SUDDIKSHANA KANNADA NEWS/ DAVANAGERE/ DATE:24-12-2024
ದಾವಣಗೆರೆ: ದೊಡ್ಡಸ್ಥಿಕೆಗೆ ಮಾತನಾಡುತ್ತಿರುವವರ ಬಗ್ಗೆ ಜನರು ಯೋಚನೆ ಮಾಡುತ್ತಾರೆ. ಮಾತನಾಡಲಿ ಬಿಡಿ. ಏನು ಹೇಳಿದ್ದಾರೆಂದು ಅವರನ್ನೇ ಕೇಳಬೇಕು ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ವಿರುದ್ಧ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಆಕ್ರೋಶ ವ್ಯಕ್ತಪಡಿಸಿದರು.
ಎಂಸಿಸಿ ಎ ಬ್ಲಾಕ್ ನಲ್ಲಿನ ಗೃಹ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶಿವಗಂಗಾ ಬಸವರಾಜ್ ಹೆಸರು ಪ್ರಸ್ತಾಪಿಸದೇ ತೀವ್ರ ವಾಗ್ದಾಳಿ ನಡೆಸಿದರು.
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರನ್ನು ಬದಲಾಯಿಸಬೇಕೆಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ. ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಅವರ ಆಗ್ರಹಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಆಕ್ರೋಶಭರಿತರಾಗಿಯೇ ಉತ್ತರಿಸಿದ ಅವರು, ಕೊರೊನಾ ಕಾಲದಲ್ಲಿ ಎಸ್. ಎಸ್. ಮಲ್ಲಿಕಾರ್ಜುನ್ ಅವರು ರಾತ್ರಿ 2 ಗಂಟೆಯವರೆಗೆ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದರು. ಯಾವ ಕರೆ ಬಂದರೂ ಸ್ವೀಕರಿಸುತ್ತಿದ್ದರು. ಸಹಾಯ ಮಾಡುತ್ತಿದ್ದರು. ಹಣ ಪಡೆಯದೇ ಚಿಕಿತ್ಸೆಗೆ ನೆರವಾಗಿದ್ದರು. ಸೋಂಕಿತರ ಯೋಗಕ್ಷೇಮದ ಬಗ್ಗೆ ವಿಚಾರಿಸುತ್ತಿದ್ದರು. ಜನರ ಒಳಿತಿಗಾಗಿ ಹಗಲಿರುಳು ಶ್ರಮಿಸುತ್ತಾರೆ. ಇಂಥವರ ಬಗ್ಗೆ ಮಾತನಾಡುತ್ತಾರೆಂದರೆ ಏನು ಹೇಳಬೇಕು. ಹೇಳಿಕೊಳ್ಳಲಿ ಬಿಡಿ. ಎಲ್ಲವನ್ನೂ ಜನರೇ ಗಮನಿಸುತ್ತಿದ್ದಾರೆ. ಅವರೇ ಉತ್ತರ ನೀಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ದಾವಣಗೆರೆಯಲ್ಲಿ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಸಚಿವರಾಗಿದ್ದಾಗ ಅಭಿವೃದ್ಧಿ ಕಾರ್ಯಗಳು ಸಾಕಷ್ಟು ನಡೆದಿವೆ. ಪಾರ್ಕ್, ರಸ್ತೆ, ಸಂತೆ ಸೇರಿದಂತೆ ಎಲ್ಲೆಡೆ ಅಭಿವೃದ್ಧಿ ವಿಚಾರಗಳನ್ನೇ ಜನರು ಮಾತನಾಡುತ್ತಾರೆ. ಜನ ಸೇವೆ ಮಾಡುವವರ ಬಗ್ಗೆ ಈ ರೀತಿ ಹೇಳಿಕೆ ನೀಡಿದರೆ ಏನು ಮಾಡಲು ಸಾಧ್ಯ. 12 ರಿಂದ 13 ವರ್ಷ ಸಚಿವರಾಗಿ ಮಲ್ಲಿಕಾರ್ಜುನ್ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಇಂದಿಗೂ ಮಾತನಾಡುತ್ತವೆ. ಒಂದೇ ಒಂದು ಕೋಮುಗಲಭೆ ನಡೆದಿಲ್ಲ. ಶಾಂತಯುತವಾಗಿದೆ. ಏನು ಮಾತನಾಡಿದ್ದಾರೆ ಎಂಬ ಬಗ್ಗೆ ಜನರು ಯೋಚನೆ ಮಾಡುತ್ತಾರೆ ಬಿಡಿ. ಇಂಥದ್ದಕ್ಕೆ ಹೆಚ್ಚು ಮಹತ್ವ ನೀಡುವುದಿಲ್ಲ ಎಂದು ಪ್ರಭಾ ಮಲ್ಲಿಕಾರ್ಜುನ್ ಅವರು ಕಿಡಿಕಾರಿದರು.