SUDDIKSHANA KANNADA NEWS/ DAVANAGERE/ DATE:21-12-2024
ದಾವಣಗೆರೆ: ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಪರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನಿಂತಿದ್ದು, ವಿಧಾನ ಪರಿಷತ್ ಸದಸ್ಯ ಸಿ. ಟಿ. ರವಿ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು, ಸಿ, ಟಿ. ರವಿ ಅವರು ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆಡಿದ ಆಕ್ಷೇಪಾರ್ಹ ಮಾತು ವಿಧಾನಸಭೆ ಹಾಗೂ ವಿಧಾನ ಪರಿಷತ್ ಗೆ ಮಾಡಿದ ಕಪ್ಪುಚುಕ್ಕೆ ಎಂದು ಹೇಳಿದ್ದಾರೆ.
ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಪರಿಷತ್ ಕಲಾಪದಲ್ಲಿ ಸಿ. ಟಿ. ರವಿ ಅವರು ಮಹಿಳೆಯ ಬಗ್ಗೆ ಅವಾಚ್ಯ ಶಬ್ದ ಬಳಕೆ ಮಾಡಿರುವುದು ಬೇಸರ ತಂದಿದೆ. ದೇಶದಲ್ಲಿ ಹೆಣ್ಣುಮಕ್ಕಳಿಗೆ ವಿಶೇಷ ಸ್ಥಾನಮಾನ ಮತ್ತು ಗೌರವ ನೀಡಲಾಗಿದೆ. ಆಡಿರುವ ಮಾತು ಗಮನಿಸಿದರೆ ನಾಲಿಗೆ ನಾಗರಿಕತೆ ಹೇಳುತ್ತದೆ, ಜನಪ್ರತಿನಿಧಿಗಳು ಸದನದ ಗೌರವ, ಘನತೆ ಕಾಪಾಡಬೇಕು. ಸದನದ ಒಳಗೆ ಮತ್ತು ಹೊರಗೆ ಜನಪ್ರತಿನಿಧಿಗಳ ನಡವಳಿಕೆಗಳು ಇತರರಿಗೆ ಮಾದರಿಯಾಗಬೇಕು. ಅಸಾವಿಧಾನಿಕ ಪದ ಬಳಕೆ ಮಾಡಿರುವುದು ಸದನದ ಇತಿಹಾಸಕ್ಕೆ ಕಪ್ಪುಚುಕ್ಕೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಅವಾಚ್ಯ ಶಬ್ದ ಬಳಕೆ ಮಾಡಿರುವುದನ್ನು ಮಹಾಸಭಾ ತೀವ್ರವಾಗಿ ಖಂಡಿಸುತ್ತದೆ. ಈ ಮಾತು ಒಪ್ಪಲು ಸಾಧ್ಯವಿಲ್ಲ. ಕೂಡಲೇ ಸಿ. ಟಿ. ರವಿ ಮಹಿಳೆಯರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.