Home ದಾವಣಗೆರೆ ದೂಡಾ ಮಾಸ್ಟರ್ ಪ್ಲಾನ್ ಪರಿಷ್ಕರಣೆಗೆ ಗ್ರೀನ್ ಸಿಗ್ನಲ್: ದಾವಣಗೆರೆಯಲ್ಲಿ 50 ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿ ಹೊಸ ಬಡಾವಣೆ!
ದಾವಣಗೆರೆಬೆಂಗಳೂರುವಾಣಿಜ್ಯ

ದೂಡಾ ಮಾಸ್ಟರ್ ಪ್ಲಾನ್ ಪರಿಷ್ಕರಣೆಗೆ ಗ್ರೀನ್ ಸಿಗ್ನಲ್: ದಾವಣಗೆರೆಯಲ್ಲಿ 50 ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿ ಹೊಸ ಬಡಾವಣೆ!

Share
ದಾವಣಗೆರೆ
Share

ದಾವಣಗೆರೆ: ದಾವಣಗೆರೆ-ಹರಿಹರ ನಗರಾಭಿವೃದ್ದಿ ಪ್ರಾಧಿಕಾರದ ಮಾಸ್ಟರ್ ಪ್ಲಾನ್ ಪರಿಷ್ಕರಣೆಗೆ ಅನುಮೋದನೆ ನೀಡಿ ಪ್ರಾಧಿಕಾರದಿಂದ ಜನರಿಗೆ ಕೈಗೆಟುಕುವ ದರದಲ್ಲಿ ನಿವೇಶನ ಹಂಚಿಕೆ ಮಾಡಲು 50 ಎಕರೆಗಳಿಗಿಂತ ಹೆಚ್ಚು ಪ್ರದೇಶದಲ್ಲಿ ಹೊಸ ಬಡಾವಣೆ ನಿರ್ಮಿಸಲಾಗುತ್ತದೆ ಎಂದು ನಗರಾಭಿವೃದ್ದಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ಅವರು ಮಹಾನಗರ ಸಭಾಂಗಣದಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯ ಪ್ರಗತಿ ಪರಿಶೀಲನೆ ಮತ್ತು ದೂಡಾ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಂದುವಾಡ ಸರ್ವೆ ನಂಬರ್‍ನಲ್ಲಿ ಪ್ರಾಧಿಕಾರದಿಂದ ನಿವೇಶನ ರಚನೆ ಮಾಡಲು ಸ್ವಾಧೀನ ಮಾಡಿದ್ದ ಜಮೀನು ವಾಪಸ್ ನೀಡಲು ರೈತರ ಆಗ್ರಹವಾಗಿದ್ದು ಯಾರು ಜಮೀನು ನೀಡಲು ಒಪ್ಪಿ ಬರುತ್ತಾರೆ ಅಂತಹ ರೈತರ ಜಮೀನು ಮಾತ್ರ ಪಡೆಯಬೇಕು, ಇಲ್ಲವಾದಲ್ಲಿ ನೇರ ಖರೀದಿ ಮೂಲಕ ಎಲ್ಲಿ ಜಮೀನು ಸಿಗುತ್ತದೆ ಅಂತಹ ಕಡೆ ಪ್ರಾಧಿಕಾರದಿಂದ ನಿವೇಶನಗಳನ್ನು ಅಭಿವೃದ್ದಿಪಡಿಸಲಾಗುತ್ತದೆ ಎಂದರು.

ಬಿಲ್ಡಿಂಗ್ ಎತ್ತರ;

ಪ್ರಸ್ತುತ ನಿಯಮಗಳನ್ವಯ ನೆಲಮಹಡಿ ಸೇರಿ ಮೂರು ಅಂತಸ್ತು, ಇದನ್ನು ನೆಲಮಹಡಿ ಜೊತೆಗೆ 4 ಹಂತಸ್ತು ಮಾಡಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಕುಡಿಯುವ ನೀರು ನಿರ್ವಹಣೆಗೆ ಸೂಚನೆ:

ನಗರಕ್ಕೆ ತುಂಗಭದ್ರ ಡ್ಯಾಂ ಮತ್ತು ನದಿ ನೀರಿನ ಮೂಲವಾಗಿದ್ದು, ಟಿವಿ ಸ್ಟೇಷನ್ ಕೆರೆ ಮತ್ತು ಕುಂದವಾಡ ಕೆರೆಗಳಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಇನ್ನು ಎರಡು ತಿಂಗಳಿಗೆ ಆಗುವಷ್ಟು ನೀರು ಶೇಖರಿಸಲಾಗಿದೆ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ, ಅವರೆಗೆರೆ ಕೆರೆಯನ್ನು ನಗರದ ಕುಡಿಯುವ ನೀರಿಗೆ ಬಳಸಿಕೊಳ್ಳಲು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಪಾಲಿಕೆ ಆಯುಕ್ತರು ಸಭೆಗೆ ಮಾಹಿತಿ ನೀಡಿದರು.

ಈ ವೇಳೆ ಸಚಿವರು ಮಾತನಾಡಿ, ಎಲ್‍ನಿನೋ ಪರಿಣಾಮ ಮಳೆ ಕೊರತೆಯಿಂದ ತೀವ್ರ ಬರಗಾಲ ಎದುರಿಸಬೇಕಾದ ಸಂದರ್ಭದ ಹಿನ್ನೆಲೆಯಲ್ಲಿ, ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಪಾಲಿಕೆಯಿಂದ
ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದರು.

ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇಮಕಾತಿಗೆ ಬಾಕಿ ಇರುವ ಪೌರಕಾರ್ಮಿಕರ ನೇಮಕಾತಿಯನ್ನು ಕಾಲಮಿತಿಯೊಳಗೆ ಮುಗಿಸಲು ಕ್ರಮವಹಿಸಬೇಕು, ಎಸ್.ಸಿ.ಪಿ ಮತ್ತು ಟಿಎಸ್‍ಪಿ ಅನುದಾನವನ್ನು ಪೌರಕಾರ್ಮಿಕರ ಆರೋಗ್ಯ ಮತ್ತು ಅವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಲು ಈ ನಿಧಿ ಉಪಯೋಗಿಸಲು ತಿಳಿಸಿದರು.

ನಗರದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಹಾಗೂ ಪ್ರಸ್ತುತ ಇರುವ ಪಾರ್ಕ್‍ಗಳಲ್ಲಿ ಸಾರ್ವಜನಿಕರಿಗೆ ,ಹಿರಿಯ ನಾಗರೀಕರಿಗೆ, ಮಹಿಳೆಯರಿಗೆ, ಮಕ್ಕಳಿಗೆ ವಿಶೇಷ ಚೇತನರಿಗೆ ಆಸನ ಸೌಲಭ್ಯವನ್ನು ಮಾಡಬೇಕು, ಬೀದಿ ದೀಪಗಳು, ಶೌಚಾಲಯಗಳು, ಕ್ರೀಡಾ ಸಾಮಾಗ್ರಿಗಳು ಇರಬೇಕು ಮತ್ತು ಮಕ್ಕಳಿಗೆ ಅಪಾಯಕಾರಿಯಾಗುವಂತಹ ಯಾವುದೇ ಕ್ರೀಡಾ ವಸ್ತುಗಳನ್ನು ಅಳವಡಿಸಬೇಡಿ ಎಂದು ತಿಳಿಸಿದರು.

ಇ-ಖಾತಾ ಜನರಿಗೆ ಸುಲಭವಾಗಿ ಸಿಗುವಂತಾಗಬೇಕು, ಇದನ್ನು ಅಭಿಯಾನದ ರೀತಿ ಕೈಗೊಂಡು ಸರಳವಾಗಿ ಜನರಿಗೆ ಇ-ಖಾತಾ ದಾಖಲೆಗಳು ಸಿಗುವಂತೆ ನೋಡಿಕೊಳ್ಳಬೇಕೆಂದರು. ಈ ವೇಳೆ ಜಿಲ್ಲಾಧಿಕಾರಿ ಅವರು ಪ್ರತಿಕ್ರಿಯಿಸಿ ಪಾಲಿಕೆ ಸಿಬ್ಬಂದಿಗಳು ಇ-ಖಾತಾ ನೀಡುವ ವಿಷಯದಲ್ಲಿ ವಿಳಂಬ ಮಾಡುತ್ತಿದ್ದರು, ಇಬ್ಬರು ಸಿಬ್ಬಂದಿಗಳನ್ನು ಅಮಾನತು ಮಾಡಿದಾಗ ಎಲ್ಲರೂ ಎಚ್ಚರವಹಿಸಿ ಚುರುಕಾದರು ಎಂದರು.

ಸಭೆಯಲ್ಲಿ ಶಾಸಕರುಗಳಾದ ಎಸ್.ಎಸ್. ಮಲ್ಲಿಕಾರ್ಜುನ, ಸಮರ್ಥ ಶಾಮನೂರು ಮಲ್ಲಿಕಾರ್ಜುನ ,ಬಿ.ಪಿ. ಹರೀಶ್, ದುಡಾ ಅಧ್ಯಕ್ಷ ದಿನೇಶ್.ಕೆ ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಮಹಾನಗರಪಾಲಿಕೆ ಆಯುಕ್ತ ಮಹಾಂತೇಶ್, ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತೆ ರೇಣುಕಾ ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles