SUDDIKSHANA KANNADA NEWS/ DAVANAGERE/ DATE:12-12-2024
ದಾವಣಗೆರೆ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ-2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಬೆಳಗಾವಿಯಲ್ಲಿ ನಡೆದ ಹೋರಾಟದ ವೇಳೆ ಪಂಚಮಸಾಲಿ ಸಮಾಜ ಬಾಂಧವರ ಮೇಲೆ ಪೋಲೀಸರು ನಡೆಸಿದ ದೌರ್ಜನ್ಯ ಹಾಗೂ ಲಾಟಿ ಚಾರ್ಜ್ ಖಂಡಿಸಿ ಹಾಗೂ ಅಮಾಯಕರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ದಸ್ತಗಿರಿ ಮಾಡಿದ ಕ್ರಮವನ್ನು ಖಂಡಿಸಿ ದಾವಣಗೆರೆಯ ಜಯದೇವ ವೃತ್ತದಲ್ಲಿ ಪಂಚಮಸಾಲಿ ಸಮಾಜ ಬಾಂಧವರು ಪ್ರತಿಭಟನೆ ನಡೆಸಿದರು.
ಈ ವೇಳೆ ಸಮಾಜದ ಮುಖಂಡರಾದ ಮಾಜಿ ಶಾಸಕ ಹೆಚ್.ಎಸ್ ಶಿವಶಂಕರ್ ಮಾತನಾಡಿ ಬೆಳಗಾವಿಯಲ್ಲಿ ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿರುವುದು ಖಂಡನೀಯ. ಪಂಚಮಸಾಲಿಮಠದ ಗುರುಗಳಾದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಸಮಾವೇಶ ನಡೆಸಲಾಗಿತ್ತು ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೋರಾಟಗಾರರಿಗೆ ಸ್ಪಂದಿಸಲಿಲ್ಲ ಸ್ಥಳಕ್ಕೆ ಬಂದು ಮನವಿ ಪಡೆಯದೆ ನೆಪಮಾತ್ರಕ್ಕೆ 4-5 ಜನರನ್ನು ಭೇಟಿಯಾಗಲು ಹೇಳಿದ್ದೇ ಅವರು ಬರಲಿಲ್ಲ ಎಂದು ಬೇಜವಾಬ್ದಾರಿ ಉತ್ತರ ನೀಡಿರುವುದು ಖಂಡನೀಯ ಎಂದು ಹೇಳಿದರು.
ಹೋರಾಟಗಾರರ ಸಹನೆಯ ಕಟ್ಟೆ ಒಡೆದಿದೆ. ಆದರೂ ಶಾಂತ ರೀತಿಯಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ್ದರು. ಆದರೆ ಸರಕಾರ ಹೋರಾಟಗಾರರ ಮನವೊಲಿಸುವ ಬದಲು ಲಾಠಿ ಚಾರ್ಜ್ ಮಾಡಿ ಹಿಟ್ಲರ್ ಸಂಸ್ಕೃತಿ ಅನುಸರಿಸಿದೆ. ಅಮಾಯಕ ಹೋರಾಟಗಾರರ ಕೈ ಮುರಿದಿದೆ. ಕೆಲವರ ತಲೆ ಒಡೆದು ಗಂಭೀರ ಗಾಯಗಳಾಗಿವೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಮಾಯಕ ಪಂಚಮಸಾಲಿ ಹೋರಾಟಗಾರರ ಮೇಲೆ ದಬ್ಬಾಳಿಕೆ ಮಾಡಿದೆ. ಪಂಚಮಸಾಲಿ ಸಮಾಜದ ಜನ ಮುಂದೆ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲಿದ್ದಾರೆಂದರು.
ತಕ್ಷಣ ಸಿ ಎಂ ಸಿದ್ದರಾಮಯ್ಯ ಹೋರಾಟಗಾರರ ಮೀಸಲಾತಿ ಹೋರಾಟಕ್ಕೆ ಉತ್ತರ ನೀಡಬೇಕೆಂದು ಆಗ್ರಹಿಸಿದರು. ಪಂಚಮಸಾಲಿ ಸಮಾಜ ಬಾಂಧವರು ಕೃಷಿ ಕುಟುಂಬದಿಂದ ಬಂದವರು ರೈತರು. ರೈತರೇ ದೇಶಕ್ಕೆ ಅನ್ನ ಹಾಕುವಂತವರು. ಅಂತವರ ಮೇಲೆ ಪೋಲೀಸರಿಂದ ಲಾಠಿ ಪ್ರಹಾರ ಮಾಡಿಸಿದ್ದರಿಂದ ಅವರ ಸಹನೆಯ ಕಟ್ಟೆ ಒಡೆದಿದೆ. ಬರುವಂತ ಮುಂದಿನ ದಿನಗಳಲ್ಲಿ ಸಮಾಜದ ಜನ ಬಡ್ಡಿ ಸಮೇತ ಇದಕ್ಕೆ ತಕ್ಕ ಉತ್ತರ ಕೊಡುತ್ತೇವೆ. ಮುಂದೆ ಇದಕ್ಕಿಂತ ಉಗ್ರ ಹೋರಾಟ ನಡೆಸುತ್ತೇವೆ. ಸಿ ಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನವರು ಪಂಚಮಸಾಲಿ ಶ್ರೀಗಳ ಹಾಗೂ ಪಂಚಮಸಾಲಿ ಹೋರಾಟಗಾರರ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಮಾಜದ ಮುಖಂಡರಾದ ಬಿ.ಜಿ ಅಜಯ್ ಕುಮಾರ್, ಚಂದ್ರಶೇಖರ್ ಪೂಜಾರ್,ಅಶೋಕ್ ಗೋಪನಾಳ್, ಮಹಾಂತೇಶ್ ಒಣರೊಟ್ಟಿ,ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್,ಪಾಲಿಕೆ ಸದಸ್ಯರಾದ ಕೆ.ಎಂ ವಿರೇಶ್,ವಕೀಲ ಯೋಗೀಶ್, ಚನ್ನಬಸವನಗೌಡ, ಮಹೇಶ್ ಬನ್ನಿಕೋಡು,ಎಸ್.ಎನ್ ಮಲ್ಲಿಕಾರ್ಜುನ್,ಕಿರಣ್ ಮತ್ತಿತರರಿದ್ದರು.