Home ದಾವಣಗೆರೆ ಪ್ರಯಾಗ್‌ರಾಜ್ ಮಂಕಮೇಶ್ವರ ದೇವಸ್ಥಾನದಲ್ಲಿ ಮಿನಿ ಸ್ಕರ್ಟ್ಸ್, ಸೆಲ್ಫಿ ಬ್ಯಾನ್: ರುದ್ರಾಭಿಷೇಕಕ್ಕೆ ಸಾಂಪ್ರದಾಯಿಕ ಉಡುಪು ಕಡ್ಡಾಯ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಪ್ರಯಾಗ್‌ರಾಜ್ ಮಂಕಮೇಶ್ವರ ದೇವಸ್ಥಾನದಲ್ಲಿ ಮಿನಿ ಸ್ಕರ್ಟ್ಸ್, ಸೆಲ್ಫಿ ಬ್ಯಾನ್: ರುದ್ರಾಭಿಷೇಕಕ್ಕೆ ಸಾಂಪ್ರದಾಯಿಕ ಉಡುಪು ಕಡ್ಡಾಯ!

Share
ಮಂಕಮೇಶ್ವರ
Share

ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ಪ್ರಸಿದ್ಧ ಮಂಕಮೇಶ್ವರ ದೇವಸ್ಥಾನದಲ್ಲಿ ಜುಲೈ 30 ರಿಂದ ಆರಂಭವಾಗಲಿರುವ ಪವಿತ್ರ ಶ್ರಾವಣ ಮಾಸದ ಅಂಗವಾಗಿ ಭಕ್ತರಿಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯದ ಮಾದರಿಯಲ್ಲಿ ಈ ನಿಯಮಗಳನ್ನು ರೂಪಿಸಲಾಗಿದ್ದು, ದೇವಸ್ಥಾನದ ಪವಿತ್ರತೆಯನ್ನು ಕಾಯ್ದುಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಗಿಡ್ಡ ಉಡುಪುಗಳಿಗೆ ಪ್ರವೇಶವಿಲ್ಲ:

ಹೊಸ ಮಾರ್ಗಸೂಚಿಗಳ ಪ್ರಕಾರ, ಗಿಡ್ಡನೆಯ ಅಥವಾ ಅರೆಬರೆ ಬಟ್ಟೆ ಧರಿಸಿ ಬರುವ ಮಹಿಳೆಯರು ಮತ್ತು ಯುವತಿಯರಿಗೆ ದೇವಸ್ಥಾನದೊಳಗೆ ಪ್ರವೇಶವನ್ನು ನಿರಾಕರಿಸಲಾಗುತ್ತದೆ. ಪುರುಷರೂ ಸಹ ಸಭ್ಯ ಉಡುಪುಗಳನ್ನು ಧರಿಸಿಯೇ ಬರಬೇಕೆಂದು ಸೂಚಿಸಲಾಗಿದೆ. ದೇವಾಲಯವು ಪ್ರವಾಸಿ ತಾಣವಲ್ಲ, ಅದೊಂದು ಪವಿತ್ರ ಆರಾಧನಾ ಕೇಂದ್ರ ಎಂದು ಆಡಳಿತ ಮಂಡಳಿ ನೆನಪಿಸಿದೆ.

ರುದ್ರಾಭಿಷೇಕಕ್ಕೆ ಸಾಂಪ್ರದಾಯಿಕ ಉಡುಪು ಕಡ್ಡಾಯ:

ಶ್ರಾವಣ ಮಾಸದಲ್ಲಿ ರುದ್ರಾಭಿಷೇಕ ಪೂಜೆ ನೆರವೇರಿಸುವ ಭಕ್ತರಿಗೆ ಪ್ರತ್ಯೇಕ ನಿಯಮವಿದ್ದು, ಸಾಂಪ್ರದಾಯಿಕ ಭಾರತೀಯ ಉಡುಪು ಧರಿಸುವುದು ಕಡ್ಡಾಯವಾಗಿದೆ. ಪುರುಷರು ಕಡ್ಡಾಯವಾಗಿ ಧೋತಿ ಮತ್ತು ಮಹಿಳೆಯರು ಸೀರೆ ಅಥವಾ ಸಲ್ವಾರ್ ಸೂಟ್ ಧರಿಸಬೇಕಾಗುತ್ತದೆ. ಧೋತಿ ಇಲ್ಲದ ಪುರುಷ ಭಕ್ತರಿಗೆ ದೇವಸ್ಥಾನದ ವತಿಯಿಂದಲೇ ಉಚಿತವಾಗಿ ಧೋತಿಯನ್ನು ನೀಡಲಾಗುತ್ತಿದ್ದು, ಪೂಜೆಯ ನಂತರ ಅದನ್ನು ಮರಳಿ ನೀಡಬೇಕಾಗುತ್ತದೆ ಎಂದು ಮುಖ್ಯ ಅರ್ಚಕ ಬ್ರಹ್ಮಚಾರಿ ಶ್ರೀ ಧರಾನಂದ್ ತಿಳಿಸಿದ್ದಾರೆ.

ಸೆಲ್ಫಿ ಮತ್ತು ಪ್ಲಾಸ್ಟಿಕ್ ಸಂಪೂರ್ಣ ನಿಷೇಧ:

ದೇವಾಲಯದ ಆವರಣದಲ್ಲಿ ಮೊಬೈಲ್ ಫೋಟೋ ಹಾಗೂ ಸೆಲ್ಫಿ ತೆಗೆದುಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದರೊಂದಿಗೆ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ಪ್ಲಾಸ್ಟಿಕ್ ಕವರ್ ಹಾಗೂ ಪ್ಲಾಸ್ಟಿಕ್ ಲೋಟಗಳ ಬಳಕೆಯನ್ನು ಬ್ಯಾನ್ ಮಾಡಲಾಗಿದೆ. ಪ್ಲಾಸ್ಟಿಕ್‌ನಲ್ಲಿ ತರುವ ತೀರ್ಥ ಅಥವಾ ಅಭಿಷೇಕದ ನೀರಿಗೆ ಯಾವುದೇ ಧಾರ್ಮಿಕ ಮಾನ್ಯತೆ ಇರುವುದಿಲ್ಲ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ತಂಬಾಕು, ಗುಟ್ಕಾ ಹಾಗೂ ಧೂಮಪಾನವನ್ನೂ ಸಹ ನಿಷೇಧಿಸಲಾಗಿದೆ.

ಸುರಕ್ಷತೆಯ ದೃಷ್ಟಿಯಿಂದ ಭಕ್ತರು ಅತಿಯಾದ ಚಿನ್ನಾಭರಣ ಧರಿಸಿ ಬರದಂತೆ ಹಾಗೂ ಗರ್ಭಗುಡಿಯ ಬಳಿ ಪೂಜೆಯ ನಂತರ ಹೆಚ್ಚು ಸಮಯ ನಿಲ್ಲದೆ ಬೇಗನೆ ಹೊರಬರುವಂತೆ ಸೂಚನೆ ನೀಡಲಾಗಿದೆ. ಈ ಕಟ್ಟುನಿಟ್ಟಿನ ನಿಯಮಗಳಿಗೆ ಸ್ಥಳೀಯ ಭಕ್ತರಿಂದಲೂ ಉತ್ತಮ ಬೆಂಬಲ ವ್ಯಕ್ತವಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles