ಹೈದರಾಬಾದ್: ತರಕಾರಿ ಮಾರಾಟದ ಸೋಗಿನಲ್ಲಿ ಮಾರುಕಟ್ಟೆಗೆ ಬರುವ ವಿವಾಹಿತ ಮಹಿಳೆಯರಿಗೆ ತಡರಾತ್ರಿ ಅಶ್ಲೀಲ ಮೆಸೇಜ್ ಕಳುಹಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ವಿಕೃತ ಕಾಮುಕನೊಬ್ಬನನ್ನು ಕಾಚಿಗುಡ ಪೊಲೀಸರು ಬಂಧಿಸಿದ್ದಾರೆ.
26 ವರ್ಷದ ವಾಜಿದ್ ಬಂಧಿತ ಆರೋಪಿ.
ಸಾರ್ವಜನಿಕರಿಂದ ಧರ್ಮದೇಟು:
ಕಾಚಿಗುಡದ ಗೋಲ್ನಾಕ್ ತರಕಾರಿ ಮಾರುಕಟ್ಟೆಯಲ್ಲಿ ವಾಜಿದ್ ವ್ಯಾಪಾರ ಮಾಡುತ್ತಿದ್ದನು. ವ್ಯಾಪಾರದ ನೆಪದಲ್ಲಿ ಮಹಿಳೆಯರ ಮೊಬೈಲ್ ಸಂಖ್ಯೆ ಪಡೆದುಕೊಳ್ಳುತ್ತಿದ್ದ ಈತ, ರಾತ್ರಿ ವೇಳೆ ಅಸಭ್ಯ ಮೆಸೇಜ್‌ಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದನು. ಇತ್ತೀಚೆಗೆ ಮಹಿಳೆಯೊಬ್ಬರಿಗೆ ನಿರಂತರವಾಗಿ ಅಶ್ಲೀಲ ಸಂದೇಶ ಕಳುಹಿಸಿದ್ದರಿಂದ, ಆಕೆ ತನ್ನ ಪತಿಗೆ ವಿಷಯ ತಿಳಿಸಿದ್ದಾಳೆ. ಇದರಿಂದ ಆಕ್ರೋಶಗೊಂಡ ಪತಿ ಹಾಗೂ ಸ್ಥಳೀಯರು ವಾಜಿದ್‌ಗೆ ರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ.
ಅಶ್ಲೀಲ ಮೆಸೇಜ್‌ಗೆ ವಿಚ್ಛೇದನ:
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಮತ್ತೊಬ್ಬ ಸಂತ್ರಸ್ತೆ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಈ ಹಿಂದೆ ವಾಜಿದ್ ಕಳುಹಿಸಿದ್ದ ಅಶ್ಲೀಲ ಸಂದೇಶಗಳಿಂದಾಗಿ ತಮ್ಮ ಸಂಸಾರದಲ್ಲಿ ಶಂಕೆ ಮೂಡಿ, ಪತಿಯಿಂದ ವಿಚ್ಛೇದನ (ಡೈವೋರ್ಸ್) ಪಡೆಯುವಂತಾಯಿತು ಎಂದು ಕಣ್ಣೀರಿಟ್ಟಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ವಾಜಿದ್ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು, ಇನ್ನು ಎಷ್ಟು ಜನ ಮಹಿಳೆಯರಿಗೆ ಈ ರೀತಿ ಕಿರುಕುಳ ನೀಡಿದ್ದಾನೆ ಎಂಬ ಬಗ್ಗೆ ತನಿಖೆ ತೀವ್ರಗೊಳಿಸಿದ್ದಾರೆ.





Leave a comment