SUDDIKSHANA KANNADA NEWS/ DAVANAGERE/ DATE:12-12-2024
ಬೆಳಗಾವಿ: ಪಂಚಮಸಾಲಿ ಸಮುದಾಯದ 2ಎ ಪ್ರವರ್ಗದ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟವನ್ನು ಹತ್ತಿಕ್ಕುವ ದುರಾದ್ದೇಶದಿಂದ ಚಳುವಳಿ ನಿರತ ಹೋರಾಟಗಾರರ ಮೇಲೆ ಲಾಠಿಚಾರ್ಜ್ ಪ್ರಯೋಗಿಸಿರುವ ಕಾಂಗ್ರೆಸ್ ಸರ್ಕಾರದ ಕ್ರಮ ಖಂಡಿಸಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಬಿ. ವೈ. ವಿಜಯೇಂದ್ರ ಅವರು ಪ್ರಜಾಪ್ರಭುತ್ವದ ವ್ಯವಸ್ಥೆಯ ಮೇಲೆ ವಿಶ್ವಾಸವಿಲ್ಲವೆಂಬಂತೆ ನಡೆದುಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದಲ್ಲಿ ಹೋರಾಟಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳು ಈ ಕೂಡಲೇ ಪಂಚಮಸಾಲಿ ಸಮಾಜದ ಕ್ಷಮೆ ಯಾಚಿಸಿ, ದಬ್ಬಾಳಿಕೆ ನಡೆಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದನ್ನು ಇಲ್ಲಿಗೆ ಬಿಡುವುದಿಲ್ಲ. ಪಂಚಮಸಾಲಿ ಸಮಾಜದವರ ಸಿಟ್ಟು, ಆಕ್ರೋಶಕ್ಕೆ ಸಕ್ಕಾರ ತುತ್ತಾಗುವುದು ಖಚಿತ. ಅಧಿಕಾರ ಕಳೆದುಕೊಂಡರೂ ಅಚ್ಚರಿ ಇಲ್ಲ. ಪಂಚಮಸಾಲಿಗಳ ಸಹನೆ ಕೆಣಕಬೇಡಿ ಎಂದು ಎಚ್ಚರಿಕೆ ನೀಡಿದರು.
ಪಂಚಮಸಾಲಿ ಮೀಸಲಾತಿ ಹೋರಾಟವನ್ನು ಮುಖ್ಯಮಂತ್ರಿಗಳ ಕುಮ್ಮಕ್ಕಿನಿಂದಲೇ ಹತ್ತಿಕ್ಕುವ ಕೆಲಸವಾಗಿದೆ. ಲಾಠಿ ಚಾರ್ಜ್, ಹಿಂಸೆಯ ಮೂಲಕ ಪಂಚಮಸಾಲಿ ಹೋರಾಟಗಾರರನ್ನು ಬೆದರಿಸಲು ಯತ್ನಿಸಿದ ಷಡ್ಯಂತ್ರ ಅಕ್ಷಮ್ಯ ಅಪರಾಧ. ಸಿದ್ದರಾಮಯ್ಯ ಅವರು ಈ ಕೂಡಲೇ ಕ್ಷಮೆಯಾಚಿಸಬೇಕು. ಸರ್ಕಾರ ಈ ಕೂಡಲೇ ಲಾಠಿ ಚಾರ್ಜ್ ನಡೆಸಿದ, ದರ್ಪದಿಂದ ಮೆರೆದ ಪೊಲೀಸರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸುತ್ತೇನೆ. ಸದನದಲ್ಲೂ ಈ ವಿಚಾರವನ್ನು ಪ್ರಸ್ತಾಪಿಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಡಾ. ಅಶ್ವತ್ ನಾರಾಯಣ್, ಶಾಸಕ ಬಿ. ಪಿ. ಹರೀಶ್ ಮತ್ತಿತರರು ಹಾಜರಿದ್ದರು.