ಹೈದರಾಬಾದ್: ತೆಲಂಗಾಣ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಾಭಿಪ್ರಾಯ ಮತ್ತೊಮ್ಮೆ ಬೀದಿಗೆ ಬಂದಿದೆ. ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರ ವಿರುದ್ಧ ಹಿರಿಯ ಸಚಿವೆ ಕೊಂಡ ಸುರೇಖಾ ಅವರ ಪುತ್ರಿ ಕೊಂಡ ಸುಶ್ಮಿತಾ ಬಹಿರಂಗ ಸವಾಲೆಸೆದಿದ್ದು, ಪಕ್ಷದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಪರಕಾಲ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ರೇವೂರಿ ಪ್ರಕಾಶ್ ರೆಡ್ಡಿ ಅವರಿಗೆ ಸಿಎಂ ರೇವಂತ್ ರೆಡ್ಡಿ ಬಹಿರಂಗವಾಗಿ ಬೆಂಬಲ ಸೂಚಿಸಿದ್ದಕ್ಕೆ ಸುಶ್ಮಿತಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ಇನ್ನೂ ಎರಡು ವರ್ಷ ಕಾಯುವುದು ಏಕೆ? ಈಗಲೇ ಅವರ ಬಳಿ ರಾಜೀನಾಮೆ ಕೊಡಿಸಿ, ಚುನಾವಣೆಗೆ ಸ್ಪರ್ಧಿಸಲು ಹೇಳಿ. ನೀವು ಬಂದರೂ, ನಿಮ್ಮ ತಂದೆ ಅಥವಾ ತಾತ ಬಂದರೂ ಪರಕಾಲದ ಶಾಸಕಿಯಾಗುವುದು ನಾನೇ” ಎಂದು ನೇರ ಸವಾಲು ಹಾಕಿದ್ದಾರೆ.
ಪಕ್ಷ ಟಿಕೆಟ್ ನೀಡದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿರುವ ಅವರು, ಸಿಎಂ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. ಈ ಬೆಳವಣಿಗೆಯಿಂದ ಎಚ್ಚೆತ್ತುಕೊಂಡಿರುವ ತೆಲಂಗಾಣ ಕಾಂಗ್ರೆಸ್ ಶಿಸ್ತು ಸಮಿತಿಯು, ಸಚಿವೆ ಕೊಂಡ ಸುರೇಖಾ ಅವರಿಗೆ ವಿವರಣೆ ನೀಡುವಂತೆ ಸೂಚಿಸಿ ಮೂರು ದಿನಗಳ ಗಡುವು ನೀಡಿದೆ.





Leave a comment