ಸಿರಿಗೆರೆ: ಸಮಾಜಸೇವೆಯನ್ನೇ ಕೈಂಕರ್ಯವೆಂದು ಪರಿಗಣಿಸಿ, ಅದರಲ್ಲಿಯೇ ತಪೋತೃಪ್ತಿಯನ್ನು ಕಾಣುತ್ತಾ ನಾಡಿನ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ರೈತಮುಖಿ ಕ್ಷೇತ್ರಗಳಿಗೆ ಸ್ಮರಣೀಯ ಕೊಡುಗೆಗಳನ್ನು ನೀಡುತ್ತಾ ಬಂದಿರುವ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಸೇವಾ ಪರಂಪರೆಗೆ ಸಿರಿಗೆರೆ ಗ್ರಾಮದಲ್ಲಿ ಮತ್ತೊಂದು ಮಹತ್ವದ ಅಧ್ಯಾಯ ಸೇರ್ಪಡೆಯಾಗಿದೆ.
ಸಿರಿಗೆರೆ ಗ್ರಾಮದ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸುವ ಉದ್ದೇಶದಿಂದ, ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಹಳೆಯ ಕಸ ವಿಲೇವಾರಿ ವಾಹನದ ಬದಲಿಗೆ ಶ್ರೀ ತರಳಬಾಳು ಮಠದ ವತಿಯಿಂದ ₹13 ಲಕ್ಷ ವೆಚ್ಚದಲ್ಲಿ ನೂತನ ಕಸ ವಿಲೇವಾರಿ ವಾಹನವನ್ನು ಸಿರಿಗೆರೆ ಗ್ರಾಮ ಪಂಚಾಯಿತಿಗೆ ನೀಡಲಾಗಿದೆ. ನೂತನ ವಾಹನದ ಮೂಲಕ ಗ್ರಾಮದಲ್ಲಿ ಮನೆಮನೆಗೆ ತೆರಳಿ ಕಸ ಸಂಗ್ರಹಿಸುವ ವ್ಯವಸ್ಥೆ ಮತ್ತಷ್ಟು ವ್ಯವಸ್ಥಿತವಾಗಿ ಮುಂದುವರಿಯಲಿದೆ.
ಸುಮಾರು ಹತ್ತು ವರ್ಷಗಳ ಹಿಂದೆ ಸಿರಿಗೆರೆ ಗ್ರಾಮಕ್ಕೆ ಕಸ ವಿಲೇವಾರಿ ವಾಹನವನ್ನು ತರಳಬಾಳು ಮಠದಿಂದ ಒದಗಿಸಲಾಗಿತ್ತು. ಹಲವು ವರ್ಷಗಳ ನಿರಂತರ ಸೇವೆಯ ಬಳಿಕ ಹಳೆಯ ವಾಹನ ಬಳಕೆಗೆ ಅಸಮರ್ಪಕವಾದ ಹಿನ್ನೆಲೆಯಲ್ಲಿ ಇದೀಗ ನೂತನ ವಾಹನವನ್ನು ಒದಗಿಸಲಾಗಿದೆ. ಕಸ ವಿಲೇವಾರಿ ವ್ಯವಸ್ಥೆಯ ವಾಹನ ಸೌಕರ್ಯ ಮಾತ್ರವಲ್ಲದೆ, ಅದರ ಖರ್ಚು–ವೆಚ್ಚಗಳಿಗೂ ಶ್ರೀ ತರಳಬಾಳು ಮಠದಿಂದ ನಿರಂತರವಾಗಿ ಆರ್ಥಿಕ ನೆರವು ನೀಡುತ್ತಾ ಬರಲಾಗಿದೆ.
ಒಗ್ಗಟ್ಟಿನ ಗ್ರಾಮಾಭಿವೃದ್ಧಿಗೆ ಅವಿರೋಧ ಆಯ್ಕೆಯ ಪರಂಪರೆ
ಸಿರಿಗೆರೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹಲವು ಸಂದರ್ಭಗಳಲ್ಲಿ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಗ್ರಾಮದಲ್ಲಿ ಒಗ್ಗಟ್ಟು ಮತ್ತು ಸೌಹಾರ್ದದ ವಾತಾವರಣ ನಿರ್ಮಾಣವಾಗುವಂತೆ ಶ್ರೀ ಜಗದ್ಗುರುಗಳವರು ಮಾರ್ಗದರ್ಶನ ನೀಡಿದ್ದರು.
