SUDDIKSHANA KANNADA NEWS/ DAVANAGERE/ DATE:20-12-2024
ದಾವಣಗೆರೆ: ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ವಿಚಾರ ಸಂಬಂಧ ಕಾಂಗ್ರೆಸ್ ಸರ್ಕಾರ ಬಂಧನ ಮಾಡಿದ್ದು ರಾಜಕೀಯ ಷಡ್ಯಂತ್ರವಾಗಿದೆ. ಸಿ. ಟಿ. ರವಿ ಅವರ ಬಂಧನ ಮಾಡಿರುವುದು ರಾಜಕೀಯ ಪಿತೂರಿ ಮಾಡಿರುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ. ಬೆಳಗಾವಿಯಿಂದ ಸಿ. ಟಿ. ರವಿ ಬಿಟ್ಟಿರುವುದೇ ಹೆಚ್ಚು ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ. ಬಿಜೆಪಿ ಕಾರ್ಯಕರ್ತರು ಬಳೆ ತೊಟ್ಟಿಕೊಂಡು ಕುಳಿತಿಲ್ಲ. ಗೂಂಡಾಗಿರಿ ಪ್ರವೃತ್ತಿಗೆ ತಕ್ಕ ಶಾಸ್ತಿ ಮಾಡುತ್ತೇವೆ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋರಾಟದ ರೂಪುರೇಷೆ, ಮುಂದಿನ ಹೆಜ್ಜೆ ಹೇಗಿರಬೇಕೆಂದು ಡಿಸೆಂಬರ್ 21ರಂದು ಕುಳಿತು ಮಾತುಕತೆ ನಡೆಸುತ್ತೇವೆ. ಚರ್ಚೆ ನಡೆಸುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಪುಡಾರಿಗಳು ವಿಕಾಸಸೌಧಕ್ಕೆ ನುಗ್ಗಿ ಸಿ. ಟಿ. ರವಿ ಮೇಲೆ ಹಲ್ಲೆ ಮಾಡುವ ಪ್ರಯತ್ನ ಮಾಡಲಾಗಿದೆ. ಎಫ್ ಐಆರ್ ದಾಖಲಿಸಿ ಕಾನೂನು ಬಾಹಿರವಾಗಿ ಬಂಧಿಸಲಾಗಿತ್ತು. ಖಾನಾಪುರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಹಿಂಸೆ
ನೀಡಿದ್ದಾರೆ. ತಲೆಯಲ್ಲಿ ರಕ್ತ ಸುರಿಯುತ್ತಿದ್ದರೂ ಲೆಕ್ಕಿಸದೇ ಪೊಲೀಸರು ಮಾನವೀಯತೆ ಮರೆತಿದ್ದರು. 500 ಕಿಲೋಮೀಟರ್ ಸುತ್ತಾಡಿಸಿ, ಕಾಡಿನಲ್ಲಿ ಇಳಿಸಿದ್ದಾರೆ. ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಭಯ ಹುಟ್ಟಿಸುವ ಕೆಲಸ ಮಾಡಿದ್ದಾರೆ. ಯಾವುದೋ ಪೊಲೀಸ್ ಠಾಣೆಯಲ್ಲಿ ನರ್ಸ್ ಚಿಕಿತ್ಸೆ ನೀಡಿದ್ದಾರೆ ಎಂದು ತಿಳಿಸಿದರು.
ಪ್ರತಿ ಅರ್ಧಗಂಟೆಗೆ ಪೊಲೀಸರಿಗೆ ಮೇಲಾಧಿಕಾರಿಗಳು, ಸಚಿವರು ಫೋನ್ ಮಾಡುತ್ತಿದ್ದರು. ಪೊಲೀಸರು ಕಾನೂನಾತ್ಮಕವಾಗಿ ರಕ್ಷಣೆ ಕೊಡಬೇಕಿತ್ತು. ಆದ್ರೆ, ಕಾನೂನು ಗಾಳಿಗೆ ತೂರಿ ಜನಪ್ರತಿನಿಧಿಗೆ ಹಲ್ಲೆ ನಡೆಸಿ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ನಾಲ್ಕು ಗಂಟೆಗಳ ಕಾಲ ಸಿ. ಟಿ. ರವಿ ಅವರ ಬಗ್ಗೆ ಮಾಹಿತಿ ನೀಡಲಿಲ್ಲ. ಆಗ ರಾಜ್ಯದಲ್ಲಿ ಆತಂಕ ಇತ್ತು. ರಾಜ್ಯದ ಉಚ್ಚ ನ್ಯಾಯಾಲಯವು ನೀಡಿರುವ ತೀರ್ಪು ಸ್ವಾಗಸುತ್ತೇವ. ಸಿ. ಟಿ. ರವಿಯವರಿಗೆ ಕಾನೂನಾತ್ಮಕವಾಗಿ ಸಿಕ್ಕಿದೆ. ಇದರಿಂದ ಕಾಂಗ್ರೆಸ್ ಸರ್ಕಾರಕ್ಕೆ ಕಪಾಳಮೋಕ್ಷವಾಗಿದೆ ಎಂದು ಹೇಳಿದರು.
