SUDDIKSHANA KANNADA NEWS/ DAVANAGERE/ DATE:20-12-2024
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕ್ಷೇತ್ರದಲ್ಲಿ ಸಿ.ಟಿ.ರವಿ ಅವರನ್ನ ಬಿಟ್ಟಿದ್ದೇ ಪುಣ್ಯ ಅಂದರೆ ತಮ್ಮ ಮಾತಿನ ಅರ್ಥವೇನು? ಜೀವಂತವಾಗಿ ಬಿಟ್ಟಿದ್ದೇ ಪುಣ್ಯ ಅಂತಲಾ? ಇನ್ನೂ ಪ್ರಾಣ ತೆಗೆಯದೆ ಉಳಿಸಿರುವುದೇ ಪುಣ್ಯ ಆಂತಲಾ?ಅಥವಾ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕ್ಷೇತ್ರ ತಾಲಿಬಾನಿಗೆ ಸೇರಿದ್ದು ಅಂತಲಾ? ಎಂದು ವಿಪಕ್ಷ ನಾಯಕ ಆರ್. ಅಶೋಕ್ ಅವರು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಗೆ ಡಿಚ್ಚಿ ಕೊಟ್ಟಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರು ತಾಲಿಬಾನಿಗಳು ಅಂತಲಾ? ಕಾನೂನು ಕೈಗೆತ್ತುವ ರೌಡಿಗಳಿಗೆ, ಗೂಂಡಾಗಳಿಗೆ ನಿಮ್ಮ ಮಾತಿನಿಂದ ಏನು ಸಂದೇಶ ಹೋಗುತ್ತದೆ ಎನ್ನುವ ಪ್ರಜ್ಞೆ ತಮಗಿದೆಯೇ? ಡಿಸಿಎಂ ಡಿ. ಕೆ. ಶಿವಕುಮಾರ್ ಎಂದು ಕಿಡಿಕಾರಿದ್ದಾರೆ.
ತಾವೊಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರು. ರಾಜ್ಯದ ಉಪಮುಖ್ಯಮಂತ್ರಿಗಳು. ಮುಂದೊಂದು ದಿನ ಮುಖ್ಯಮಂತ್ರಿ ಆಗಬೇಕು ಎಂದು ಕನಸು ಕಾಣುತ್ತಿರುವವರು. ತಮ್ಮಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಮಾತನಾಡಬಾರದು. ತಾವು ಮುಖ್ಯಮಂತ್ರಿ ಆದರೆ ರಾಜ್ಯದ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಏನಾಗುತ್ತೆ ಅಂತ ತಮ್ಮ ಮಾತುಗಳೇ ಸೂಚನೆ ಕೊಡುತ್ತಿವೆ. ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎನ್ನುವುದನ್ನ ಮರೆಯಬೇಡಿ. ತಮ್ಮ ಸ್ಥಾನಕ್ಕೆ ತಕ್ಕಂತೆ ನಡೆದುಕೊಳ್ಳಿ. ಕನಿಷ್ಠ ಪಕ್ಷ ಸಾರ್ವಜನಿಕವಾಗಿ ಮಾತನಾಡುವಾಗಲಾದರೂ ತಮ್ಮ ಸ್ಥಾನಕ್ಕೆ ತಕ್ಕಂತೆ ಮಾತನಾಡಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಪಂಚಮಸಾಲಿ ಮೀಸಲಾತಿ ಹೋರಾಟಗಾರರು ವಿಧಾನಸೌಧಕ್ಕೆ ಮುತ್ತಿಗೆ ಹಾಕಿದರೆ ಲಾಠಿ ಏಟು ಕೊಡದೆ ಮುತ್ತು ಕೊಡಬೇಕಾ ಎಂದು ಪ್ರಶ್ನೆ ಮಾಡಿದ್ದ ಕಾಂಗ್ರೆಸ್ ಸರ್ಕಾರ, ಇವತ್ತು ರೌಡಿಗಳನ್ನ, ಗೂಂಡಾಗಳನ್ನ ವಿಧಾನಸೌಧದ ಒಳಗೆ ಬಿಟ್ಟು ಪ್ರತಿಪಕ್ಷದ ಶಾಸಕರ ಮೇಲೆ ಹಲ್ಲೆ ಮಾಡಲು ಛೂ ಬಿಟ್ಟಿದೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.