SUDDIKSHANA KANNADA NEWS/ DAVANAGERE/ DATE:23-12-2024
ಜರ್ಮನಿಯು ಒಂದು ಕಾಲದಲ್ಲಿ ಸಂಸ್ಕೃತ ಅಧ್ಯಯನಕ್ಕೆ ಎರಡನೆಯ ತವರೂರು ಆಗಿತ್ತು. ಐರೋಪ್ಯ ದೇಶಗಳ ಭಾಷಾತಜ್ಞರು 17ನೆಯ ಶತಮಾನದಿಂದಲೂ ಸಂಸ್ಕೃತ, ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳ ಮಧ್ಯೆ ಇರುವ ಗಾಢವಾದ ಸಂಬಂಧವನ್ನು ಮನಗಂಡು ಆಳವಾದ ಅಧ್ಯಯನ ಮಾಡುತ್ತಾ ಬಂದಿದ್ದಾರೆ. ಅವರು ಇಂಗ್ಲೀಷ್, ಜರ್ಮನ್, ಫ್ರೆಂಚ್ ಮೊದಲಾದ ಭಾಷೆಗಳಿಗೆ ಅನುವಾದಿಸಿದ ಅನೇಕ ಸಂಸ್ಕೃತ ಗ್ರಂಥಗಳು ಪಾಶ್ಚಾತ್ಯ ಕವಿಗಳ ಮತ್ತು ಲೇಖಕರ ಮೇಲೆ ದಟ್ಟವಾದ ಪ್ರಭಾವವನ್ನು ಬೀರಿವೆ. ಒಮ್ಮೆ ಜರ್ಮನಿಯ ಹೈಡಲ್ ಬೆರ್ಗ್ ವಿಶ್ವವಿದ್ಯಾನಿಲಯಕ್ಕೆ ಹೋದಾಗ ಅಲ್ಲಿಯ ಸಂಸ್ಕೃತ ಪ್ರೊಫೆಸರ್ ರವರು ಸಂಸ್ಕೃತ ಸಂಭಾಷಣಾ ಶಿಬಿರಕ್ಕೆ ಬಂದಿದ್ದ ಅಮೇರಿಕಾ, ಇಂಗ್ಲೆಂಡ್ ಮತ್ತು ನಾವು ಓದಿದ ವಿಯೆನ್ನಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅಭಿನಯಿಸಿದ “ಚೋರಸ್ಯ ಚಾತುರ್ಯಮ್” (ಕಳ್ಳನ ಚಾತುರ್ಯ) ಎಂಬ ಒಂದು ರೋಚಕವಾದ ಆಧುನಿಕ ಸಂಸ್ಕೃತ ನಾಟಕದ ವೀಡಿಯೋ ತೋರಿಸಿದರು. ನಾಟಕದ ಕಥಾವಸ್ತು ಹೀಗಿದೆ:
