Home ಕ್ರೈಂ ನ್ಯೂಸ್ ಭಾರತದಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು: ಗುಜರಾತ್‌ನಲ್ಲಿ ಐವರು ಜೈಶ್ ಉಗ್ರರ ಬಂಧನ, ಒಟ್ಟು 13 ಕ್ಕೇರಿದ ಬಂಧಿತರ ಸಂಖ್ಯೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಭಾರತದಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು: ಗುಜರಾತ್‌ನಲ್ಲಿ ಐವರು ಜೈಶ್ ಉಗ್ರರ ಬಂಧನ, ಒಟ್ಟು 13 ಕ್ಕೇರಿದ ಬಂಧಿತರ ಸಂಖ್ಯೆ!

Share
ಭಾರತ
Share

ಅಹಮದಾಬಾದ್: ದೇಶದಾದ್ಯಂತ ಸರಣಿ ಬಾಂಬ್ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಪಾಕಿಸ್ತಾನ ಮೂಲದ ನಿಷೇಧಿತ ಭಯೋತ್ಪಾದಕ ಸಂಘಟನೆ ‘ಜೈಶ್-ಎ-ಮೊಹಮ್ಮದ್’ (JeM) ನ ಸಕ್ರಿಯ ಜಾಲವನ್ನು ಗುಜರಾತ್ ಭಯೋತ್ಪಾದನಾ ನಿರೋಧಕ ದಳ (ATS) ಪತ್ತೆಹಚ್ಚಿದ್ದು, ಮತ್ತೈದು ಜನ ಶಂಕಿತ ಉಗ್ರರನ್ನು ಬಂಧಿಸಿದೆ. ಈ ಮೂಲಕ ಈ ಪ್ರಕರಣದಲ್ಲಿ ಈವರೆಗೆ ಬಂಧಿತರಾದವರ ಒಟ್ಟು ಸಂಖ್ಯೆ 13 ಕ್ಕೆ ಏರಿಕೆಯಾಗಿದೆ.

ಗುಜರಾತ್ ಎಟಿಎಸ್ ಭರ್ಜರಿ ಕಾರ್ಯಾಚರಣೆ:

ಕೆಲ ದಿನಗಳ ಹಿಂದಷ್ಟೇ ಗುಜರಾತ್ ಹಾಗೂ ಮಧ್ಯಪ್ರದೇಶದ ವಿವಿಧ ಭಾಗಗಳಲ್ಲಿ ದಾಳಿ ನಡೆಸಿ ಎಂಟು ಜನ ಶಂಕಿತರನ್ನು ಎಟಿಎಸ್ ವಶಕ್ಕೆ ಪಡೆದಿತ್ತು. ಆ ಆರೋಪಿಗಳ ವಿಚಾರಣೆಯ ವೇಳೆ ಸಿಕ್ಕ ಮಹತ್ವದ ಸುಳಿವುಗಳ ಆಧಾರದ ಮೇಲೆ, ಗುಜರಾತ್‌ನ ಪಾಟನ್ ಜಿಲ್ಲೆಯ ಸಿದ್ಧಪುರ ತಾಲೂಕಿನ ಖಾಡಿಯಾಲ್ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿ ಈ ಐವರು ಶಂಕಿತರನ್ನು ಬಂಧಿಸಲಾಗಿದೆ.

ಬಂಧಿತರನ್ನು ಬಿಲಾಲ್ ಅಬಿದ್ ಶೇರಾ, ಮೊಹಮ್ಮದ್ ಅಯೂಬ್ ಕದಿವಾಲ್, ಮೊಹಮ್ಮದ್ ಪಾಲನ್‌ಪುರಿ ಅಲಿಯಾಸ್ ಖಾಲಿ ಅಯೂಬ್ ಸುನ್ಸಾರಾ, ಶಾಫಿಯಾ ರೈಸ್ ಮುಖ್ತಿ ಹಾಗೂ ಮೊಹಮ್ಮದ್ ಹಸನ್ ಕಾರ್ಡಿಯಾ ಎಂದು ಗುರುತಿಸಲಾಗಿದೆ.

