ಲಕ್ನೋ: ಶಾಲಾ ತರಗತಿಯೊಳಗೆ ಐದು ವರ್ಷದ ನರ್ಸರಿ ವಿದ್ಯಾರ್ಥಿಯೊಬ್ಬನಿಗೆ ಸಹಪಾಠಿ ಕ್ಲಾಸ್ ಮಾನಿಟರ್ ಎಂಟು ನಿಮಿಷಗಳ ಕಾಲ ಬಾಸುಂಡೆ ಬರುವಂತೆ ಥಳಿಸಿರುವ ಅತ್ಯಂತ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಲಕ್ನೋದ ಎಎಲ್‌ಎಸ್ ಅಕಾಡೆಮಿ (ALS Academy) ಶಾಲೆಯಲ್ಲಿ ನಡೆದಿದೆ. ಕ್ಲಾಸ್ ರೂಮ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಇಡೀ ಭೀಕರ ದೃಶ್ಯ ಸೆರೆಯಾಗಿದ್ದು, ಸದ್ಯ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಹಲ್ಲೆಯಿಂದಾಗಿ ಮಗುವಿನ ಮುಖದ ಮೇಲೆ ತೀವ್ರ ಊತ ಹಾಗೂ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿಕ್ಷಕಿ ಹೊರಗೆ ಹೋಗುತ್ತಿದ್ದಂತೆ ಶುರುವಾಯ್ತು ದೌರ್ಜನ್ಯ
ಶಾಲೆಯ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ತರಗತಿಯಲ್ಲಿ ಸುಮಾರು 18 ಪುಟಾಣಿ ಮಕ್ಕಳು ಕುಳಿತಿದ್ದರು. ಆ ವೇಳೆ ಶಿಕ್ಷಕಿಯೊಬ್ಬರು ತರಗತಿಯಲ್ಲಿದ್ದ ಮಕ್ಕಳಿಗೆಲ್ಲಾ ಬೆಂಚ್ ಮೇಲೆ ತಲೆ ತಗ್ಗಿಸಿ ಮಲಗುವಂತೆ ಸೂಚಿಸಿ, ತರಗತಿಯನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಕ್ಲಾಸ್ ಮಾನಿಟರ್‌ಗೆ ವಹಿಸಿ ಹೊರಗೆ ತೆರಳಿದ್ದಾರೆ. ಶಿಕ್ಷಕಿ ಹೊರ ನಡೆದ ಕೆಲವೇ ಸೆಕೆಂಡುಗಳಲ್ಲಿ ವಿದ್ಯಾರ್ಥಿನಿಯೊಬ್ಬಳು ತಲೆ ಎತ್ತಿದ್ದಾಳೆ. ತಕ್ಷಣವೇ ಆಕೆಯ ಬಳಿ ಧಾವಿಸಿದ ಮಾನಿಟರ್, ತಲೆಗೆ ಬಲವಾಗಿ ಹೊಡೆದಿದ್ದಾಳೆ.
ಮಗುವನ್ನು ಎಳೆದಾಡಿ, ರೂಮಿಗೆ ಬೀಗ ಹಾಕಿ ಕ್ರೌರ್ಯ
ಅದರ ಬೆನ್ನಲ್ಲೇ ಐದು ವರ್ಷದ ಮತ್ತೊಂದು ಪುಟ್ಟ ಬಾಲಕ ಕೇವಲ ಕೆಲವು ಸೆಕೆಂಡುಗಳ ಕಾಲ ತಲೆ ಎತ್ತಿ ನೋಡಿದ್ದಾನೆ. ಅಷ್ಟಕ್ಕೆ ಕೋಪೋದ್ರಿಕ್ತಳಾದ ಕ್ಲಾಸ್ ಮಾನಿಟರ್, ಆ ಬಾಲಕನ ಬೆಂಚ್ ಬಳಿ ಓಡಿ ಬಂದು ಆತನ ಕೆನ್ನೆಗೆ ಸತತವಾಗಿ ನಾಲ್ಕೈದು ಬಾರಿ ಬಲವಾಗಿ ಬಾರಿಸಿದ್ದಾಳೆ. ಮಗು ನೋವಿನಿಂದ ಅಳುತ್ತಾ ತಲೆ ಎತ್ತಿದಾಗ, ಬಲವಂತವಾಗಿ ಆತನ ತಲೆಯನ್ನು ಬೆಂಚ್ ಮೇಲೆ ಇಡಲು ಪ್ರಯತ್ನಿಸಿದ್ದಾಳೆ.
ನೋವು ತಡೆಯಲಾರದೆ ಮಗು ಅಳುತ್ತಾ ಎದ್ದು ನಿಂತು ತರಗತಿಯ ಬಾಗಿಲಿನತ್ತ ಓಡಲು ಯತ್ನಿಸಿದ್ದಾನೆ. ಆದರೆ, ಮಾನಿಟರ್ ಆತನನ್ನು ತಡೆದು, ತರಗತಿಯೊಳಗೆ ಎಳೆದು ತಂದು ಮತ್ತೊಮ್ಮೆ ಥಳಿಸಿದ್ದಾಳೆ. ಅಷ್ಟಕ್ಕೇ ನಿಲ್ಲಿಸದ ಆಕೆ, ಕ್ಲಾಸ್ ರೂಮ್‌ನ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿದ್ದಾಳೆ. ಹೆದರಿದ ಮಗು ಮತ್ತೊಂದು ಬಾಗಿಲು ತೆಗೆಯಲು ಹೋದಾಗ ಅಲ್ಲೂ ಆತನ ಕೆನ್ನೆಗೆ ಹೊಡೆದು, ಬಲವಂತವಾಗಿ ಹಿಡಿದು ಎಳೆದು ಸೀಟಿನಲ್ಲಿ ಕೂರಿಸಿದ್ದಾಳೆ. ಇಡೀ ಕ್ಲಾಸ್ ರೂಮ್‌ನಲ್ಲಿ ಈ ಕ್ರೌರ್ಯ ನಡೆಯುತ್ತಿದ್ದಾಗ, ಉಳಿದ ಪುಟಾಣಿ ಮಕ್ಕಳು ಭಯದಿಂದ ತಲೆ ತಗ್ಗಿಸಿ ಕುಳಿತಿದ್ದ ದೃಶ್ಯ ಮನಕಲಕುವಂತಿದೆ.
ಮಕ್ಕಳ ಪೋಷಕರ ಆಕ್ರೋಶ; ಮಾನಿಟರ್ ಉಚ್ಚಾಟನೆ
ಸುಮಾರು 10 ನಿಮಿಷಗಳ ನಂತರ ಶಿಕ್ಷಕಿ ಬಂದು ಬಾಗಿಲು ತಟ್ಟಿದಾಗ ಮಾನಿಟರ್ ಬಾಗಿಲು ತೆರೆದಿದ್ದಾಳೆ. ತಕ್ಷಣವೇ ಸಂತ್ರಸ್ತ ಬಾಲಕ ಶಿಕ್ಷಕಿಯ ಬಳಿ ಹೋಗಿ ದೂರು ನೀಡಿದ್ದಾನೆ. ಶಾಲೆಯ ಅವಧಿ ಮುಗಿದು ಬಾಲಕ ಮನೆಗೆ ಮರಳಿದಾಗ ಆತನ ಮುಖದಲ್ಲಿದ್ದ ಊತ ಹಾಗೂ ಗಾಯದ ಗುರುತುಗಳನ್ನು ಕಂಡು ಪೋಷಕರು ಗಾಬರಿಗೊಂಡಿದ್ದಾರೆ. ತಕ್ಷಣವೇ ಶಾಲೆಗೆ ಧಾವಿಸಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಶಾಲೆಯ ಮಾನಿಟರ್‌ನ ಅಮಾನವೀಯ ವರ್ತನೆ ಬಯಲಾಗಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಶಾಲೆ ಆಡಳಿತ ಮಂಡಳಿ, ಹಲ್ಲೆ ನಡೆಸಿದ ಕ್ಲಾಸ್ ಮಾನಿಟರ್ ವಿದ್ಯಾರ್ಥಿನಿಯನ್ನು ಶಾಲೆಯಿಂದ ಉಚ್ಚಾಟಿಸಿದೆ. ಪೋಷಕರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
- ALS Academy Lucknow news
- class monitor thrashes nursery student
- Lucknow ALS Academy nursery student beaten
- Lucknow latest news.
- Lucknow school CCTV video
- school monitor beating child
- ಕ್ಲಾಸ್ ಮಾನಿಟರ್ ಅಮಾನತು
- ಕ್ಲಾಸ್ ಮಾನಿಟರ್ನಿಂದ ಮಗುವಿಗೆ ಧಳಿತ
- ನರ್ಸರಿ ವಿದ್ಯಾರ್ಥಿಗೆ ಕ್ಲಾಸ್ ಮಾನಿಟರ್ನಿಂದ ಹಲ್ಲೆ
- ಲಕ್ನೋ ಎಎಲ್‌ಎಸ್ ಅಕಾಡೆಮಿ ಶಾಕಿಂಗ್ ವಿಡಿಯೋ
- ಲಕ್ನೋ ಶಾಲೆ ಸಿಸಿಟಿವಿ ದೃಶ್ಯ
- ಶಾಲಾ ಮಕ್ಕಳ ಮೇಲಿನ ದೌರ್ಜನ್ಯ.
- ಶಾಲಾ ಮಗುವಿಗೆ ಧಳಿತ ಲಕ್ನೋ





Leave a comment