Home ದಾವಣಗೆರೆ ಸೋನಮ್ ವಾಂಗ್‌ಚುಕ್ ಬೇಡಿಕೆ ಈಡೇರಿಸಬೇಕಿದ್ದ ಕೇಂದ್ರ ಸರ್ಕಾರದ ಬಲವಂತದ ಕ್ರಮ ಅಸಮರ್ಥನೀಯ: ಸೈಯದ್ ಖಾಲಿದ್ ಅಹ್ಮದ್ ಆಕ್ರೋಶ
ದಾವಣಗೆರೆನವದೆಹಲಿಬೆಂಗಳೂರು

ಸೋನಮ್ ವಾಂಗ್‌ಚುಕ್ ಬೇಡಿಕೆ ಈಡೇರಿಸಬೇಕಿದ್ದ ಕೇಂದ್ರ ಸರ್ಕಾರದ ಬಲವಂತದ ಕ್ರಮ ಅಸಮರ್ಥನೀಯ: ಸೈಯದ್ ಖಾಲಿದ್ ಅಹ್ಮದ್ ಆಕ್ರೋಶ

Share
ಕೇಂದ್ರ ಸರ್ಕಾರ
Share

ದಾವಣಗೆರೆ: ನೀಟ್ ಪತ್ರಿಕೆ ಸೋರಿಕೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮ ವಿರೋಧಿಸಿ ಅನಿರ್ದಿಷ್ಟಾವಧಿ ಹಸಿವು ಮುಷ್ಕರ ನಡೆಸುತ್ತಿದ್ದ ಖ್ಯಾತ ಪರಿಸರ ಮತ್ತು ಶಿಕ್ಷಣ ತಜ್ಞ ಸೋನಮ್ ವಾಂಗ್‌ಚುಕ್ ಅವರಿಗೆ ದೇಶದ ಜನರ ಬೆಂಬಲ ಇದೆ. ಕೋಟ್ಯಂತರ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿರುವ ಕೇಂದ್ರ ಸರ್ಕಾರದ ನಡೆ ಸಮರ್ಥನೀಯವಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕ್ರಮ ಖಂಡನೀಯ ಎಂದು ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸೋನಮ್ ವಾಂಗ್‌ಚುಕ್ ಅವರನ್ನು ಪ್ರತಿಭಟನಾ ಸ್ಥಳದಿಂದ ಬಲವಂತವಾಗಿ ತೆರವುಗೊಳಿಸಿದ್ದಲ್ಲದೇ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೇಡಿಕೆ ಈಡೇರಿಸುವ ಬಗ್ಗೆ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರ ಹೋರಾಟ ಹತ್ತಿಕ್ಕಲು ಮುಂದಾಗಿರುವುದನ್ನು ಪ್ರತಿಯೊಬ್ಬರೂ ವಿರೋಧಿಸಲೇಬೇಕು. ನರೇಂದ್ರ ಮೋದಿ ಸರ್ಕಾರದ ಮೂಲ ಸಿದ್ಧಾಂತಗಳೇ ‘ಅಸತ್ಯ ಮತ್ತು ಹಿಂಸೆ’. ಶಾಂತಿಯುತವಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಮ್ ವಾಂಗ್‌ಚುಕ್ ಅವರನ್ನು ಜಂತರ್ ಮಂತರ್‌ನಿಂದ ತೆರವುಗೊಳಿಸಿರುವುದು ತಪ್ಪು ಎಂದು ಹೇಳಿದ್ದಾರೆ.

ದೇಶದಲ್ಲಿ ನಡೆಯುತ್ತಿರುವ ನೀಟ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಪತ್ರಿಕೆ ಸೋರಿಕೆ ಹಗರಣಗಳು, ದುಬಾರಿಯಾಗುತ್ತಿರುವ ಶಿಕ್ಷಣ ವೆಚ್ಚ ಹಾಗೂ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಭಾರತದ ಭವಿಷ್ಯಕ್ಕೆ ದೊಡ್ಡ ಸವಾಲಾಗಿದೆ. ಸರ್ಕಾರದ ಯಾವುದೇ ಬಲಪ್ರಯೋಗವೂ ಹಕ್ಕುಗಳಿಗಾಗಿ ಹೋರಾಡುತ್ತಿರುವ ವಿದ್ಯಾರ್ಥಿಗಳು ಮತ್ತು ಸೋನಮ್ ವಾಂಗ್ ಚುಕ್ ಬೆಂಬಲವಾಗಿ ನಿಂತಿರುವ ಯಾರನ್ನೂ ತಡೆಯಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

ದೇಶಾದ್ಯಂತ ಸದ್ದು ಮಾಡಿದ್ದ ನೀಟ್ ಪರೀಕ್ಷೆ ಅಕ್ರಮಕ್ಕೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೇರ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಮಹಾತ್ಮಾ ಗಾಂಧೀಜಿಯವರ ಕಾಲದಿಂದಲೂ ನಡೆದುಬಂದಿರುವ ಶಾಂತಿಯುತ ಉಪವಾಸ ಸತ್ಯಾಗ್ರಹವನ್ನು ‘ಆತ್ಮಹತ್ಯೆಯ ಯತ್ನ’ ಎಂದು ಪರಿಗಣಿಸಿ ಕಾನೂನು ಕ್ರಮ ಕೈಗೊಂಡರೆ, ಅದು ಪ್ರಜಾಪ್ರಭುತ್ವದಲ್ಲಿ ನಾಗರಿಕರ ಪ್ರತಿಭಟನಾ ಹಕ್ಕನ್ನು ಹತ್ತಿಕ್ಕಿದಂತಾಗುತ್ತದೆ. ಹಾಗಾಗಿ, ಕೂಡಲೇ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಪ್ರಧಾನಿ ಮೋದಿ ಪಡೆಯಬೇಕು. ಜೊತೆಗೆ ಮತ್ತೆ ಪರೀಕ್ಷೆಗಳ ಪತ್ರಿಕೆ ಲೀಕ್ ಆಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದಕ್ಕೆ ಕಾರಣರಾದ ಪ್ರತಿಯೊಬ್ಬರನ್ನೂ ಶಿಕ್ಷಿಸಬೇಕು ಎಂದು ಸೈಯದ್ ಖಾಲಿದ್ ಅಹ್ಮದ್ ಅವರು ಆಗ್ರಹಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *