Home ದಾವಣಗೆರೆ 6.5 ಕೋಟಿ ರೂ. ಫ್ಲಾಟ್‌ “ಪ್ಯೂರ್ ವೆಜ್” ವಿವಾದ: ಅಮಿತ್ ಠಾಕ್ರೆ ಭೇಟಿ ಬೆನ್ನಲ್ಲೇ ಕ್ಷಮೆಯಾಚಿಸಿದ ರಿಯಲ್ ಎಸ್ಟೇಟ್ ಏಜೆಂಟ್!
ದಾವಣಗೆರೆಕ್ರೈಂ ನ್ಯೂಸ್ಬೆಂಗಳೂರು

6.5 ಕೋಟಿ ರೂ. ಫ್ಲಾಟ್‌ “ಪ್ಯೂರ್ ವೆಜ್” ವಿವಾದ: ಅಮಿತ್ ಠಾಕ್ರೆ ಭೇಟಿ ಬೆನ್ನಲ್ಲೇ ಕ್ಷಮೆಯಾಚಿಸಿದ ರಿಯಲ್ ಎಸ್ಟೇಟ್ ಏಜೆಂಟ್!

Share
ರಿಯಲ್ ಎಸ್ಟೇಟ್
Share

ಮುಂಬೈ: ದಕ್ಷಿಣ ಮುಂಬೈನ ಐಷಾರಾಮಿ ಪ್ರದೇಶವಾದ ತಾಡ್‌ದೇವ್‌ನಲ್ಲಿರುವ 6.5 ಕೋಟಿ ರೂಪಾಯಿ ಮೌಲ್ಯದ 2-BHK ಫ್ಲಾಟ್‌ಗೆ ಕೇವಲ “ಪ್ಯೂರ್ ವೆಜಿಟೇರಿಯನ್” (ಶುದ್ಧ ಸಸ್ಯಾಹಾರಿ) ಗ್ರಾಹಕರು ಮಾತ್ರ ಸಂಪರ್ಕಿಸಬೇಕೆಂದು ಜಾಹೀರಾತು ನೀಡಿ ವಿವಾದಕ್ಕೀಡಾಗಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಭಾವೇಶ್ ಕಾವರೆ ಕೊನೆಗೂ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.

ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಪ್ರಧಾನ ಕಚೇರಿಯಾದ ‘ಶಿವತೀರ್ಥ’ದಲ್ಲಿ ಎಂಎನ್‌ಎಸ್ ನಾಯಕ ಅಮಿತ್ ಠಾಕ್ರೆ ಅವರನ್ನು ಭೇಟಿಯಾದ ಬಳಿಕ ಭಾವೇಶ್ ಈ ಕ್ಷಮೆಯಾಚನೆ ಮಾಡಿದ್ದಾರೆ. ಫ್ಲಾಟ್‌ ಪ್ರಚಾರದ ವಿಡಿಯೋ ವೈರಲ್ ಆಗುತ್ತಿದ್ದಂತೆ ಮುಂಬೈನಲ್ಲಿ ಆಹಾರ ಪದ್ಧತಿ ಆಧಾರಿತ ತಾರತಮ್ಯದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಅಮಿತ್ ಠಾಕ್ರೆ ಭೇಟಿಯ ವೇಳೆ ಭಾವೇಶ್‌ಗೆ ತೀವ್ರ ತರಾಟೆಗೆ ತೆಗೆದುಕೊಂಡರು. “ಮುಂಬೈ ಈಗಾಗಲೇ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ, ಇಂತಹ ಅನಗತ್ಯ ವಿಷಯಗಳನ್ನು ಎತ್ತಿ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಅಗತ್ಯವಿಲ್ಲ” ಎಂದು ಗದರಿದರು.

ಏಜೆಂಟ್ ಸ್ಪಷ್ಟನೆ ಮತ್ತು ಕ್ಷಮೆ:

ಭೇಟಿಯ ನಂತರ ಮಾತನಾಡಿದ ಭಾವೇಶ್, “ನನ್ನ ಹೇಳಿಕೆಯಿಂದ ಮುಂಬೈಕರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಅಮಿತ್ ಠಾಕ್ರೆ ಅವರಿಗೂ ಕ್ಷಮೆಯಾಚಿಸುತ್ತೇನೆ. ಈ ವಿಚಾರವನ್ನು ಇಲ್ಲಿಗೆ ಮುಗಿಸಿ, ಕಾನೂನು ಪ್ರಕಾರ ಮುಂದುವರಿಯುತ್ತೇನೆ” ಎಂದಿದ್ದಾರೆ.

“ನಾನು ಮರಾಠಿ ಜನರಿಗೆ ಮನೆ ನೀಡುತ್ತಿದ್ದೇನೆ ಮತ್ತು ನೀಡುತ್ತಲೇ ಇರುತ್ತೇನೆ. ನನ್ನ ಬಳಿ ಚಿಕನ್ ಅಂಗಡಿಗಳೂ ಇವೆ, ಅಲ್ಲಿಗೆ ಬರುವ ಗ್ರಾಹಕರಲ್ಲೂ ನಾನು ಕ್ಷಮೆ ಕೇಳುತ್ತೇನೆ” ಎಂದು ವಿಚಿತ್ರ ಸಮಜಾಯಿಷಿ ನೀಡಿದ್ದಾರೆ.

ವೈರಲ್ ಆಗಿದ್ದ ವಿಡಿಯೋದಲ್ಲಿ ತಾಡ್‌ದೇವ್‌ನ 900 ಚದರ ಅಡಿಯ ಈ ಮನೆಗೆ ಸಸ್ಯಾಹಾರಿಗಳಷ್ಟೇ ಸಂಪರ್ಕಿಸಬೇಕು ಎಂದಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ “ಮನೆ ಖರೀದಿಸಿದ ಮೇಲೆಯೂ ಅಡುಗೆಮನೆಯನ್ನು ಪರಿಶೀಲಿಸುತ್ತೀರಾ?” ಎಂದು ನೆಟ್ಟಿಗರು ಪ್ರಶ್ನಿಸಿದ್ದರು. ತೀವ್ರ ವಿರೋಧದ ನಂತರ ಭಾವೇಶ್ ಆ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles