ಕರೀಂನಗರ (ತೆಲಂಗಾಣ): ಆನ್ಲೈನ್ ಜೂಜು ಮತ್ತು ಬೆಟ್ಟಿಂಗ್ ಆಟಗಳಿಂದಾಗಿ ಬರೋಬ್ಬರಿ 4 ಲಕ್ಷ ರೂಪಾಯಿ ಸಾಲದ ಸುಳಿಗೆ ಸಿಲುಕಿದ್ದ 21 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬ, ಸಾಲ ತೀರಿಸಲು 55 ವರ್ಷದ ದಿನಗೂಲಿ ಮಹಿಳೆಯನ್ನು ದರೋಡೆ ಮಾಡಿ, ಸಾಕ್ಷಿ ನಾಶಪಡಿಸಲು ಆಕೆಯನ್ನು ಆಳವಾದ ಕೃಷಿ ಬಾವಿಗೆ ತಳ್ಳಿರುವ ಘೋರ ಘಟನೆ ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಆದರೆ, ಸಾವಿನ ದವಡೆಯಲ್ಲೂ ಧೃತಿಗೆಡದ ಮಹಿಳೆ ಬರೋಬ್ಬರಿ 21 ಗಂಟೆಗಳ ಕಾಲ ಬಾವಿಯಲ್ಲೇ ಹೋರಾಡಿ ಪವಾಡಸದೃಶವಾಗಿ ಬದುಕುಳಿದಿದ್ದಾರೆ.
ಕೆಲಸದ ಆಮಿಷ ಒಡ್ಡಿ ದರೋಡೆ:
ಜುಲೈ 1 ರಂದು ತಂಗರಾಳ ಲಕ್ಷ್ಮಿ (55) ಎಂಬ ದಿನಗೂಲಿ ಕಾರ್ಮಿಕ ಮಹಿಳೆ ಮನೆಗೆ ಬಾರದಿದ್ದಾಗ ಆಕೆಯ ಮಗ ನಾಪತ್ತೆ ದೂರು ದಾಖಲಿಸಿದ್ದರು. ತನಿಖೆ ನಡೆಸಿದಾಗ ಕರಾಳ ಸತ್ಯ ಹೊರಬಿದ್ದಿದೆ. ಆರೋಪಿ ಧಮ್ಮ ದಿನೇಶ್ ರೆಡ್ಡಿ (21) ಎಂಬಾತ ಲಕ್ಷ್ಮಿಗೆ ತನ್ನ ತೋಟದಲ್ಲಿ ಕೆಲಸ ಕೊಡುವುದಾಗಿ ನಂಬಿಸಿ ರಾಪಿಡೋ ಬೈಕ್ ಬುಕ್ ಮಾಡಿ ಕರೆದುಕೊಂಡು ಹೋಗಿದ್ದ. ಸಿಸಿಟಿವಿ ಕ್ಯಾಮೆರಾಗಳ ಕಣ್ಣಿನಿಂದ ತಪ್ಪಿಸಿಕೊಳ್ಳಲು ದಾರಿಯಲ್ಲಿ ತನ್ನದೇ ಮೋಟಾರ್ ಸೈಕಲ್ಗೆ ಆಕೆಯನ್ನು ಹತ್ತಿಸಿಕೊಂಡು ನುಸ್ತುಲಾಪುರ ಗ್ರಾಮದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ. ಅಲ್ಲಿ ಆಕೆಯನ್ನು ಹೆದರಿಸಿ 5 ಗ್ರಾಂ ಚಿನ್ನ, 20 ಗ್ರಾಂ ಬೆಳ್ಳಿಯ ಕಾಲುಗೆಜ್ಜೆ ಹಾಗೂ ನಗದನ್ನು ದೋಚಿದ್ದ.
ಹಗ್ಗ ಕತ್ತರಿಸಿದರೂ ಈಜಿ ಬದುಕಿದ ಮಹಿಳೆ:
ತನ್ನನ್ನು ಗುರುತಿಸಬಾರದು ಎಂಬ ಕ್ರೂರ ಉದ್ದೇಶದಿಂದ ದಿನೇಶ್ ರೆಡ್ಡಿ, ಲಕ್ಷ್ಮಿಯವರನ್ನು ಕೃಷಿ ಬಾವಿಗೆ ತಳ್ಳಿದ್ದ. ಬಾವಿಗೆ ಬಿದ್ದ ತಕ್ಷಣ ಲಕ್ಷ್ಮಿ ಅಲ್ಲಿದ್ದ ಹಗ್ಗವೊಂದನ್ನು ಹಿಡಿದು ಮೇಲೇಳಲು ಯತ್ನಿಸಿದ್ದಾರೆ. ಇದನ್ನು ಗಮನಿಸಿದ ಪಾಪಿ ದಿನೇಶ್, ಆಕೆ ಸಾಯಲೇಬೇಕೆಂದು ಆ ಹಗ್ಗವನ್ನೂ ಕತ್ತರಿಸಿದ್ದಾನೆ. ಆದರೆ ಲಕ್ಷ್ಮಿಗೆ ಈಜು ಬರುತ್ತಿದ್ದರಿಂದ, ಧೈರ್ಯ ಕಳೆದುಕೊಳ್ಳದೆ ಬಾವಿಯ ಮೋಟಾರ್ ಪೈಪ್ಲೈನ್ಗೆ ಅಳವಡಿಸಿದ್ದ ಮತ್ತೊಂದು ಕೇಬಲ್ ಅನ್ನು ಗಟ್ಟಿಯಾಗಿ ಹಿಡಿದುಕೊಂಡು ಇಡೀ ರಾತ್ರಿ ಬಾವಿಯಲ್ಲೇ ಕಳೆದಿದ್ದಾರೆ. ಮರುದಿನ ಬೆಳಗ್ಗೆ ಸ್ಥಳೀಯ ರೈತರು ಆಕೆಯ ಕಿರುಚಾಟ ಕೇಳಿ ರಕ್ಷಿಸಿದ್ದಾರೆ.
ಆನ್ಲೈನ್ ಬೆಟ್ಟಿಂಗ್ ತಂದ ಆಪತ್ತು, ಆರೋಪಿಗಳ ಬಂಧನ:
ಘಟನೆ ಕುರಿತು ಕರೀಂನಗರ ಪೊಲೀಸ್ ಕಮಿಷನರ್ ಗೌಸ್ ಆಲಂ ಮಾಹಿತಿ ನೀಡಿ, “ಆರೋಪಿ ದಿನೇಶ್ ರೆಡ್ಡಿ ಆನ್ಲೈನ್ ಗ್ಯಾಂಬ್ಲಿಂಗ್ ಮತ್ತು ಲೋನ್ ಆಪ್ಗಳ ಮೂಲಕ 4 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಅದನ್ನು ತೀರಿಸಲು ಈ ಕೃತ್ಯ ಎಸಗಿದ್ದಾನೆ. ತಾಂತ್ರಿಕ ಸಾಕ್ಷ್ಯಗಳು ಮತ್ತು ರಾಪಿಡೋ ದಾಖಲೆಗಳ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ಅಲ್ಲದೆ ಕದ್ದ ಚಿನ್ನವನ್ನು ಖರೀದಿಸಿದ ಜ್ಯುವೆಲ್ಲರಿ ವ್ಯಾಪಾರಿಯನ್ನೂ ವಶಕ್ಕೆ ಪಡೆಯಲಾಗಿದೆ,” ಎಂದು ತಿಳಿಸಿದ್ದಾರೆ.
ಸದ್ಯ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸಾಲದ ಆಸೆಗೆ ವಿದ್ಯಾರ್ಥಿಯೊಬ್ಬ ಕೊಲೆಗಡುಕನಾದ ಈ ಘಟನೆ ಇಡೀ ತೆಲಂಗಾಣವನ್ನು ಬೆಚ್ಚಿಬೀಳಿಸಿದೆ.
- Crime updates
- Dhamma Dinesh Reddy arrest
- Karimnagar Police Commissioner Ghaus Alam
- Karimnagar robbery case
- online betting fraud
- online gambling debt crime
- Rapido bike tracking
- Tangarala Lakshmi survival story
- Telangana crime news
- woman pushed into well
- ಆನ್ಲೈನ್ ಗ್ಯಾಂಬ್ಲಿಂಗ್ ಸಾಲ
- ಆನ್ಲೈನ್ ಬೆಟ್ಟಿಂಗ್ ದರೋಡೆ
- ಕರೀಂನಗರ ದರೋಡೆ ಪ್ರಕರಣ
- ಕರೀಂನಗರ ಪೊಲೀಸ್ ಕಮಿಷನರ್ ಗೌಸ್ ಆಲಂ
- ಕ್ರೈಮ್ ಸುದ್ದಿ
- ತಂಗರಾಳ ಲಕ್ಷ್ಮಿ ಬದುಕುಳಿದ ಸಾಹಸ
- ತೆಲಂಗಾಣ ಕ್ರೈಮ್ ನ್ಯೂಸ್
- ಮಹಿಳೆಯನ್ನು ಬಾವಿಗೆ ತಳ್ಳಿದ ಘಟನೆ
- ರಾಪಿಡೋ ಬೈಕ್ ತನಿಖೆ





Leave a comment