ಪುಣೆ: ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಆಗಸ್ಟ್ 22 ರಂದು ಮಹಾರಾಷ್ಟ್ರದ ಪುಣೆಯಲ್ಲಿ ನಡೆಯಲಿರುವ ‘ಛಾತ್ರೋಂ ಕೀ ಗೂಂಜ್’ (Chhatron Ki Gunj) ಕಾರ್ಯಕ್ರಮಕ್ಕೆ ಪುಣೆ ಪೊಲೀಸರು ಶರತ್ತುಬದ್ಧ ಅನುಮತಿ ನೀಡಿದ್ದಾರೆ. ಸಾರ್ವಜನಿಕ ಶಾಂತಿ ಮತ್ತು ಭದ್ರತೆಯ ಹಿತದೃಷ್ಟಿಯಿಂದ ಪೊಲೀಸರು ಆಯೋಜಕರಿಗೆ ಬರೋಬ್ಬರಿ 30 ಕಠಿಣ ನಿಯಮಗಳನ್ನು ವಿಧಿಸಿದ್ದಾರೆ.
ಪುಣೆಯ ಆರ್‌ಟಿಒ ಚೌಕ್ ಬಳಿಯ ಎಸ್‌ಎಸ್‌ಪಿಎಂಎಸ್ ಕಾಲೇಜು ಮೈದಾನದಲ್ಲಿ ಸಂಜೆ 4:30 ರಿಂದ ರಾತ್ರಿ 9:30 ರವರೆಗೆ ಈ ಸಮಾವೇಶ ನಡೆಯಲಿದೆ. ಈ ಕಾರ್ಯಕ್ರಮವು ಮುಖ್ಯವಾಗಿ ವಿದ್ಯಾರ್ಥಿನಿಯರಿಗಾಗಿ ಆಯೋಜಿಸಲಾಗಿದ್ದು, ಶಿಕ್ಷಣ, ಭದ್ರತೆ, ಸಮಾನತೆ ಮತ್ತು ಉದ್ಯೋಗಾವಕಾಶಗಳ ಬಗ್ಗೆ ಚರ್ಚೆ ನಡೆಯಲಿದೆ. ಸುಮಾರು 8,000 ದಿಂದ 10,000 ಜನರು ಭಾಗವಹಿಸುವ ನಿರೀಕ್ಷೆಯಿದೆ.
ಪೊಲೀಸರು ವಿಧಿಸಿರುವ ಪ್ರಮುಖ ಷರತ್ತುಗಳು:
ಆಕ್ಷೇಪಾರ್ಹ ಬ್ಯಾನರ್ ನಿಷೇಧ: ಯಾವುದೇ ವಿವಾದಾತ್ಮಕ ಅಥವಾ ಆಕ್ಷೇಪಾರ್ಹ ಚಿತ್ರಗಳು, ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳನ್ನು ಪ್ರದರ್ಶಿಸುವಂತಿಲ್ಲ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಾರದಂತೆ ಎಚ್ಚರ: ಯಾವುದೇ ಧರ್ಮ ಅಥವಾ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ಆಯೋಜಕರದ್ದಾಗಿರುತ್ತದೆ.
ಖಾಸಗಿ ಭದ್ರತೆ ಮತ್ತು ಮಹಿಳಾ ಸ್ವಯಂಸೇವಕರು: ಮಹಿಳಾ ಸೆಕ್ಯೂರಿಟಿ ಗಾರ್ಡ್‌ಗಳು ಹಾಗೂ ಗರಿಷ್ಠ ಸಂಖ್ಯೆಯ ಮಹಿಳಾ ಸ್ವಯಂಸೇವಕರನ್ನು ನೇಮಿಸಬೇಕು. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಆಸನ ಮತ್ತು ಶೌಚಾಲಯ ವ್ಯವಸ್ಥೆ ಮಾಡಬೇಕು.
ಸಿಸಿಟಿವಿ ಮತ್ತು ಡ್ರೋನ್ ನಿಷೇಧ: ಕಾರ್ಯಕ್ರಮ ಸ್ಥಳದಾದ್ಯಂತ ಹಗಲು-ರಾತ್ರಿ ಕಾರ್ಯನಿರ್ವಹಿಸುವ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಡ್ರೋನ್ ಕ್ಯಾಮೆರಾಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಧ್ವನಿವರ್ಧಕ ನಿಯಂತ್ರಣ: ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳು ಮತ್ತು ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಸಮಾವೇಶದ ವೇಳೆ ಯಾವುದೇ ಅಹಿತಕರ ಘಟನೆಗಳು ಸಂಭವಿಸಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಬಂದಲ್ಲಿ ಆಯೋಜಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಮೋಹನ್ ಜೋಶಿ, ಪೊಲೀಸರು ವಿಧಿಸಿರುವ ಎಲ್ಲಾ 30 ಷರತ್ತುಗಳನ್ನು ಸಂಪೂರ್ಣವಾಗಿ ಪಾಲಿಸಲಾಗುವುದು ಎಂದು ತಿಳಿಸಿದ್ದಾರೆ.





Leave a comment