ನವದೆಹಲಿ: ಆಭರಣ ಬ್ರ್ಯಾಂಡ್ ಒಂದರ ರಕ್ಷಾ ಬಂಧನ ಜಾಹೀರಾತಿನಲ್ಲಿ ನಟಿ ಕೃತಿ ಸನೋನ್ ಧರಿಸಿದ್ದ ಉಡುಪಿನ ಕುರಿತು ಆರಂಭವಾಗಿರುವ ವಿವಾದಕ್ಕೆ ಈಗ ರಾಜಕೀಯ ರಂಗದಲ್ಲೂ ಸದ್ದು ಮಾಡುತ್ತಿದೆ. ನಟಿಯ ಉಡುಪನ್ನು ಟೀಕಿಸಿದ್ದ ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ವಿರುದ್ಧ ಕೃತಿ ಸನೋನ್ ನೀಡಿದ್ದ ಹೇಳಿಕೆಯನ್ನು ಬೆಂಬಲಿಸಿ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ವಿವಾದದ ಹಿನ್ನೆಲೆ:
ಇತ್ತೀಚೆಗೆ ಬಿಡುಗಡೆಯಾದ ಜಿವಾವಾ ಆಭರಣ ಸಂಸ್ಥೆಯ ರಕ್ಷಾ ಬಂಧನ ಜಾಹೀರಾತಿನಲ್ಲಿ ಕೃತಿ ಸನೋನ್ ಆಧುನಿಕ ಶೈಲಿಯ ಆಫ್-ವೈಟ್ ಬ್ಲೌಸ್ ಮತ್ತು ಸ್ಕರ್ಟ್ ಧರಿಸಿದ್ದರು. ಈ ಉಡುಪಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಕಂಗನಾ ರಣಾವತ್, “ಸಾಕಷ್ಟು ಬಟ್ಟೆಯ ಆಯ್ಕೆಗಳಿದ್ದರೂ, ಸಹೋದರನಿಗೆ ಬಿಕಿನಿ ಅಥವಾ ಒಳಉಡುಪಿನಲ್ಲಿ ರಾಖಿ ಕಟ್ಟುವ ಅಗತ್ಯವೇನಿತ್ತು?” ಎಂದು ಪ್ರಶ್ನಿಸಿ ಜಾಹೀರಾತನ್ನು ಟೀಕಿಸಿದ್ದರು.
ಕೃತಿ ಸನೋನ್ ಮತ್ತು ರಾಹುಲ್ ಗಾಂಧಿ ತಿರುಗೇಟು:
ಕಂಗನಾ ಟೀಕೆಗೆ ಪ್ರತ್ಯುತ್ತರ ನೀಡಿದ್ದ ಕೃತಿ ಸನೋನ್, “ಹಬ್ಬಗಳ ನಿಜವಾದ ಅರ್ಥ ಧರಿಸುವ ಬಟ್ಟೆಯಲ್ಲಲ್ಲ, ನಮ್ಮ ಸಂಪ್ರದಾಯ ಮತ್ತು ಭಾವನೆಗಳಲ್ಲಿದೆ. ಸಂಸ್ಕೃತಿ ಮತ್ತು ಸಂಪ್ರದಾಯಗಳು ಹೃದಯದಲ್ಲಿರುತ್ತವೆ ಹೊರತು ಉಡುಪಿನ ನೆಕ್‌ಲೈನ್‌ನಲ್ಲಲ್ಲ” ಎಂದು ಸ್ಪಷ್ಟನೆ ನೀಡಿದ್ದರು.
ಕೃತಿ ಸನೋನ್ ಅವರ ಈ ಹೇಳಿಕೆಯನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡ ರಾಹುಲ್ ಗಾಂಧಿ, “ಮಹಿಳೆ ಏನು ಧರಿಸಬೇಕು, ಏನು ಮಾಡಬೇಕು ಮತ್ತು ಎಲ್ಲಿಗೆ ಹೋಗಬೇಕು ಎಂಬುದು ಆಕೆಯ ಆಯ್ಕೆ. ಮಹಿಳೆಯರ ಸ್ವಾತಂತ್ರ್ಯವನ್ನು ಗೌರವಿಸಿ, ಅವರ ಮೇಲಿನ ಟ್ರೋಲಿಂಗ್ ತಕ್ಷಣವೇ ನಿಲ್ಲಿಸಿ” ಎಂದು ಬರೆದುಕೊಂಡು #SmashThePatriarchy ಹ್ಯಾಶ್‌ಟ್ಯಾಗ್ ಬಳಸಿದ್ದಾರೆ.





Leave a comment