ರಾಜ್ಯ ಉಚ್ಛ ನ್ಯಾಯಾಲಯ ಕಾಂಗ್ರೆಸ್ ಸರ್ಕಾರದ ಪೊಲೀಸ್ ದಬ್ಬಾಳಿಕೆಗೆ ಮಂಗಳಾರತಿ ಎತ್ತಿದೆ. ಪ್ರಜಾಪ್ರಭುತ್ವ ಗೆದ್ದಿದೆ. ಜನಪ್ರತಿನಿಧಿಗಳು ಎಂಬುದನ್ನೂ ಲೆಕ್ಕಿಸದೇ ನೀತಿ-ನಿಯಮಗಳನ್ನು ಮೀರಿ ಪೊಲೀಸ್ ಬಲ ಬಳಸಿಕೊಂಡು, ಸರ್ವಾಧಿಕಾರಿ ಆಡಳಿತ ನೆನಪಿಸುವ ರೀತಿಯಲ್ಲಿ ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ನಿನ್ನೆಯಿಂದ ಇಂದಿನವರಗೂ ಮಾನ್ಯ ಸಿ. ಟಿ. ರವಿ ಅವರನ್ನು ನಿಯಮ ಮೀರಿ ಬಂಧಿಸುವ ಮೂಲಕ ತುರ್ತು ಪರಿಸ್ಥಿತಿಯ ಕರಾಳತೆಯನ್ನು ಕಾಂಗ್ರೆಸ್ ಸರ್ಕಾರ ಇಂದಿನ ಪೀಳಿಗೆಗೆ ನೆನಪು ಮಾಡಿಕೊಟ್ಟಿದೆ. ಗೂಂಡಾಗಳನ್ನು ಪೋಷಿಸಿಕೊಂಡು ಸರ್ಕಾರ ನಡೆಸುವುದು, ಪೊಲೀಸರನ್ನು ಬಳಸಿಕೊಂಡು ಯಾರನ್ನು ಬೇಕಾದರೂ ಬಂಧಿಸುತ್ತೇವೆಂದು ದ್ವೇಷ ಸಾರಲು ಹೊರಟಿದ್ದ ಈ ಸರ್ಕಾರಕ್ಕೆ ಪಾಠ ಹೇಳುವ ರೀತಿಯಲ್ಲಿ ಉಚ್ಚ ನ್ಯಾಯಾಲಯ ಸಕಾಲದಲ್ಲಿ ಮದ್ಯ ಪ್ರವೇಶಿಸಿ ಸಂವಿಧಾನ ಹಾಗೂ ಈ ನೆಲದ ಕಾನೂನಿನ ಘನತೆಯನ್ನು ತಿಳಿಸಿಕೊಟ್ಟಿದೆ. ನ್ಯಾಯಾಲಯದ ಈ ತೀರ್ಪನ್ನು ಕರ್ನಾಟಕದ ಜನತೆಯ ಪರವಾಗಿ ಹೃತ್ಪೂರ್ವಕವಾಗಿ ಸ್ವಾಗತಿಸಿ, ಶಾಸಕ ಸಿ.ಟಿ ರವಿಯವರನ್ನು ಅಭಿನಂದಿಸುತ್ತೇನೆ ಎಂದರು.
ಪ್ರಜಾಪ್ರಭುತ್ವ ದಮನಮಾಡಿ ದಬ್ಬಾಳಿಕೆ, ಕ್ರೌರ್ಯ ತುಂಬಿಕೊಂಡ ವರ್ತನೆಗಳು ಹಾಗೂ ಭ್ರಷ್ಟಾಚಾರದ ಹಗರಣಗಳನ್ನು ಮೈಗೆ ಮೆತ್ತಿಕೊಂಡಿರುವ ಈ ಕಾಂಗ್ರೆಸ್ ಸರ್ಕಾರದ ವಿರುದ್ಧ ತಾರ್ಕಿಕ ಅಂತ್ಯ ಕಾಣುವವರೆಗೂ ಬಿಜೆಪಿ ವಿರಮಿಸದೇ ಹೋರಾಟ ಮುಂದುವರಿಸಲಿದೆ ಎಂದು ತಿಳಿಸಿದರು.