಹ ರಕ್ಷಣೆ ಮಾಡಿಕೊಂಡು ಮುಂದಿನ ಬೇಸಿಗೆ ಹಂಗಾಮಿಗೆ ಕೊಡಬೇಕೋ ಎಂದು ರೈತರು ಪರಸ್ಪರ ಬೀದಿಗೆ ಇಳಿದು ಸಂಘರ್ಷಿಸುತ್ತಿರುವಾಗ ರಾಜ್ಯ ಕಾಂಗ್ರೆಸ್ ಸರ್ಕಾರದ ಆದೇಶ ರೈತರಿಗೆ ಬರಸಿಡಿಲು ಬಡಿದಂತೆ ಆಗಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಭದ್ರಾ ನಮ್ಮ ಜಿಲ್ಲೆಯ ಜೀವನಾಡಿ. ಭದ್ರಾ ಮೇಲ್ದಂಡೆ ಯೋಜನೆ ನಿಯಮಾನುಸಾರ ತುಂಗಾ ನದಿಯಿಂದ ಭದ್ರಾ ಡ್ಯಾಂಗೆ 17.40 ಟಿಎಂಸಿ ನೀರೇತ್ತಿ ಹರಿಸುವವರೆಗೆ ಭದ್ರಾ ಡ್ಯಾಂನಿಂದ ಒಂದು ಹನಿ ನೀರು ಕೊಡುವುದಿಲ್ಲ ಎಂದು ರೈತರು ಸಾವಿರ ಸಾವಿರ ಸಲ ಘೋಷಿಸಿದ್ದಾರೆ. ಅಂತವುದರಲ್ಲಿ ರಾಜ್ಯದ ಡಿ.ಕೆ. ಶಿವಕುಮಾರರವರ ಬಂಡೆ ಸರ್ಕಾರ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರೊಂದಿಗೆ ಹುಡುಗಾಟ ಮಾಡುತ್ತಿದೆ ಎಂದು ಕಿಡಿಕಾರಿದ್ದು, ಆದ್ದರಿಂದ ರಾಜ್ಯ ಸರ್ಕಾರ ತಾನು ಹೊರಡಿಸಿರುವ ಭದ್ರಾ ಮೇಲ್ದಂಡೆಗೆ 3 ಟಿಎಂಸಿ ನೀರು ಬಿಡಬೇಕು ಎಂಬ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು. ಇಲ್ಲವಾದರೆ ಎಲ್ಲಾ ರೈತ ಸಂಘಟನೆಗಳು ಒಂದಾಗಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾ ರೈತರ ಒಕ್ಕೂಟದ ಅಧ್ಯಕ್ಷ ಕೋಳೆನಹಳ್ಳಿ ಬಿ ಎಂ ಸತೀಶ್, ರೈತ ಮುಖಂಡರಾದ ಬೇತೂರು ಸಂಗಣ್ಣಗೌಡ್ರು, ಬಿ.ವಿರೂಪಾಕ್ಷಪ್ಪ, ಬಿ.ಬಸವರಾಜಯ್ಯ, ಲೋಕಿಕೆರೆ ಶಂಕರಮೂರ್ತಿ, ವೊಡ್ಡಿನಳ್ಳಿ ಲಿಂಗರಾಜು, ವೈ.ಆರ್.ಬಸವರಾಜಪ್ಪ, ಅವರಗೆರೆ ಸಿ.ಈಶ್ವರಪ್ಪ ಮುಂತಾದವರು ಉಪಸ್ಥಿತರಿದ್ದರು

Share

Leave a comment

Leave a Reply

Your email address will not be published. Required fields are marked *

Related Articles