ಗ್ರಾಮದ ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳಿಗಿಂತ ಗ್ರಾಮದ ಹಿತ, ಪರಸ್ಪರ ಸಹಕಾರ ಹಾಗೂ ಸೇವಾ ಮನೋಭಾವಕ್ಕೆ ಆದ್ಯತೆ ನೀಡುವ ಮೂಲಕ ಒಗ್ಗಟ್ಟಿನ ಗ್ರಾಮಾಭಿವೃದ್ಧಿಗೆ ಒತ್ತು ನೀಡಲಾಗಿತ್ತು.
ಮೂರು ದಶಕಗಳ ಹಿಂದೆಯೇ ಸ್ವಚ್ಛತಾ ಸಂಕಲ್ಪ
ಸ್ವಚ್ಛತೆ ಮತ್ತು ನೈರ್ಮಲ್ಯವು ಆರೋಗ್ಯವಂತ ಸಮಾಜದ ಮೂಲಾಧಾರ ಎಂಬುದನ್ನು ಸುಮಾರು ಮೂರು ದಶಕಗಳ ಹಿಂದೆಯೇ ಮನಗಂಡಿದ್ದ ಶ್ರೀ ಜಗದ್ಗುರುಗಳವರು, ಸಿರಿಗೆರೆ ಗ್ರಾಮವನ್ನು ಸ್ವಚ್ಛ ಹಾಗೂ ಆರೋಗ್ಯವಂತ ಗ್ರಾಮವನ್ನಾಗಿ ರೂಪಿಸುವ ಸಂಕಲ್ಪದೊಂದಿಗೆ ಕಾರ್ಯಪ್ರವೃತ್ತರಾಗಿದ್ದರು.
ದೇಶಾದ್ಯಂತ “ಸ್ವಚ್ಛ ಭಾರತ” ಪರಿಕಲ್ಪನೆಗೆ ಹೆಚ್ಚಿನ ಒತ್ತು ದೊರೆಯುವ ಮುನ್ನವೇ ಸಿರಿಗೆರೆಯಲ್ಲಿ ಸ್ವಚ್ಛತೆಯನ್ನು ಸಾಮಾಜಿಕ ಬದುಕಿನ ಅವಿಭಾಜ್ಯ ಅಂಗವನ್ನಾಗಿ ಬೆಳೆಸುವ ಪ್ರಯತ್ನ ಆರಂಭವಾಗಿತ್ತು.
ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಹಾಗೂ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಶ್ರದ್ಧಾಂಜಲಿ ಸಮಾರಂಭದ ಸಂದರ್ಭದಲ್ಲಿ ಸಂಪೂರ್ಣ ಗ್ರಾಮವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ನಡೆಸಿಕೊಂಡು ಬರಲಾಗುತ್ತಿದೆ.
ಕಸ ಸಂಗ್ರಹದೊಂದಿಗೆ ಶರಣರ ವಚನಗಳ ನಿನಾದ…!
ಸಿರಿಗೆರೆಯ ಕಸ ವಿಲೇವಾರಿ ವ್ಯವಸ್ಥೆಯ ಮತ್ತೊಂದು ವಿಶಿಷ್ಟತೆಯೆಂದರೆ, ಪ್ರತಿದಿನ ಮುಂಜಾನೆ ಕಸ ಸಂಗ್ರಹಿಸುವ ವಾಹನವು ಶರಣರ ವಚನಗಳ ನಿನಾದದೊಂದಿಗೆ ಗ್ರಾಮದಲ್ಲಿ ಸಂಚರಿಸುತ್ತದೆ.
ಮನೆಯಂಗಳಕ್ಕೆ ಆಗಮಿಸುವ ವಾಹನವು ಕಸವನ್ನು ಸಂಗ್ರಹಿಸುವುದರ ಜೊತೆಗೆ, ಶರಣರ ವಚನಗಳ ಮೂಲಕ ಸ್ವಚ್ಛತೆ, ಸಂಸ್ಕಾರ, ಸಾಮಾಜಿಕ ಜವಾಬ್ದಾರಿ ಹಾಗೂ ಜೀವನಮೌಲ್ಯಗಳ ಸಂದೇಶವನ್ನೂ ಮನೆಮನೆಗೆ ತಲುಪಿಸುತ್ತದೆ.
ಹೀಗಾಗಿ ಸಿರಿಗೆರೆಯಲ್ಲಿ ಕಸ ವಿಲೇವಾರಿ ವ್ಯವಸ್ಥೆಯು ಕೇವಲ ನೈರ್ಮಲ್ಯ ನಿರ್ವಹಣೆಗೆ ಸೀಮಿತವಾಗದೆ, ಸ್ವಚ್ಛತೆಯೊಂದಿಗೆ ಸಂಸ್ಕಾರ ಮತ್ತು ಸಾಮಾಜಿಕ ಜಾಗೃತಿಯನ್ನು ಬೆಸೆಯುವ ವಿಶಿಷ್ಟ ಸೇವಾ ಮಾದರಿಯಾಗಿ ರೂಪುಗೊಂಡಿದೆ.
