SUDDIKSHANA KANNADA NEWS/ DAVANAGERE/ DATE:16-01-2025
ದಾವಣಗೆರೆ: ನಗರದ ಗಾಂಧಿನಗರದಲ್ಲಿ ಮಹಿಳೆಯೊಬ್ಬರ ಹತ್ಯೆ ಪ್ರಕರಣ ಸಂಬಂಧ ಘಟನೆ ನಡೆದ 24ಗಂಟೆಯೊಳಗೆ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಸ್.ಪಿ.ಎಸ್ ನಗರದ 8 ಕ್ರಾಸ್ ವಾಸಿಯಾದ ಮುಬೀನಾ ಬಾನು (35) ಹತ್ಯೆಗೊಳಗಾದ ಮಹಿಳೆ. ಬಾಷಾ ನಗರದ ಆಟೋ ಚಾಲಕ ನೂರ್ ಅಹಮದ್ ಅಲಿಯಾಸ್ ಶಾರು ಬಂಧಿತ ಆರೋಪಿ.
ಘಟನೆ ಹಿನ್ನೆಲೆ ಏನು..?
ಜನವರಿ 14ರಂದು ರಾತ್ರಿ ಸುಮಾರು 11 ಗಂಟೆ ಸಮಯದಲ್ಲಿ ಎಸ್.ಪಿ.ಎಸ್ ನಗರದ 8 ಕ್ರಾಸ್ ವಾಸಿಯಾದ ಮುಬೀನಾ ಬಾನು (35) ಮನೆಗೆ ಪರಿಚಯಸ್ಥನಾದ ಆರೋಪಿ ನೂರ್ ಅಹಮದ್ ಅಲಿಯಾಸ್ ಶಾರು ಬಂದಿದ್ದ. ಮುಬೀನಾ ಬಾನು ಜೊತೆ ಮಾತನಾಡುವಾಗ ಆಕೆಯು ನಾನು ಕೊಟ್ಟಿರುವ ಹಣ ವಾಪಸ್ ಕೊಡು ಅಂತಾ ಕೇಳಿದ್ದಕಾಳೆ. ಇದರಿಂದ ಕುಪಿತಗೊಂಡ ನೂರ್ ಅಹಮದ್ ಅಲಿಯಾಸ್ ಶಾರು ಮೃತಳ ಬಾಯಿ ಮುಚ್ಚಿ ಎಳದಾಡಿದ್ದ. ಥಳಿಸಿದ್ದ. ರೂಂಗೆ ಎಳೆದುಕೊಂಡು ಹೋಗಿದ್ದ.
ಆಗ ಮುಬೀನಾ ಬಾನು ಪ್ರಜ್ಞೆ ತಪ್ಪಿದ್ದಳು. ಇದರಿಂದ ಹೆದರಿದ ಹಂತಕನು ಮೃತಪಟ್ಟಿದ್ದ ಆಕೆಯನ್ನು ಮನೆಯ ಮೇಲ್ಚಾವಣಿಯ ಕಬ್ಬಿಣದ ಆರ್ಸಿಸಿ ಹುಕ್ಕಿಗೆ ಒಂದು ಪ್ಲಾಸ್ಟಿಕ್ ಹಗ್ಗದಿಂದ ನೇಣು ಹಾಕಿ ಕುತ್ತಿಗೆಗೆ ಹಗ್ಗವನ್ನು
ಸುತ್ತಿ ಮೇಲಕ್ಕೆ ಎಳೆದು ಗಂಟು ಹಾಕಿ ಪಕ್ಕದಲ್ಲಿ ಒಂದು ಚೇರ್ ಇಟ್ಟು ಪರಾರಿಯಾಗಿದ್ದ. ಈ ಬಗ್ಗೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿನ ಆರೋಪಿತನ ಪತ್ತೆ ಹಾಗೂ ತನಿಖೆಗೆ ಪೊಲೀಸ್ ಅಧೀಕ್ಷಕಿ ಉಮಾಪ್ರಶಾಂತ್ ಮತ್ತು ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ವಿಜಯಕುಮಾರ ಎಂ. ಸಂತೋಷ್ ಮತ್ತು ಮಂಜುನಾಥ ಜಿ. ಹಾಗೂ ದಾವಣಗೆರೆ ನಗರ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕ ಮಲ್ಲೇಶ್ ದೊಡ್ಮನಿ ಮಾರ್ಗದರ್ಶನದಲ್ಲಿ ಆಜಾದ್ ನಗರ ವೃತ್ತದ ಬಾಲಚಂದ್ರನಾಯ್ಕ್ ಎಸ್. ಅವರು ಗಾಂಧಿ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಲಲಿತಮ್ಮ ಮತ್ತು ಎ.ಎಸ್.ಐ ಮಹಮ್ಮದ್ ಖಾನ್, ಮಂಜುನಾಥ್, ಶಶಿಕುಮಾರ್, ಶಫಿವುಲ್ಲಾ, ಸಿದ್ದಾಕಲಿ, ಮಹೇಶ್, ಅರುಣಕುಮಾರ್, ಸುರೇಶ್, ಯೋಗೇಶ್, ಸಿದ್ದೇಶ್, ಜಿಲ್ಲಾ ಪೊಲೀಸ್ ಕಛೇರಿಯ ರಾಘವೇಂದ್ರ,ನಾಗರಾಜ್ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.
ಜನವರಿ 15ರಂದು ಆರೋಪಿತ ನೂರ್ಅಹಮದ್ ನನ್ನು ದಸ್ತಗಿರಿ ಮಾಡಿ ತನಿಖೆ ಕೈಗೊಳ್ಳಲಾಗಿದೆ. ಆರೋಪಿತನನ್ನು ಘನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಹಾಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಮೃತ ಮುಬೀನಾ ಬಾನುವಿನ ಪರಿಚಯಸ್ಥನಾದ ನೂರ್ ಅಹಮದ್ ಅಲಿಯಾಸ್ ಶಾರು ಮೃತ ಮುಬೀನಾ ಬಾನುವಿನ ಬಳಿ 20 ಸಾವಿರ ರೂಪಾಯಿ ಸಾಲವಾಗಿ ಪಡೆದಿದ್ದ.ಹಣ ವಾಪಸ್ ಕೇಳಿದ್ದು, ಇದೇ ವಿಷಯದಲ್ಲಿ ಇಬ್ಬರ ನಡುವೆ ವಾಗ್ವಾದ ಆಗಿತ್ತು. ಈ ಸಮಯದಲ್ಲಿ ಆರೋಪಿತ ನೂರ್ ಅಹಮದ್ ನು ಮುಬೀನ ಬಾನು ಗೆ ಹಲ್ಲೆ ಮಾಡಿದ್ದು ಆ ಸಮಯದಲ್ಲಿ ಮೃತಳು ಮೂರ್ಚೆ ಹೋಗಿದ್ದಳು.ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಲು ಈತನೇ ನೇಣು ಹಾಕಿದ್ದು ವಿಚಾರಣೆ ವೇಳೆ ತಿಳಿದು ಬಂದಿದೆ.
ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಪೊಲೀಸ್ ಅಧೀಕ್ಷಕಿ ಉಮಾಪ್ರಶಾಂತ್ ಅಭಿನಂದಿಸಿದ್ದಾರೆ.