ಟೈಮ್ ಬಾಂಬ್ ತಯಾರಿಕೆ, ವಿಫಲ ಪ್ರಯೋಗ:

ವಿಚಾರಣೆಯ ವೇಳೆ ಆರೋಪಿಗಳು ಗುಜರಾತ್ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ವಿಧ್ವಂಸಕ ಕೃತ್ಯ ಎಸಗಲು ಕಳೆದ 6 ತಿಂಗಳಿನಿಂದ ಸಿದ್ಧತೆ ನಡೆಸುತ್ತಿದ್ದರು ಎಂಬುದು ಬಯಲಾಗಿದೆ. ಶಂಕಿತರು ಕಚ್ಚಾ ಟೈಮ್ ಬಾಂಬ್ ಮತ್ತು ಐಇಡಿ (IED) ಸ್ಫೋಟಕಗಳನ್ನು ತಯಾರಿಸಿ, ನಿರ್ಜನ ಪ್ರದೇಶಗಳಲ್ಲಿ ಕನಿಷ್ಠ 6 ರಿಂದ 7 ಬಾರಿ ಪ್ರಾಯೋಗಿಕ ಸ್ಫೋಟಗಳನ್ನು ನಡೆಸಿದ್ದರು. ಆದರೆ ಈ ಸ್ಫೋಟಗಳ ಪೈಕಿ ಕೆಲವು ವಿಫಲವಾಗಿದ್ದವು ಎಂದು ತನಿಖಾ ಮೂಲಗಳು ತಿಳಿಸಿವೆ.

ಪಾಕಿಸ್ತಾನದ ಸಂಪರ್ಕ ಮತ್ತು ‘ಆಪರೇಷನ್ ಸಿಂಧೂರ್’:

ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ ಸಾಧನಗಳ ವಿಧಿವಿಜ್ಞಾನ (Forensic) ತಪಾಸಣೆಯಿಂದ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಶಂಕಿತರು ಪಾಕಿಸ್ತಾನದ ಬಹಾವಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ ಪ್ರಧಾನ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಕಳೆದ ವರ್ಷ ಭಾರತೀಯ ರಕ್ಷಣಾ ಪಡೆಗಳು ನಡೆಸಿದ ಭೀಕರ ‘ಆಪರೇಷನ್ ಸಿಂಧೂರ್’ ದಾಳಿಯಿಂದ ಜೈಶ್ ಸಂಘಟನೆಯ ಬಹಾವಲ್ಪುರ ಕಚೇರಿ ಧ್ವಂಸಗೊಂಡಿತ್ತು. ಇದರಿಂದ ಹತಾಶೆಗೊಂಡಿರುವ ಉಗ್ರ ಸಂಘಟನೆಯು ಭಾರತದಲ್ಲಿ ಮತ್ತೆ ತನ್ನ ಜಾಲವನ್ನು ಬಲಪಡಿಸಲು ಮತ್ತು ಸಕ್ರಿಯಗೊಳಿಸಲು ಈ ಮಾಡ್ಯೂಲ್ ಬಳಸಿಕೊಳ್ಳುತ್ತಿತ್ತು ಎನ್ನಲಾಗಿದೆ.

ಪ್ರಸ್ತುತ ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜುಲೈ 24 ರವರೆಗೆ ಎಟಿಎಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಇವರಿಂದ ಸ್ಫೋಟಕ ವಸ್ತುಗಳು ಹಾಗೂ ಉರ್ದು ಭಾಷೆಯ ಜಿಹಾದಿ ಸಾಹಿತ್ಯವನ್ನು ವಶಪಡಿಸಿಕೊಳ್ಳಲು ತನಿಖೆ ಮುಂದುವರಿದಿದೆ.

Share

Leave a comment

Leave a Reply

Your email address will not be published. Required fields are marked *

Related Articles