ನವದೆಹಲಿ: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಭಾಷಣ ಮಾಡಿದ ವೇದಿಕೆಯನ್ನು ‘ಶುದ್ಧೀಕರಣ’ಗೊಳಿಸಿದ ಘಟನೆಗೆ ಸಂಬಂಧಿಸಿದಂತೆ, ತಮ್ಮ ಬೆಂಬಲಕ್ಕೆ ನಿಲ್ಲದ ಕೆಲವು ಹಿರಿಯ ಕಾಂಗ್ರೆಸ್ ನಾಯಕರ ಬಗ್ಗೆ ಖರ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಬುಧವಾರ ನವದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ ಅವರು ತಮ್ಮ ನೋವನ್ನು ಹೊರಹಾಕಿದ್ದಾರೆ.
ಆಗಸ್ಟ್ 8ರಂದು ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ನಡೆದ ರ್ಯಾಲಿಯಲ್ಲಿ ಖರ್ಗೆ ಭಾಗವಹಿಸಿ ಭಾಷಣ ಮಾಡಿದ್ದರು. ಆದರೆ, ಎರಡು ದಿನಗಳ ನಂತರ ಆಗಸ್ಟ್ 10ರಂದು ‘ಶ್ರೀರಾಮ ಸೇನೆ’ ಎಂಬ ಬಲಪಂಥೀಯ ಸಂಘಟನೆಯೊಂದು ಆ ವೇದಿಕೆಯಲ್ಲಿ ‘ಶುದ್ಧೀಕರಣ’ ಹವನ ನಡೆಸಿತ್ತು. ಈ ಘಟನೆಯನ್ನು ತೀವ್ರವಾಗಿ ಖಂಡಿಸಿ ಬೆಂಬಲ ನೀಡಬೇಕಿದ್ದ ಅನೇಕ ಹಿರಿಯ ಕಾಂಗ್ರೆಸ್ ನಾಯಕರು ಮೌನ ವಹಿಸಿದ್ದು ತಮಗೆ ನೋವುಂಟು ಮಾಡಿದೆ ಎಂದು ಖರ್ಗೆ ಸಭೆಯಲ್ಲಿ ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಅವರು ಯಾವುದೇ ನಾಯಕರ ಹೆಸರನ್ನು ನೇರವಾಗಿ ಪ್ರಸ್ತಾಪಿಸದಿದ್ದರೂ, ಅವರ ಹಾವಭಾವವು ಅಸಮಾಧಾನವನ್ನು ಸ್ಪಷ್ಟವಾಗಿ ತೋರಿಸುತ್ತಿತ್ತು.
ಈ ಹಿಂದೆ ಸಂಸತ್ತಿನ ಮುಂಗಾರು ಅಧಿವೇಶನದ ಕೊನೆಯ ದಿನದಂದು ರಾಜ್ಯಸಭೆಯಲ್ಲೂ ಖರ್ಗೆ ಈ ವಿಷಯವನ್ನು ಪ್ರಸ್ತಾಪಿಸಿದ್ದರು. “ನಾನು ದಲಿತ ಎಂಬ ಕಾರಣಕ್ಕೆ ರಕ್ಷಣೆ ನೀಡಿ ಎಂದು ಯಾರ ಮುಂದೆಯೂ ಭಿಕ್ಷೆ ಬೇಡುವುದಿಲ್ಲ. ನಾನು ಹೋರಾಡುತ್ತೇನೆ. ಆದರೆ ಹಲ್ದ್ವಾನಿಯಲ್ಲಿ ನಡೆದ ಶುದ್ಧೀಕರಣ ಕಾರ್ಯವು ನನಗೆ ಅಸ್ಪೃಶ್ಯತೆಯ ಕಹಿಯನ್ನು ಉಂಟುಮಾಡಿದೆ ಮತ್ತು ನನ್ನನ್ನು ಅಪಮಾನಿಸಿದೆ. ಈ ಕೃತ್ಯ ಎಸಗಿದವರ ವಿರುದ್ಧ ಅಸ್ಪೃಶ್ಯತಾ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು” ಎಂದು ಅವರು ಸಂಸತ್ತಿನಲ್ಲಿ ಆಗ್ರಹಿಸಿದ್ದರು.
ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಶುದ್ಧೀಕರಣ ವಿವಾದವನ್ನು “ಸ್ವೀಕಾರಾರ್ಹವಲ್ಲದ ಕೃತ್ಯ” ಎಂದು ಖಂಡಿಸಿದ್ದು, ಇದು ಬಿಜೆಪಿಯ ದಲಿತ ವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಆರೋಪಿಸಿದ್ದಾರೆ.
ಆದರೆ, ರಾಜ್ಯಸಭೆಯಲ್ಲಿ ಖರ್ಗೆಯವರ ಆರೋಪಗಳಿಗೆ ಪ್ರತಿಕ್ರಿಯಿಸಿದ್ದ ಕೇಂದ್ರ ಸಚಿವ ಜೆ.ಪಿ. ನಡ್ಡಾ, ಈ ಘಟನೆ ದುರದೃಷ್ಟಕರ ಎಂದಿದ್ದು, ಈ ಕೃತ್ಯಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಅಲ್ಲದೆ, ಈ ಬಗ್ಗೆ ಸೂಕ್ತ ತನಿಖೆ ನಡೆಸುವ ಭರವಸೆಯನ್ನು ನೀಡಿದ್ದರು.





Leave a comment