ದಾವಣಗೆರೆ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ “ಡ್ರಗ್ಸ್ ಅಡಿಟ್”ಮತ್ತು ವಂಶವನ್ನು ಧ್ವಂಸ ಮಾಡುವ ಬಹಿರಂಗ ಹೇಳಿಕೆ ನೀಡಿರುವ ಉಡುಪಿ ಬಿಜೆಪಿ ಶಾಸಕ ಯಶಪಾಲ್ ಸುವರ್ಣಗೆ ತಲೆ ಕೆಟ್ಟಿದೆ. ದ್ವೇಷ ಭಾಷಣ ಮಾಡಿ ಜನಪ್ರತಿನಿಧಿ ಎಂಬುದನ್ನೇ ಮರೆತಂತೆ ಮಾತನಾಡಿದ್ದು, ಕೂಡಲೇ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಆಗ್ರಹಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಉಡುಪಿಯಲ್ಲಿ ನೀಟ್ ಕುರಿತು ಬಿಜೆಪಿ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ್ದ ಯಶ್‌ಪಾಲ್ ಸುವರ್ಣ ದ್ವೇಷಪೂರಿತ ಭಾಷಣ ಮಾಡಿ ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆಲ್ಲ ಅವಕಾಶ ನೀಡಬಾರದು. ಯಶಪಾಲ್ ಸುವರ್ಣ ವಿರುದ್ಧ ಕಠಿಣ ಕಾನೂನು ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬಾಬ್ರಿ ಮಸೀದಿ ಧ್ವಂಸ ವಿಚಾರ ಪ್ರಸ್ತಾಪಿಸಿ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಯಶಪಾಲ್ ಸುವರ್ಣ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಉದ್ದೇಶಿಸಿ ಅವಹೇಳನಕಾರಿ ಪದಗಳನ್ನು ಬಳಸಿರುವುದು ನಾಚಿಕೆಗೇಡಿನ ವಿಚಾರ. ವಿವಿಧ ಸಮುದಾಯಗಳ ಮಧ್ಯೆ ದ್ವೇಷ ಮತ್ತು ಉದ್ವಿಗ್ನತೆ ಉಂಟು ಮಾಡುವಂಥ ಭಾಷಣ ಮಾಡಿದ್ದಾರೆ. ಬಿಜೆಪಿ ಪಕ್ಷದ ಶಿಸ್ತು, ಸಂಸ್ಕೃತಿ ಇದೆನಾ? ಸಭ್ಯತೆ ಅಂದರೆ ಅವಹೇಳನಕಾರಿಯಾಗಿ ಹೇಳಿಕೆ ನೀಡುವುದು, ಕುಟುಂಬ ನಾಶ ಮಾಡುತ್ತೇವೆಂಬ ಬೆದರಿಕೆ ಜನಪ್ರತಿನಿಧಿಯಾಗಿ ಹಾಕುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ನಾಯಕರು ನಾಲಗೆ ಹರಿಬಿಡುವುದು ಇದೇ ಮೊದಲಲ್ಲ. ವಿಧಾನಪರಿಷತ್ ಸದಸ್ಯ ಸಿ. ಟಿ. ರವಿ ನೀಟ್ ಪ್ರತಿಭಟನೆಯ ಸಂದರ್ಭದಲ್ಲಿ ಘಟನೆಯೊಂದನ್ನು ಉಲ್ಲೇಖಿಸಿ ಮುಲ್ಲಾಗಳ ಎದೆ ಸೀಳಿದ್ರೆ 3 ಅಕ್ಷರವಿಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಆರೋಪ, ಟೀಕೆ ಮಾಡಲಿ. ಆದರೆ ಸಮುದಾಯ, ಧರ್ಮದವರನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ. ಬಿಜೆಪಿ ಶಾಸಕರು, ನಾಯಕರು ಇದೇ ಧೋರಣೆ ಮುಂದುವರಿಸಿದರೆ ಮುಂಬರುವ ಚುನಾವಣೆಗಳಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸೈಯದ್ ಖಾಲಿದ್ ಅಹ್ಮದ್ ಅವರು ಭವಿಷ್ಯ ನುಡಿದಿದ್ದಾರೆ.





Leave a comment