ಒಂದು ರಾಜ್ಯದಲ್ಲಿ ಒಬ್ಬ ಜಾಣ ಕಳ್ಳನಿದ್ದ. ಅವನು ಮಧ್ಯರಾತ್ರಿಯ ವೇಳೆ ಒಬ್ಬ ಶ್ರೀಮಂತನ ಮನೆಗೆ ಕಳ್ಳತನ ಮಾಡಲು ಹೋದ. ಬೇರೆ ಕಳ್ಳರಂತೆ ಕನ್ನ ಕೊರೆಯದೆ ನೇರವಾಗಿ ಮನೆಯ ಮುಂಬಾಗಿಲಿನಿಂದಲೇ ಪ್ರವೇಶಿಸಿದ. ಕಾವಲು ಭಟರು “ಯಾರು ನೀವು?” ಎಂದು ಕೇಳಿದರು. ಅವನು “ನಾನೊಬ್ಬ ಕಳ್ಳ” ಎಂದ. ಕಾವಲು ಭಟರು ಕಳ್ಳರಾರೂ ಹೀಗೆ ಹೇಳುವುದಿಲ್ಲ, ಇವರು ನಮ್ಮ ಸಾಹುಕಾರರ ಸ್ನೇಹಿತರು ಯಾರೋ ಇರಬೇಕು ಎಂದು ಭಾವಿಸಿ “ಕ್ಷಮಿಸಿ ಸಾರ್” ಎಂದು ಕೈಮುಗಿದು ಒಳಗೆ ಬಿಟ್ಟರು. ಸ್ವಲ್ಪ ಹೊತ್ತಿನಲ್ಲಿಯೇ ಕಳ್ಳನು ಮನೆಯೊಳಗೆ ಇದ್ದ ಬೆಲೆ ಬಾಳುವ ಬೆಳ್ಳಿ ಬಂಗಾರದ ಒಡವೆಗಳನ್ನು ದೋಚಿ ಕೈಚೀಲದಲ್ಲಿ ತುಂಬಿಕೊಂಡು ಹೊರ ಬಂದ. ಅದನ್ನು ನೋಡಿ ಕಾವಲು ಭಟರು ನಮ್ಮ ಸಾಹುಕಾರರು ಸ್ನೇಹಿತರಾದ ಇವರಿಗೆ ಉಡುಗೊರೆ ಕೊಟ್ಟು ಕಳುಹಿಸಿರಬಹುದು ಎಂದು ಗೌರವದಿಂದ ನಮಸ್ಕರಿಸಿ ಬೀಳ್ಕೊಟ್ಟರು. ಮರುದಿನ ಬೆಳಗ್ಗೆ ಮನೆಯ ಅಮೂಲ್ಯ ಆಭರಣಗಳು ಕಳುವಾಗಿರುವುದನ್ನು ಶ್ರೀಮಂತ ಗಮನಿಸಿ ಭಟರನ್ನು ಗದರಿಸಿದ. ಕಳ್ಳನನ್ನು ಎಲ್ಲಿದ್ದರೂ ಹುಡುಕಿಕೊಂಡು ಬರಲು ಆಜ್ಞಾಪಿಸಿದ. ಕಾವಲು ಭಟರು ಕಷ್ಟಪಟ್ಟು ಹುಡುಕಿ ಕಳ್ಳನನ್ನು ಹಿಡಿದುಕೊಂಡು ಬಂದರು. ಶ್ರೀಮಂತನು ಆ ಕಳ್ಳನನ್ನು ರಾಜನ ಮುಂದೆ ಹಾಜರು ಪಡಿಸಿದ.
ರಾಜನು ಕಳ್ಳನ ವಿಚಾರಣೆ ಮಾಡಲು ಆರಂಭಿಸಿದ. ಆಗಲೂ ಕಳ್ಳನದು ಅದೇ ಉತ್ತರ: “ಹೌದು ನಾನು ಕಳ್ಳ, ಹೊಟ್ಟೆಪಾಡಿಗಾಗಿ ಕಳ್ಳತನ ಮಾಡುತ್ತೇನೆ. ಆದರೆ ಬಡವರ ಮನೆಯಲ್ಲಿ ಅಲ್ಲ: ಶ್ರೀಮಂತರ ಮನೆಯಲ್ಲಿ. ಅದೂ ಅವರು ನಿತ್ಯ ಉಪಯೋಗಿಸದೇ ಇರುವ ವಸ್ತುಗಳನ್ನು ಮಾತ್ರ ಕದಿಯುತ್ತೇನೆ”. ರಾಜನು ಆ ಕಳ್ಳನಿಗೆ ಮರಣ ದಂಡನೆಯನ್ನು ವಿಧಿಸುತ್ತಾನೆ. ಕಳ್ಳನು ಅಷ್ಟು ಧೈರ್ಯವಾಗಿ “ನಾನು ಕಳ್ಳ” ಎಂದು ಹೇಳುವುದರಲ್ಲಿ ಏನೋ ಮುಖ್ಯವಾದ ಸಂಗತಿ ಇರಬೇಕು. ಕೂಲಂಕಷವಾಗಿ ಪರ್ಯಾಲೋಚನೆ ಮಾಡಿ ತೀರ್ಪು ನೀಡಬೇಕೆಂದು ಮಂತ್ರಿಗಳು ಸಲಹೆ ಕೊಟ್ಟರೂ ರಾಜ ಕೇಳದೆ ಶೂಲಕ್ಕೇರಿಸುವ ದಿನಾಂಕವನ್ನು ನಿಗದಿಪಡಿಸಿ ಸೆರೆಮನೆಗೆ ಕಳುಹಿಸುತ್ತಾನೆ. ಗಲ್ಲಿಗೇರಿಸುವ ಮುನ್ನಾ ದಿನ “ನಿನ್ನ ಕೊನೆಯ ಆಸೆ ಏನು?” ಎಂದು ಸೆರೆಮನೆಯ ಅಧಿಕಾರಿಗಳು ಕೇಳುತ್ತಾರೆ. ಅದಕ್ಕೆ ಕಳ್ಳ “ನನ್ನನ್ನು ಮಹಾರಾಜರ ಎದುರು ಕರೆದೊಯ್ದರೆ ಅವರ ಹತ್ತಿರವೇ ಹೇಳುತ್ತೇನೆ” ಎನ್ನುತ್ತಾನೆ. ರಾಜಭಟರು ಕಳ್ಳನನ್ನು ಅರಮನೆಗೆ ಕರೆದೊಯ್ಯುತ್ತಾರೆ. ರಾಜ “ಏನು ನಿನ್ನ ಕೊನೆಯ ಆಸೆ?”ಎಂದು ಕೇಳುತ್ತಾನೆ. ಕಳ್ಳ ತಲೆಬಾಗಿ “ರಾಜನ್, ನನಗೆ ಸ್ವರ್ಣ ಕೃಷಿ ಎಂಬ ರಹಸ್ಯ ವಿದ್ಯೆ ಗೊತ್ತು. ನಾನು ಸತ್ತರೆ ಅದು ನನ್ನೊಂದಿಗೆ ನಷ್ಟವಾಗಿ ಹೋಗುತ್ತದೆ. ನನ್ನನ್ನು ಶೂಲಕ್ಕೇರಿಸುವ ಮುನ್ನ ಅವಕಾಶ ಮಾಡಿಕೊಟ್ಟರೆ ತಮ್ಮ ಸಮ್ಮುಖದಲ್ಲಿ ಬಂಗಾರವನ್ನು ಬಿತ್ತಿ ಬೆಳೆಯುವ ರಹಸ್ಯ ವಿಧಾನವನ್ನು ತೋರಿಸಿ ಕೊಡುತ್ತೇನೆ. ಅರಮನೆಯ ಭಂಡಾರ ತುಂಬುತ್ತದೆ” ಎನ್ನುತ್ತಾನೆ. ರಾಜನು ವಿಸ್ಮಿತನಾಗಿ ಅದರಿಂದ ರಾಜ್ಯದಲ್ಲಿ ಸುಭಿಕ್ಷೆ ಉಂಟಾಗುವುದಾದರೆ ಏಕಾಗಬಾರದು ಎಂದು ರಾಜಾಜ್ಞೆ ಹೊರಡಿಸುತ್ತಾನೆ.
ಮರುದಿನ ಅರುಣೋದಯದಲ್ಲಿ ಈ ಕೌತುಕವನ್ನು ನೋಡಲು ರಾಜನ ಸಮ್ಮುಖದಲ್ಲಿ ಮಂತ್ರಿಗಳು, ರಾಜಪುರೋಹಿತರು, ಆಸ್ಥಾನ ಪಂಡಿತರು, ಪುರಜನರು ಕಿಕ್ಕಿರಿದು ಸೇರುತ್ತಾರೆ. “ಹೂಂ, ತಡ ಯಾಕೆ? ಬಂಗಾರದ ಬೀಜ ಬಿತ್ತಿ ತೋರಿಸು!” ಎಂದು ರಾಜ ಕಳ್ಳನಿಗೆ ಆಜ್ಞಾಪಿಸುತ್ತಾನೆ. “ರಾಜನ್! ನಾನು ಹೇಳಿ ಕೇಳಿ ಕಳ್ಳ, ನಾನು ಬಿತ್ತಿದರೆ ಬೀಜಗಳು ಮೊಳಕೆಯೊಡೆಯುವುದಿಲ್ಲ.
ಕಳ್ಳರಲ್ಲದವರು ಮಾತ್ರ ಬಿತ್ತಬೇಕು. ಆದ್ದರಿಂದ ತಾವೇ ತಮ್ಮ ಕುಲದೇವತೆಯನ್ನು ಸ್ಮರಿಸಿ ಬೀಜಗಳನ್ನು ಬಲಗೈಯಿಂದ ಬಿತ್ತೋಣವಾಗಲಿ!” ಎಂದು ಕಳ್ಳ ವಿನೀತನಾಗಿ ನಿವೇದಿಸಿಕೊಳ್ಳುತ್ತಾನೆ. ರಾಜ ತಲೆ ತಗ್ಗಿಸಿ “ಇಲ್ಲಪ್ಪ, ನಾನು ಬಿತ್ತಲಾರೆ, ಚಿಕ್ಕಂದಿನಲ್ಲಿ ನಾನು ಗಣಪತಿಯ ಪಕ್ಕದಲ್ಲಿದ್ದ ಲಾಡು ಉಂಡೆಯನ್ನು ಕದ್ದು ತಿಂದಿದ್ದೆ” ಎಂದು ಹೇಳುತ್ತಾನೆ.
ಹಾಗಾದರೆ “ತಮ್ಮ ಆಸ್ಥಾನದಲ್ಲಿರುವವರು ಯಾರಾದರೂ ಬೀಜ ಬಿತ್ತಲಿ” ಎಂದು ಕಳ್ಳ ಕೇಳಿಕೊಳ್ಳುತ್ತಾನೆ. ರಾಜನು ಮಹಾಮಂತ್ರಿಯ ಕಡೆ ನೋಡುತ್ತಾನೆ. “ಇಲ್ಲ, ನಾನೂ ಬಿತ್ತಲಾರೆ, ಚಿಕ್ಕಂದಿನಲ್ಲಿ ಗೆಳೆಯನ ಜೇಬಿನಲ್ಲಿದ್ದ ಹಣವನ್ನು ಕದ್ದಿದ್ದೆ ಎಂದು ಮಂತ್ರಿ ತಲೆತಗ್ಗಿಸುತ್ತಾನೆ.” ರಾಜಪುರೋಹಿತರೂ ತಲೆತಗ್ಗಿಸುತ್ತಾರೆ. ಕಾರಣ ಅವರು ದೇವಸ್ಥಾನದ ಅರ್ಚಕರಾಗಿದ್ದಾಗ ಒಮ್ಮೆ ತುಂಬಾ ಹಸಿವಾಗಿ ದೇವರಿಗೆ ಅರ್ಪಣೆ ಮಾಡಲು ಭಕ್ತರು ತಂದಿದ್ದ ಹಣ್ಣುಗಳನ್ನು ಕದ್ದು ತಿಂದಿದ್ದರಂತೆ! ನಂತರ ಆಸ್ಥಾನಪಂಡಿತರೂ ತಲೆತಗ್ಗಿಸುತ್ತಾರೆ. ಅವರು ಮಹಾರಾಜರ ಗುಣಗಾನ ಮಾಡಲು ಮಹಾಕವಿ ಕಾಳಿದಾಸನ ಪದ್ಯಗಳನ್ನು ಕದ್ದು ಕಾವ್ಯರಚನೆ ಮಾಡಿದ್ದರಂತೆ! ಕೊನೆಯದಾಗಿ ರಾಜ ಕಿಕ್ಕಿರಿದು