ನವದೆಹಲಿ: ಬಾಲಿವುಡ್ನ ಪ್ರಸಿದ್ಧ ‘ಸ್ಪೆಷಲ್ 26’ ಸಿನಿಮಾದ ಮಾದರಿಯಲ್ಲೇ ದೆಹಲಿಯ ಉದ್ಯಮಿಯೊಬ್ಬರ ಮನೆಗೆ ನಕಲಿ ಸಿಬಿಐ (CBI) ಅಧಿಕಾರಿಗಳಾಗಿ ತೆರಳಿ ದಾಳಿ ನಡೆಸಲು ಯತ್ನಿಸಿದ್ದ ಭಾರಿ ಜಾಲವನ್ನು ದೆಹಲಿ ಪೊಲೀಸರು ಭೇದಿಸಿದ್ದಾರೆ. ಪ್ರಕರಣ ಸಂಬಂಧ ಮಾಸ್ಟರ್ ಮೈಂಡ್ ಮಹಿಳೆ ಸೇರಿದಂತೆ ಒಟ್ಟು ಏಳು ಜನ ಆರೋಪಿಗಳನ್ನು ಬಂಧಿಸಲಾಗಿದೆ.
ಘಟನೆಯ ವಿವರ:
ಆಗಸ್ಟ್ 11ರಂದು ರಾತ್ರಿ 10 ಗಂಟೆ ಸುಮಾರಿಗೆ ದೆಹಲಿಯ ಪ್ರಶಾಂತ್ ವಿಹಾರ್ನಲ್ಲಿರುವ ಪ್ರಥಮ್ ಅಗರ್ವಾಲ್ ಎಂಬುವರ ಮನೆಗೆ 6 ಪುರುಷರು ಹಾಗೂ ಇಬ್ಬರು ಮಹಿಳೆಯರನ್ನೊಳಗೊಂಡ 8 ಜನರ ಗುಂಪು ಬಂದಿತ್ತು. ನಾವು ಸಿಬಿಐ ಅಧಿಕಾರಿಗಳು, ನಿಮ್ಮ ಮನೆ ಶೋಧನೆ ಮಾಡಲು ಬಂದಿದ್ದೇವೆ ಎಂದು ಹೇಳಿ ಮನೆಯೊಳಗೆ ನುಗ್ಗಲು ಯತ್ನಿಸಿದರು.
ಸಂಶಯಗೊಂಡ ಮನೆಯವರು ಮತ್ತು ನೆರೆಹೊರೆಯವರು ಸರ್ಚ್ ವಾರಂಟ್ ಹಾಗೂ ಗುರುತಿನ ಚೀಟಿ ತೋರಿಸುವಂತೆ ಪಟ್ಟು ಹಿಡಿದರು. ಗಂಟೆಗೂ ಹೆಚ್ಚು ಕಾಲ ಬೆದರಿಕೆ ಹಾಕಿದ ಆರೋಪಿಗಳು, ವಾರಂಟ್ ವಾಹನದಲ್ಲಿದೆ ಎಂದು ನೆಪ ಹೇಳಿ ಸ್ಥಳದಿಂದ ಪರಾರಿಯಾಗಿದ್ದರು.
ಸಿಕ್ಕಿಬಿದ್ದಿದ್ದು ಹೇಗೆ?
ಘಟನೆ ನಡೆದ ಕೆಲ ಹೊತ್ತಿನಲ್ಲೇ ಸಂತ್ರಸ್ತರ ತಂದೆಯ ಮೊಬೈಲ್ಗೆ ಸಿಬಿಐ ಹೆಸರಿನಲ್ಲಿ ನಕಲಿ ನೋಟಿಸ್ ಬಂದಿತ್ತು. ನಂತರ ಅದನ್ನು ಡಿಲೀಟ್ ಮಾಡಲಾಯಿತಾದರೂ, ಕುಟುಂಬದವರು ಅದಾಗಲೇ ಸ್ಕ್ರೀನ್ಶಾಟ್ ತೆಗೆದುಕೊಂಡಿದ್ದರು. ಈ ಆಧಾರದ ಮೇಲೆ ಪ್ರಶಾಂತ್ ವಿಹಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತಾಂತ್ರಿಕ ಕಣ್ಗಾವಲು ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಏಳು ಮಂದಿ ಆರೋಪಿಗಳನ್ನು ಸೆರೆಹಿಡಿದಿದ್ದಾರೆ.
ವಶಪಡಿಸಿಕೊಂಡ ವಸ್ತುಗಳು:
ಬಂಧಿತರಿಂದ ಸಿಬಿಐ ಲೋಗೋ ಹೊಂದಿರುವ ಬಟ್ಟೆಗಳು, 8 ಮೊಬೈಲ್ ಫೋನ್ಗಳು, ನಕಲಿ ಸಿಬಿಐ ಹಾಗೂ ಇಡಿ (ED) ಐಡಿ ಕಾರ್ಡ್ಗಳ ಫೋಟೋಗಳು ಮತ್ತು ವಿವಿಧೆಡೆ ನಡೆಸಿದ್ದ ನಕಲಿ ದಾಳಿಯ ವಿಡಿಯೋಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಮುಖ ಆರೋಪಿಗಳು:
ಆಸಿಫಾ (29):
ಜಮ್ಮು-ಕಾಶ್ಮೀರ ಮೂಲದ ಈಕೆ ಈ ಗ್ಯಾಂಗ್ನ ಮಾಸ್ಟರ್ ಮೈಂಡ್. ದೆಹಲಿಯಲ್ಲಿ ಹೋಟೆಲ್ ನಡೆಸಿ ನಷ್ಟ ಅನುಭವಿಸಿದ್ದ ಈಕೆಗೆ ಪೊಲೀಸ್ ಮತ್ತು ಮಿಲಿಟರಿ ಸಂಪರ್ಕಗಳಿದ್ದವು.
ಪೂಜಾ ಅಗರ್ವಾಲ್:
ಬಾರ್ ಗಾಯಕಿ. ಆಸಿಫಾ ಜೊತೆ ಸೇರಿ ನಕಲಿ ದಾಳಿಗೆ ಗ್ಯಾಂಗ್ ರೂಪಿಸಿದ್ದಳು.
ಕುಲದೀಪ್ ಶರ್ಮಾ (63):
ಮಾಜಿ ಬ್ಯಾಂಕ್ ಉದ್ಯೋಗಿ. ಸಂತ್ರಸ್ತ ಕುಟುಂಬದ ಹಣಕಾಸು ವಿವರ ಹಾಗೂ ವಿಳಾಸವನ್ನು ಗ್ಯಾಂಗ್ಗೆ ನೀಡಿದ್ದ.
ಪ್ರಕರಣ ಸಂಬಂಧ ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಈ ಗ್ಯಾಂಗ್ ನಡೆಸಿರುವ ಇತರ ನಕಲಿ ದಾಳಿಗಳ ಕುರಿತು ದೆಹಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.





Leave a comment