ದಾವಣಗೆರೆ:ದಾವಣಗೆರೆ ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಭುಗಿಲೆದ್ದಿದೆ. ಬಿಜೆಪಿ ಜಿಲ್ಲಾ ಘಟಕದ ಪದಾಧಿಕಾರಿಗಳ ನೇಮಕ ಘೋಷಣೆ ಆಗುತ್ತಿದ್ದಂತೆ ಜಿಎಂಐಟಿಯಲ್ಲಿ ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ನೇತೃತ್ವದಲ್ಲಿ ಅಸಮಾಧಾನಿತರ ಸಭೆ ನಡೆಸಲಾಗಿದೆ.
ಜಿಲ್ಲಾ ಬಿಜೆಪಿಯಲ್ಲಿ ಮತ್ತೊಮ್ಮೆ ಆಂತರಿಕ ಭಿನ್ನಮತ ಮತ್ತು ಬಣ ರಾಜಕೀಯ ತಾರಕಕ್ಕೇರಿದೆ. ಇತ್ತೀಚೆಗಷ್ಟೇ ಪ್ರಕಟಗೊಂಡ ಬಿಜೆಪಿ ಜಿಲ್ಲಾ ಘಟಕದ ಹೊಸ ಪದಾಧಿಕಾರಿಗಳ ನೇಮಕ ಬೆನ್ನಲ್ಲೇ, ಸಿದ್ದೇಶ್ವರ ಬಣ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದೆ.
ಸಭೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ವೀರೇಶ್ ಹನಗವಾಡಿ, ದೂಡಾ ಮಾಜಿ ಅಧ್ಯಕ್ಷ ಎ. ವೈ. ಪ್ರಕಾಶ್ ಸೇರಿದಂತೆ ಬಿಜೆಪಿ ಹಿರಿಯ ಮುಖಂಡರು, ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಮುನ್ನ ಜಿಲ್ಲಾ ಬಿಜೆಪಿ ಘಟಕಕಕ್ಕೆ ಪ್ರಧಾನ ಕಾರ್ಯದರ್ಶಿಗಳ ನೇಮಕ ಮಾಡಲಾಗಿತ್ತು. ಆದರೆ ಏಕಾಏಕಿಯಾಗಿ ಬದಲಾವಣೆ ಮಾಡಿರುವುದು ಸಿದ್ದೇಶ್ವರ ಬಣದ ಆಕ್ರೋಶಕ್ಕೆ ಕಾರಣವಾಗಿದೆ.
ಡಾ. ಜಿ. ಎಂ. ಸಿದ್ದೇಶ್ವರ ಮಾತನಾಡಿ ಕೆಲವರು ಮೊಬೈಲ್ ನಲ್ಲಿ ಮೆಸೇಜ್ ಮಾಡಿದ್ದರು. ನಾನು ಕೆಲವರಷ್ಟೇ ಬರಬಹುದು ಎಂದುಕೊಂಡಿದ್ದೆ. ಆದರೆ 200ಕ್ಕೂ ಹೆಚ್ಚು ಮಂದಿ ಬಂದಿದ್ದಾರೆ. ಚುನಾವಣೆಗೆ ಮುನ್ನ ಮೂವರು ಪ್ರಧಾನ ಕಾರ್ಯದರ್ಶಿಗಳ ನೇಮಕ ಮಾಡಲಾಗಿತ್ತು. ಅವರನ್ನು ಬದಲಾಯಿಸಿ ಬೇರೆಯವರನ್ನು ಯಾರು ಕೇಳಿ ನೇಮಿಸಿದರು ಎಂಬುದೇ ಗೊತ್ತಿಲ್ಲ. ಸೌಜನ್ಯಕ್ಕಾದರೂ ಕರೆ ಮಾಡಿ ಮಾಹಿತಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳನ್ನು ಕೇವಲ ಮೂರು ತಿಂಗಳಿಗೆ ಬದಲಾವಣೆ ಮಾಡಿದರೆ ಕಾರ್ಯಕರ್ತರಿಗೆ ಯಾವ ಸಂದೇಶ ಹೋಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕಾರ್ಯಕರ್ತರಲ್ಲಿ ಗೊಂದಲ ಉಂಟಾಗುವುದಿಲ್ಲವೇ? ನಮ್ಮ ಅಭಿಪ್ರಾಯಕ್ಕೆ ಅಪಮಾನ ಮಾಡಿದಂತಾಗುವುದಿಲ್ಲವೇ? ಎಂದು ಪ್ರಶ್ನಿಸಿದರು.
ಬದಲಾವಣೆಗೆ ಸಿದ್ದೇಶ್ವರ ಬಣದ ಆಕ್ರೋಶ:
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮುನ್ನವಷ್ಟೇ ಜಿಲ್ಲಾ ಬಿಜೆಪಿ ಘಟಕಕ್ಕೆ ಮೂವರು ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿತ್ತು. ಆದರೆ, ಕೇವಲ ಮೂರು ತಿಂಗಳ ಅವಧಿಯಲ್ಲೇ ಇವರನ್ನು ಏಕಾಏಕಿಯಾಗಿ ಬದಲಾವಣೆ ಮಾಡಿ ಹೊಸಬರನ್ನು ನೇಮಿಸಿರುವುದು ಸಿದ್ದೇಶ್ವರ ಬಣದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
- Davanagere BJP crisis
- Davanagere BJP meeting
- DAVANAGERE NEWS
- Davanagere Politics
- GM Siddeshwara
- Karnataka BJP internal rift
- Rajanahalli Shivakumar
- Yashwanth Rao Jadhav
- ಕರ್ನಾಟಕ ಬಿಜೆಪಿ ಅಸಮಾಧಾನ
- ಜಿ ಎಂ ಸಿದ್ದೇಶ್ವರ ಆಕ್ರೋಶ
- ದಾವಣಗೆರೆ ಬಿಜೆಪಿ ಭಿನ್ನಮತ
- ದಾವಣಗೆರೆ ಬಿಜೆಪಿ ರಾಜಕೀಯ
- ದಾವಣಗೆರೆ ಬಿಜೆಪಿ ಸಭೆ
- ದಾವಣಗೆರೆ ಸುದ್ದಿ
- ಯಶವಂತರಾವ್ ಜಾಧವ್
- ರಾಜನಹಳ್ಳಿ ಶಿವಕುಮಾರ್





Leave a comment