ಸ್ವಚ್ಛ ಗ್ರಾಮ – ಆರೋಗ್ಯವಂತ ಸಮಾಜ
ಮೂರು ದಶಕಗಳ ಹಿಂದೆ ಆರಂಭವಾದ ಸ್ವಚ್ಛತಾ ಸಂಕಲ್ಪಕ್ಕೆ ಇದೀಗ ₹13 ಲಕ್ಷ ವೆಚ್ಚದ ನೂತನ ಕಸ ವಿಲೇವಾರಿ ವಾಹನ ಮತ್ತಷ್ಟು ಬಲ ನೀಡಿದೆ.
ಸ್ವಚ್ಛತೆ, ಸಾರ್ವಜನಿಕ ಆರೋಗ್ಯ, ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಸಮನ್ವಯಗೊಳಿಸುವ ಮೂಲಕ “ಸ್ವಚ್ಛ ಗ್ರಾಮ – ಆರೋಗ್ಯವಂತ ಸಮಾಜ” ಎಂಬ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ಸೇವಾ ಕಾರ್ಯ ಮುಂದುವರಿಯುತ್ತಿದೆ.
ಸಾಂಕೇತಿಕ ಸಮಾರಂಭ
ನೂತನ ಕಸ ವಿಲೇವಾರಿ ವಾಹನದ ಸಾಂಕೇತಿಕ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎಂ.ಜಿ. ದೇವರಾಜ್, ಮೋಹನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಮಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಗ್ರಾಮದ ಸಮಸ್ಯೆಗಳನ್ನು ಆಲಿಸಿ, ಅಗತ್ಯ ಸೌಲಭ್ಯಗಳಿಗೆ ಮಠದ ವತಿಯಿಂದ ನಿರಂತರವಾಗಿ ಆರ್ಥಿಕ ಹಾಗೂ ಸಾಮಾಜಿಕ ಸಹಕಾರ ನೀಡುತ್ತಾ ಬಂದಿರುವ ಶ್ರೀ ತರಳಬಾಳು ಮಠದ ಸೇವಾ ಪರಂಪರೆಗೆ ₹13 ಲಕ್ಷ ವೆಚ್ಚದ ನೂತನ ಕಸ ವಿಲೇವಾರಿ ವಾಹನ ಮತ್ತೊಂದು ಮಹತ್ವದ ಕೊಡುಗೆಯಾಗಿದೆ.
“ಸಿರಿಗೆರೆ ಗ್ರಾಮದ ಸ್ವಚ್ಛತೆಗಾಗಿ ಪೂಜ್ಯ ಶ್ರೀ ಜಗದ್ಗುರುಗಳವರು ಹತ್ತಾರು ವರ್ಷಗಳಿಂದ ಸಹಕಾರ ನೀಡುತ್ತಾ ಬಂದಿದ್ದಾರೆ. ಹಳೆಯ ಕಸ ವಿಲೇವಾರಿ ವಾಹನವನ್ನು ಗುರುಗಳೇ ನೀಡಿದ್ದರು. ಹಳೆಯದಾದ ಕಾರಣ ಅದರ ಬದಲಿಗೆ ₹13 ಲಕ್ಷ ವೆಚ್ಚದಲ್ಲಿ ಹೊಸ ವಾಹನ ನೀಡಿರುವುದು ಗ್ರಾಮಕ್ಕೆ ತುಂಬಾ ಅನುಕೂಲವಾಗಿದೆ. ಮನೆಮನೆಗೆ ಕಸ ಸಂಗ್ರಹಿಸುವುದರಿಂದ ಗ್ರಾಮದ ಸ್ವಚ್ಛತೆ ಕಾಪಾಡಲು ಇನ್ನಷ್ಟು ಸಹಕಾರಿಯಾಗಲಿದೆ. ಇದಕ್ಕಾಗಿ ಶ್ರೀ ಜಗದ್ಗುರುಗಳವರಿಗೆ ಗ್ರಾಮಸ್ಥರ ಪರವಾಗಿ ಪ್ರಣಾಮಗಳನ್ನು ಸಲ್ಲಿಸುತ್ತೇನೆ.”
— ಎಂ.ಜಿ. ದೇವರಾಜ್,
ಸದಸ್ಯರು, ಗ್ರಾಮ ಪಂಚಾಯಿತಿ, ಸಿರಿಗೆರೆ





Leave a comment