SUDDIKSHANA KANNADA NEWS/ DAVANAGERE/ DATE:21-12-2024
ದಾವಣಗೆರೆ: ನೀವು ರಾಜಕೀಯ ಕ್ಷೇತ್ರ ಪ್ರವೇಶಿಸಲು ಅವಕಾಶ ನೀಡಿದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ಶಿವಕುಮಾರ್ ಅವರು ಚನ್ನಗಿರಿ ಶಾಸಕ ಬಸವರಾಜ ವಿ. ಶಿವಗಂಗಾ ವಿರುದ್ಧ ಕಿಡಿಕಾರಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಬಗ್ಗೆ ಮಾತನಾಡುವ ಮೊದಲು ಸ್ವಲ್ಪ ಯೋಚಿಸಬೇಕು. ತಾವು ಪಾಲಿಕೆ ಸದಸ್ಯರಾಗಿದ್ದು, ಹೇಗೆಂಬುದನ್ನು ಒಮ್ಮೆ ಇತಿಹಾಸ ತಿರುಗಿ ನೋಡಿ. ಮಹಾನಗರ ಪಾಲಿಕೆ ಸದಸ್ಯರಾದ ಸಂದರ್ಭದಲ್ಲಿ ಜನರ ಕೈಗೆ ಸಿಗುತ್ತಿರಲಿಲ್ಲ. ತಮ್ಮ ಆಡಳಿತಾವಧಿಯಲ್ಲಿ ಎಷ್ಟು ಅಭಿವೃದ್ಧಿ ಕೆಲಸಗಳಾಗಿವೆ ಎಂಬುದನ್ನು ಜನರ ಮುಂದೆ ತಿಳಿಸಿ ಎಂದು ಸವಾಲು ಹಾಕಿದರು.
ಶಾಸಕರೇ ನೀವು ದೊಡ್ಡವರ ಬಗ್ಗೆ ಗೌರವದಿಂದ ನಡೆದುಕೊಳ್ಳುವುದನ್ನು ಕಲಿಯಿರಿ. ಅದನ್ನು ಬಿಟ್ಟು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಬಗ್ಗೆ ಹೈಕಮಾಂಡ್ಗೆ ಪತ್ರ ಬರೆದು ನೀವೇನೂ ದೊಡ್ಡವರಾಗುವುದಿಲ್ಲ. ಹೈಕಮಾಂಡ್ಗೆ ಶಾಮನೂರು ಕುಟುಂಬದವರು ಪಕ್ಷಕ್ಕೆ ಎಷ್ಟು ಸೇವೆ ಸಲ್ಲಿಸಿದ್ದಾರೆ ಎನ್ನುವುದು ಗೊತ್ತಿದೆ ಎಂದ ಶಾಸಕ ನಡೆಗೆ ಬೇಸರ ವ್ಯಕ್ತಪಡಿಸಿದರು.
ಎಸ್.ಎಸ್.ಮಲ್ಲಿಕಾರ್ಜುನ್ ಮೂರು ಬಾರಿ ಸಚಿವರಾಗಿದ್ದಾರೆ. ಅವರು ಮಾಡಿದ ಅಭಿವೃದ್ಧಿ ಕೆಲಸಗಳು ಇಂದು ಜನರು ಮಾತನಾಡುತ್ತಿದ್ದಾರೆ. ಚನ್ನಗಿರಿ ಜನತೆ ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತಿದ್ದು, ಜನರ ಆಶಯದಂತೆ ತಾವು ಶಾಸಕರಾಗಿದ್ದೀರಿ.
ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಕಲಿಯಿರಿ. ಯಾರೋ ನೀಡಿರುವ ಕುಮ್ಮಕ್ಕಿನಿಂದ ಪದೇ ಪದೇ ಸಚಿವರ ವಿರುದ್ಧ ಮಾತನಾಡುತ್ತಿದ್ದೀರಿ. ಇಂತಹ ಬೆಳವಣಿಗೆಗೆ ಕಾಂಗ್ರೆಸ್ ಪಕ್ಷ ಎಂದಿಗೂ ಸಹಿಸುವುದಿಲ್ಲ ಎಂದು ಎಚ್ಚರಿಕೆ
ನೀಡಿದರು.
ಗೋಷ್ಠಿಯಲ್ಲಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಪಾಲಿಕೆ ಮಾಜಿ ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್, ಸದಸ್ಯ ನಾಗರಾಜ್, ಎಲ್.ಎಂ.ಎಚ್.ಸಾಗರ್, ಮುಖಂಡರಾದ ಗೋಪಿನಾಯ್ಕ್, ಮಂಜಮ್ಮ ಸೇರಿದಂತೆ ಮತ್ತಿತರರು ಹಾಜರಿದ್ದರು.