ನೆರೆದಿದ್ದ ಪ್ರಜೆಗಳತ್ತ ತಿರುಗಿ “ಎಂದೂ ಏನೂ ಕಳ್ಳತನ ಮಾಡದವರು ಬಂಗಾರದ ಬೀಜ ಬಿತ್ತಲು ಮುಂದೆ ಬನ್ನಿ” ಎಂದಾಗ ಯಾರೂ ಮುಂದಾಗದೆ ಎಲ್ಲರೂ ತಲೆತಗ್ಗಿಸಿ ನಿಲ್ಲುತ್ತಾರೆ. ಆಗ ಕಳ್ಳನು “ಮಹಾರಾಜ! ಈ ರಾಜ್ಯದಲ್ಲಿರುವವರೆಲ್ಲರೂ ಕಳ್ಳರೇ. ಹೀಗಿರುವಾಗ ನನಗೊಬ್ಬನಿಗೇ ಮರಣದಂಡನೆಯ ಶಿಕ್ಷೆ ಏಕೆ?” ಎಂದು ಕೇಳುತ್ತಾನೆ. ರಾಜ ನಿರುತ್ತರನಾಗಿ ಕಳ್ಳನಿಗೆ ವಿಧಿಸಿದ್ದ ಶಿಕ್ಷೆಯನ್ನು ಹಿಂತೆಗೆದುಕೊಳ್ಳುತ್ತಾನೆ. ಅಷ್ಟೇ ಅಲ್ಲ ಅವನನ್ನು ತನ್ನ ಮಂತ್ರಿಮಂಡಲದಲ್ಲಿ ಹಣಕಾಸು ಸಚಿವನನ್ನಾಗಿ ನೇಮಕ ಮಾಡಿಕೊಳ್ಳುತ್ತಾನೆ.
ಇದೊಂದು ಕಾಲ್ಪನಿಕ ಪ್ರಹಸನ. ಕಥೆ ಬಹಳ ಸ್ವಾರಸ್ಯಕರ ಮತ್ತು ಸರಳ. ಹಲವು ಹತ್ತು ಪ್ರಶ್ನೆಗಳನ್ನೂ ಸಹ ಹುಟ್ಟಿ ಹಾಕುತ್ತದೆ. ರಾಜ್ಯದಲ್ಲಿ ಬಂಗಾರದ ಬೆಳೆಯನ್ನು ಬಿತ್ತಿ ಬೆಳೆಯಲು ಸಾಧ್ಯ ಎಂಬುದಕ್ಕೆ ನಾವು ಹಲವಾರು ವರ್ಷಗಳಿಂದ ಪಕ್ಷಭೇದವಿಲ್ಲದೆ ಎಲ್ಲ ಸರಕಾರಗಳಿಂದ ಕೋಟ್ಯಂತರ ರೂ. ಮಂಜೂರು ಮಾಡಿಸಿದ ಅನೇಕ ಏತ ನೀರಾವರಿ ಯೋಜನೆಗಳಿಂದ ನೂರಾರು ಕೆರೆಗಳಿಗೆ ನೀರು ಹರಿದು ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಈಗ ಹಳ್ಳಿಗಳು ನಗರ ಪ್ರದೇಶದ ಬಡಾವಣೆಗಳಂತೆ ಕಾಣಿಸುತ್ತಿವೆ. ಅನೇಕ ರೈತರು ಹಳ್ಳಿಗಳಲ್ಲಿ ಪೇಟೆ ಪಟ್ಟಣಗಳಲ್ಲಿರುವ ಮನೆಗಳನ್ನೂ ಮೀರಿಸುವಂತಹ ಮನೆಗಳನ್ನು ಕಟ್ಟಿಸಿಕೊಳ್ಳುತ್ತಿದ್ದಾರೆ. ಒಮ್ಮೆ ಕೆರೆ ವೀಕ್ಷಣೆಗೆಂದು ಒಂದು ಹಳ್ಳಿಗೆ ಹೋದಾಗ ರೈತನೊಬ್ಬ ದಾರಿಯಲ್ಲಿದ್ದ ತನ್ನ ಭವ್ಯವಾದ ಮನೆಯನ್ನು ತೋರಿಸಿ “ಬುದ್ದಿ, ನಾನು ಡೂಪ್ಲೆಕ್ಸ್ ಮನೆಯನ್ನು ಕಟ್ಟಿಸಿದ್ದೇನೆ” ಎಂದು ಬಹಳ ಹೆಮ್ಮೆಯಿಂದ ಹೇಳಿಕೊಂಡ.
