ದಾವಣಗೆರೆ: ಗ್ರಾಹಕರ ಅನುಮತಿಯಿಲ್ಲದೆ ಖಾತೆಯಿಂದ ಹಣ ಕಡಿತಗೊಂಡು, ದೂರು ನೀಡಿದರೂ ಬಾಕಿ ಹಣ ಹಿಂತಿರುಗಿಸದೆ ಸೇವಾ ನ್ಯೂನತೆ ಎಸಗಿದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವಿರುದ್ಧ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಮಹತ್ವದ ತೀರ್ಪು ನೀಡಿದ್ದು, ಬಡ್ಡಿ ಸಮೇತ ಹಣ ಪಾವತಿಸಲು ಮತ್ತು ದಂಡ ವಿಧಿಸಿ ಆದೇಶಿಸಿದೆ.
ಪ್ರಕರಣದ ವಿವರ:
ಶಿವಮೊಗ್ಗ ನಗರದ ನಂದಿನಿ ಬಡಾವಣೆಯ ನಿವಾಸಿ ಶ್ರೀಮತಿ ಜೂಲಿ ಎಸ್.ಪಿ. ಅವರು ವಿನೋಬನಗರದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದರು. 2024 ರ ಮೇ 3, ರಂದು ಅವರ ಖಾತೆಯಿಂದ ಮೂರು ಬಾರಿ ವ್ಯವಹಾರ ನಡೆದು ಒಟ್ಟು ರೂ.7,00,000 ಕಡಿತವಾಗಿರುವ ಬಗ್ಗೆ ಮೊಬೈಲ್ಗೆ ಸಂದೇಶ ಬಂದಿತ್ತು. ತಾವು ಯಾವುದೇ ಒಟಿಪಿ ಹಂಚಿಕೊಳ್ಳದಿದ್ದರೂ ಹಾಗೂ ಯಾವುದೇ ವ್ಯವಹಾರ ಮಾಡದಿದ್ದರೂ ಹಣ ಕಡಿತವಾಗಿದ್ದರಿಂದ, ದೂರುದಾರರು ತಕ್ಷಣವೇ ಬ್ಯಾಂಕ್ ವ್ಯವಸ್ಥಾಪಕರನ್ನು ಸಂಪರ್ಕಿಸಿ ಹಣ ಮರುಜಮೆ ಮಾಡುವಂತೆ ಮನವಿ ಮಾಡಿದ್ದರು.
ಬ್ಯಾಂಕ್ ಕಡೆಯಿಂದ ಸೂಕ್ತ ಸ್ಪಂದನೆ ಸಿಗದಿದ್ದಾಗ, ಅವರು 2024 ರ ಅಕ್ಟೋಬರ್ 25 ರಂದು ಕಾನೂನು ನೋಟೀಸ್ ನೀಡಿದ್ದರು. ತದನಂತರ ಬ್ಯಾಂಕ್ 2024 ರ ನವೆಂಬರ್ 30 ರಂದು ರೂ.2,33,333 ಗಳನ್ನು ಮಾತ್ರ ದೂರುದಾರರ ಖಾತೆಗೆ ಜಮಾ ಮಾಡಿ, ಉಳಿದ ಮೊತ್ತವನ್ನು ಹಿಂತಿರುಗಿಸಿರಲಿಲ್ಲ. ಈ ಕುರಿತು ಗ್ರಾಹಕರು ಶಿವಮೊಗ್ಗ ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಆಯೋಗದ ತೀರ್ಪು;
ದೂರುದಾರರು ಸಲ್ಲಿಸಿದ ಪ್ರಮಾಣಪತ್ರ, ದಾಖಲೆಗಳು ಹಾಗೂ ಉಭಯ ಪಕ್ಷಗಳ ವಾದ-ವಿವಾದಗಳನ್ನು ಆಲಿಸಿದ ಆಯೋಗವು ಬ್ಯಾಂಕ್ ಕಡೆಯಿಂದ ಸೇವಾ ನ್ಯೂನತೆಯಾಗಿದೆ ಎಂದು ತೀರ್ಮಾನಿಸಿ, ಭಾಗಶಃ ದೂರು ಪುರಸ್ಕರಿಸಿ ಆ. 14 ರಂದು ಆದೇಶ ಹೊರಡಿಸಿದೆ.
ಬ್ಯಾಂಕ್ನಿಂದ ಗ್ರಾಹಕರಿಗೆ ಬರಬೇಕಾದ ಬಾಕಿ ಮೊತ್ತ ರೂ.4,66,667 ಗಳನ್ನು 2024 ರ ಅಕ್ಟೋಬರ್ 25 ರಿಂದ ಅನ್ವಯವಾಗುವಂತೆ ವಾರ್ಷಿಕ ಶೇ. 8 ರಷ್ಟು ಬಡ್ಡಿಯೊಂದಿಗೆ 45 ದಿನಗಳ ಒಳಗೆ ಪಾವತಿಸಬೇಕು.
ನಷ್ಟ ಪರಿಹಾರ:
ಮಾನಸಿಕ ಕಿರುಕುಳ ಮತ್ತು ವೇದನೆಗಾಗಿ ರೂ.25,000 ಹಾಗೂ ವ್ಯಾಜ್ಯದ ವೆಚ್ಚವಾಗಿ ರೂ.10,000 ಗಳನ್ನು 45 ದಿನಗಳ ಒಳಗೆ ಪಾವತಿಸತಕ್ಕದ್ದು. ನಿಗದಿತ 45 ದಿನಗಳ ಒಳಗೆ ಮೊತ್ತ ಪಾವತಿಸಲು ವಿಫಲವಾದಲ್ಲಿ, ಸಂಪೂರ್ಣ ಮೊತ್ತಕ್ಕೆ ವಾರ್ಷಿಕ ಶೇ. 10 ರಷ್ಟು ಬಡ್ಡಿ ಸೇರಿಸಿ ಪೂರ್ತಿ ಹಣ ಪಾವತಿಸುವವರೆಗೆ ನೀಡುವುದು ಕಡ್ಡಾಯ. ಆಯೋಗದ ಅಧ್ಯಕ್ಷರಾದ ಟಿ. ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ. ಯೋಗಾನಂದ ಭಾಂಡ್ಯ ಅವರಿದ್ದ ಪೀಠವು ಈ ಆದೇಶ ನೀಡಿದೆ.





Leave a comment