SUDDIKSHANA KANNADA NEWS/ DAVANAGERE/ DATE:10-01-2025
ಮೀರತ್: ಉತ್ತರ ಪ್ರದೇಶದ ಮೀರತ್ನಲ್ಲಿ ಮೂವರು ಮಕ್ಕಳು ಸೇರಿದಂತೆ ಐವರ ಕುಟುಂಬದವರು ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ.
ಲಿಸಾಡಿ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ತಮ್ಮ ನಿವಾಸದಲ್ಲಿ ದಂಪತಿ ಮತ್ತು ಅವರ ಮೂವರು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ರಾತ್ರಿ ಸ್ಥಳಕ್ಕೆ ಭೇಟಿ ನೀಡಿದ ಮೀರತ್ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ವಿಪಿನ್ ತಾಡಾ, ಬೀಗ ಹಾಕಿರುವ ಮನೆಯ ಬಗ್ಗೆ ಪೊಲೀಸರಿಗೆ ಕರೆ ಬಂದಿತ್ತು. ಸ್ಥಳಕ್ಕೆ ಬಂದ ಅಧಿಕಾರಿಗಳು ಮನೆಗೆ ಹೊರಗಿನಿಂದ ಬೀಗ ಹಾಕಿರುವುದು ಗೊತ್ತಾಗಿದೆ ಎಂದರು. “ಛಾವಣಿಯ ಮೂಲಕ ಮನೆಯೊಳಗಡೆ ಹೋಗಲಾಯಿತು. ಮೊಯಿನ್, ಅವರ ಪತ್ನಿ ಅಸ್ಮಾ ಮತ್ತು ಅವರ ಮೂವರು ಹೆಣ್ಣುಮಕ್ಕಳ ಶವಗಳು ಪತ್ತೆಯಾಗಿವೆ. ಅಫ್ಸಾ (8), ಅಜೀಜಾ (4) ಮತ್ತು ಆದಿಬಾ (1),” ಮೃತಪಟ್ಟವರು ಎಂದು ತಿಳಿದು ಬಂದಿದೆ.
“ಮನೆಗೆ ಬೀಗ ಹಾಕಿರುವ ರೀತಿ ಗಮನಿಸಿದರೆ ಇದೊಂದು ಕೊಲೆ ರೀತಿ ಕಂಡು ಬರುತ್ತಿದೆ. ವ್ಯಕ್ತಿಯು ಕುಟುಂಬಕ್ಕೆ ತಿಳಿದಿರುವ ವ್ಯಕ್ತಿಯೇ ಈ ಕೃತ್ಯ ಎಸಗಿರಬಹುದು” ಎಂದು ಅವರು ಹೇಳಿದರು. ಕೊಲೆಗೆ ವೈಯಕ್ತಿಕ ದ್ವೇಷ ಇರಬಹುದು ಎಂದು ಶಂಕಿಸಲಾಗಿದ್ದು, ಈ ಬಗ್ಗೆ ತನಿಖೆ ಮುಂದುವರಿದಿದೆ. ಫೊರೆನ್ಸಿಕ್ ವರದಿ ಬಂದ ಬಳಿಕ ಕೊಲೆಯೋ ಅಥವಾ ಆತ್ಮಹತ್ಯೆ ಏನಾದರೂ ಮಾಡಿಕೊಂಡಿರಬಹುದೇ ಎಂಬುದು ಗೊತ್ತಾಗಲಿದೆ.
ಮೃತರಲ್ಲಿ ಒಬ್ಬರ ಕಾಲುಗಳನ್ನು ಬೆಡ್ಶೀಟ್ನಿಂದ ಕಟ್ಟಿರುವುದು ಪತ್ತೆಯಾಗಿದ್ದು, ವಿಧಿವಿಜ್ಞಾನ ತಂಡವು ಸ್ಥಳಕ್ಕೆ ಆಗಮಿಸಿದೆ. ಹಿರಿಯ ಅಧಿಕಾರಿಗಳು ಸ್ಥಳದಿಂದ ಸಾಕ್ಷ್ಯ ಕಲೆ ಹಾಕುತ್ತಿದ್ದಾರೆ. ಕುಟುಂಬವು ಇತ್ತೀಚೆಗೆ ಈ ಪ್ರದೇಶಕ್ಕೆ ತೆರಳಿದ್ದು,
ಹೆಚ್ಚಿನ ವಿವರಗಳನ್ನು ಕಲೆಹಾಕಲಾಗುತ್ತಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿರುವ ಮೊಯಿನ್ ಹಾಗೂ ಆತನ ಪತ್ನಿ ಅಸ್ಮಾ ಬುಧವಾರದಿಂದ ನಾಪತ್ತೆಯಾಗಿದ್ದರು. ಮೊಯಿನ್ ಅವರ ಸಹೋದರ ಸಲೀಂ ಈ ಭಯಾನಕ ದೃಶ್ಯವನ್ನು ಮೊದಲು ನೋಡಿದರು. ತನ್ನ ಸಹೋದರನ ಇರುವಿಕೆಯ ಬಗ್ಗೆ ತೀವ್ರ ಕಳವಳಗೊಂಡ ಸಲೀಂ ತನ್ನ ಹೆಂಡತಿಯೊಂದಿಗೆ ಮೊಯಿನ್ ಮನೆಗೆ ಬಂದನು. ಬಾಗಿಲು ತೆರೆಯಲು ಹಲವಾರು ವಿಫಲ ಪ್ರಯತ್ನಗಳ ನಂತರ, ಅವರು ನೆರೆಹೊರೆಯವರ ಸಹಾಯದಿಂದ ಬಾಗಿಲು ಹೊಡೆದು ಒಳಗಡೆ ಬಂದಿದ್ದಾರೆ.
ಮೊಯಿನ್ ಮತ್ತು ಅಸ್ಮಾ ಅವರ ಮೃತದೇಹಗಳು ನೆಲದ ಮೇಲೆ ಬಿದ್ದಿತ್ತು. ಮಕ್ಕಳ ಶವಗಳನ್ನು ಹಾಸಿಗೆಯ ಪೆಟ್ಟಿಗೆಯಲ್ಲಿ ಮರೆಮಾಡಲಾಗಿತ್ತು.