ಈ ವರ್ಷ ತುಂಗಭದ್ರೆ ಮತ್ತು ಮಳೆರಾಯನ ಮಧ್ಯೆ ಮ್ಯಾರಥಾನ್ ಓಟದ ಸ್ಪರ್ಧೆ ನಡೆದಂತೆ ತೋರುತ್ತಿದೆ. ಕಳೆದ ತಿಂಗಳು ಏತ ನೀರಾವರಿ ಯೋಜನೆಯ ವ್ಯಾಪ್ತಿಯಲ್ಲಿ ಬರುವ ನೂರಾರು ಕೆರೆಗಳಿಗೆ 50/60 ಕಿ.ಮೀ ದೂರದಿಂದ ಹರಿದು ಬಂದ ತುಂಗಭದ್ರೆಯು ರಭಸದಿಂದ ಧುಮ್ಮಿಕ್ಕಿ ಮೊದಲ ಸುತ್ತಿನ ಓಟದಲ್ಲಿ ಗೆಲುವು ಸಾಧಿಸಿದಳು. ಈ ತಿಂಗಳು ಎರಡನೆಯ ಸುತ್ತಿನ ಓಟದಲ್ಲಿ ಗುಡುಗು ಸಿಡಿಲು ಆರ್ಭಟದೊಂದಿಗೆ ಧೋ ಧೋ ಎಂದು ಆಗಸದಿಂದ ಸುರಿದ ಮಳೆರಾಯ ತುಂಗಭದ್ರೆಯನ್ನು ಹಿಂದಕ್ಕೆ ಸರಿಸಿ ಕೆರೆಗಳು ಕೋಡಿ ಬೀಳುವಂತೆ ಮಾಡಿ ಗೆಲುವು ಸಾಧಿಸಿದ್ದಾನೆ! “ಹುಯ್ಯೋ ಹುಯ್ಯೋ ಮಳೆರಾಯ” ಎಂದು ಹಳ್ಳಿಗರು ಕುಣಿದಾಡಿದರೆ “ಅಯ್ಯೋ ಅಯ್ಯೋ ಮಳೆರಾಯ” ಎಂದು ನಗರ ನಿವಾಸಿಗಳು ಪರಿತಪಿಸುವಂತಾಗಿದೆ!
ಇಂತಹ ನೂರಾರು ನೀರಾವರಿ ಯೋಜನೆಗಳನ್ನು ಸರಕಾರ ರಾಜ್ಯದೆಲ್ಲೆಡೆ ರೂಪಿಸಿದರೆ ಬರದ ನಾಡೆಲ್ಲಾ ಬಂಗಾರದ ನಾಡಾಗುತ್ತದೆ! ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ “ಕೆರೆ ಹಳ್ಳ ಬಾವಿಗಳು ಮೈದೆಗೆದರೆ ಗುಳ್ಳೆ, ಗೊರಚೆ, ಚಿಪ್ಪು ಕಾಣಬಹುದು” ಎನ್ನುವ ಬಸವಣ್ಣನವರ ವಚನವನ್ನು ಪರಿಷ್ಕರಿಸಿ ಈ ಮುಂದಿನಂತೆ ಹೇಳಬಹುದು: