ಬೆಂಗಳೂರು: ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ನಡೆಯುವ ಹೋರಾಟಗಳನ್ನು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧದ ಹೋರಾಟಗಳೆಂದು ಸರಿಯಾಗಿಯೇ ಅರ್ಥೈಸಿಕೊಂಡಿರುವ ಸಾಮ್ರಾಟ್ ಆರ್. ಅಶೋಕ್ ಗೆ ಧನ್ಯವಾದಗಳು ಎಂದು ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ಹೇಳಿದ್ದಾರೆ.
ಕನ್ನಡದಲ್ಲಿ ಬರೆದುಕೊಂಡು ಬಂದ ವಂದೇ ಮಾತರಂ ಗೀತೆಯನ್ನೇ ಸರಿಯಾಗಿ ಓದಲು ಸಾಧ್ಯವಾಗದ ನಿಮ್ಮಿಂದ ನನ್ನ ಇಂಗ್ಲಿಷ್ ಹೇಳಿಕೆಯನ್ನು ಅರ್ಥಮಾಡಿಕೊಳ್ಳುತ್ತೀರಿ ಎಂಬ ನಿರೀಕ್ಷೆ ನನಗಿಲ್ಲ. ಆದರೂ ಮತ್ತೊಮ್ಮೆ ನಿಮಗೆ ಇನ್ನೂ ಸರಳವಾಗಿ ಅರ್ಥವಾಗುವ ಭಾಷೆಯಲ್ಲೇ ಸ್ಪಷ್ಟಪಡಿಸುತ್ತೇನೆ. ಓದಿ ಎಂದು ಎಕ್ಸ್ ಖಾತೆಯಲ್ಲಿ ಟೀಕಿಸಿದ್ದಾರೆ.
ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಜನರ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗಾಗಿ ನಡೆಯುವ ಯಾವುದೇ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಅಂತಹ ಹೋರಾಟಗಳಿಗೆ ಅಗತ್ಯವಾದ ಸಹಕಾರವನ್ನೂ ನೀಡುತ್ತೇವೆ. ಅದು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧವೇ ಇರಲಿ ಅಥವಾ ಬಿಜೆಪಿ ಏಜೆಂಟರಂತೆ ಕಾರ್ಯನಿರ್ವಹಿಸುತ್ತಿರುವ ಸಂವಿಧಾನ ವಿರೋಧಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧವೇ ಇರಲಿ. ನಾವು ಅಂತಹ ಹೋರಾಟದ ಜೊತೆಗಿದ್ದೇವೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷವಾಗಿ ನಾವು ಸಂವಿಧಾನದ ಪರವಾಗಿ, ಪ್ರಜಾಪ್ರಭುತ್ವದ ರಕ್ಷಣೆಗಾಗಿ ನಡೆಯುವ ಹೋರಾಟಗಳಿಗೆ ಬೆನ್ನೆಲುಬಾಗಿ ನಿಲ್ಲುತ್ತೇವೆ. ಅಂತಹ ಹೋರಾಟಗಳಿಗೆ ಅಗತ್ಯ ಸಹಕಾರವನ್ನೂ ನೀಡುತ್ತೇವೆ. ಅಪರೂಪಕ್ಕೊಮ್ಮೆ ಸರಿಯಾಗಿಯೇ ಯೋಚಿಸುವ ಆರ್ ಅಶೋಕ್ ಅವರು, ಜನಸಾಮಾನ್ಯರ ಇಂತಹ ಹೋರಾಟವನ್ನು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧದ ಹೋರಾಟವೆಂದು ಸರಿಯಾಗಿಯೇ ಅರ್ಥೈಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಸಂವಿಧಾನ ರಕ್ಷಣೆಯ ಹೋರಾಟವನ್ನು ದೇಶವಿರೋಧಿ ಎಂದು ಕರೆಯುವ ಆರ್ ಅಶೋಕ್ ಅವರೇ, ನೀವು ಸಂವಿಧಾನ ವಿರೋಧಿ ಎಂಬುದನ್ನು ಸಾಭೀತುಪಡಿಸಿದ್ದೀರಿ. ರಾಜ್ಯದ ಖಜಾನೆಯನ್ನು ಹೋರಾಟಕ್ಕೆ ಬಳಸಲಾಗುತ್ತಿದೆ ಎಂಬ ಆರೋಪಕ್ಕೆ ವಿರೋಧ ಪಕ್ಷದ ನಾಯಕರಾದ ನೀವು ಆಧಾರ ಸಹಿತ ಸಾಬೀ ಮಾಡಬೇಕು. ನನ್ನ ಹೇಳಿಕೆಯಲ್ಲಿ ಇಲ್ಲದ ಹಣದ ವಿಚಾರವನ್ನು ದಾಖಲೆ ಸಹಿತ ನಿರೂಪಿಸಬೇಕು. ಇಲ್ಲದೇ ಇದ್ದರೆ ನೀವು ವಿರೋಧಪಕ್ಷದ ನಾಯಕನಾಗಿರಲು ಅನರ್ಹ ಎಂದು ವಾಗ್ದಾಳಿ ನಡೆಸಿದ್ದಾರೆ.
ಅದೇನೇ ಆದರೂ, ಅಶೋಕ್ ಅವರೇ, ನಿಮ್ಮ ರಾಜಕೀಯ ಜ್ಞಾನ ಮತ್ತು ದೈರ್ಯವನ್ನು ಮೆಚ್ಚಲೇಬೇಕು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ದದ ಹೋರಾಟವನ್ನು ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರ ತಲೆಗೆ ಕಟ್ಟಿದ ಏಕೈಕ
ಮೊದಲ ಬಿಜೆಪಿ ನಾಯಕ ಯಾರಾದ್ರು ಇದ್ದರೆ ಅದು ನಮ್ಮ ರಾಜ್ಯದ ಸಾಮ್ರಾಟ್ ಅಶೋಕ್ ಅವರು. ಇದು ನಮಗೊಂದು ಹೆಮ್ಮೆ ಎಂದು ವ್ಯಂಗ್ಯವಾಡಿದ್ದಾರೆ.





Leave a comment