Home ದಾವಣಗೆರೆ ಇನ್ಮುಂದೆ ಹೊಸ ಪಾಸ್‌ಪೋರ್ಟ್‌ಗೆ 2,500 ರೂ., ತತ್ಕಾಲ್‌ಗೆ 5,000 ರೂ.; ಜುಲೈನಿಂದ ಹೊಸ ನಿಯಮ ಜಾರಿ!
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ಇನ್ಮುಂದೆ ಹೊಸ ಪಾಸ್‌ಪೋರ್ಟ್‌ಗೆ 2,500 ರೂ., ತತ್ಕಾಲ್‌ಗೆ 5,000 ರೂ.; ಜುಲೈನಿಂದ ಹೊಸ ನಿಯಮ ಜಾರಿ!

Share
ಪಾಸ್‌ಪೋರ್ಟ್‌
Share

ನವದೆಹಲಿ: ವಿದೇಶ ಪ್ರಯಾಣ ಬೆಳೆಸಲು ಸಜ್ಜಾಗುತ್ತಿರುವ ಸಾರ್ವಜನಿಕರಿಗೆ ಕೇಂದ್ರ ಸರ್ಕಾರ ಭಾರಿ ಶಾಕ್ ನೀಡಿದೆ. ಸುಮಾರು 14 ವರ್ಷಗಳ ದೀರ್ಘ ಅವಧಿಯ ನಂತರ ದೇಶದಲ್ಲಿ ಪಾಸ್‌ಪೋರ್ಟ್ ಅರ್ಜಿ ಶುಲ್ಕವನ್ನು ಗಣನೀಯವಾಗಿ ಹೆಚ್ಚಳ ಮಾಡಲಾಗಿದೆ. ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಹೊರಡಿಸಿರುವ ಹೊಸ ನಿಯಮಾವಳಿಗಳ ಪ್ರಕಾರ, ಪರಿಷ್ಕೃತ ದರಗಳು ಮುಂಬರುವ ಜುಲೈ 1, 2026 ರಿಂದ ಜಾರಿಗೆ ಬರಲಿವೆ.

ಯಾವ ಕೆಟಗರಿಗೆ ಎಷ್ಟು ಶುಲ್ಕ? (ಹೊಸ ದರ ಪಟ್ಟಿ):

  • ಸಾಮಾನ್ಯ ಪಾಸ್‌ಪೋರ್ಟ್ (36 ಪುಟಗಳು): ಸಾಮಾನ್ಯ ಯೋಜನೆಯಡಿ 18 ವರ್ಷ ಮೇಲ್ಪಟ್ಟವರಿಗೆ ಹೊಸ ಅಥವಾ ಮರು-ವಿತರಣೆ (Reissue) ಪಾಸ್‌ಪೋರ್ಟ್ ಶುಲ್ಕವನ್ನು ಪ್ರಸ್ತುತ ಇರುವ 1,500 ರೂ.ಗಳಿಂದ 2,500 ರೂ. ಗೆ ಏರಿಸಲಾಗಿದೆ.

  • ತತ್ಕಾಲ್ ಪಾಸ್‌ಪೋರ್ಟ್ (36 ಪುಟಗಳು): ತುರ್ತು ಅಗತ್ಯಗಳಿಗಾಗಿ ಬಳಸುವ ತತ್ಕಾಲ್ ಶುಲ್ಕವು 3,500 ರೂ.ಗಳಿಂದ ನೇರವಾಗಿ 5,000 ರೂ. ಗೆ ಹೆಚ್ಚಳವಾಗಿದೆ.

  • 60 ಪುಟಗಳ ಜಂಬೋ ಪಾಸ್‌ಪೋರ್ಟ್: ಸಾಮಾನ್ಯ ವಿಭಾಗದಲ್ಲಿ ಇದರ ದರ 2,000 ರೂ.ಗಳಿಂದ 3,500 ರೂ. ಗೆ ಹಾಗೂ ತತ್ಕಾಲ್ ವಿಭಾಗದಲ್ಲಿ 4,000 ರೂ.ಗಳಿಂದ 6,000 ರೂ. ಗೆ ಏರಿಕೆಯಾಗಿದೆ.

ಮೈನರ್ಸ್ (18 ವರ್ಷದೊಳಗಿನ ಮಕ್ಕಳಿಗೆ):

18 ವರ್ಷದೊಳಗಿನ ಅಪ್ರಾಪ್ತ ವಯಸ್ಕರಿಗೆ 36 ಪುಟಗಳ ಹೊಸ ಅಥವಾ ನವೀಕೃತ ಪಾಸ್‌ಪೋರ್ಟ್‌ಗೆ ಸಾಮಾನ್ಯ ಯೋಜನೆಯಡಿ 1,750 ರೂ. ಹಾಗೂ ತತ್ಕಾಲ್ ಅಡಿಯಲ್ಲಿ 4,250 ರೂ. ನಿಗದಿಪಡಿಸಲಾಗಿದೆ.

ಕಳೆದುಹೋದ/ಹಾನಿಗೊಳಗಾದ ಪಾಸ್‌ಪೋರ್ಟ್ ಬದಲಿ ಶುಲ್ಕ:

ಒಂದು ವೇಳೆ ಪಾಸ್‌ಪೋರ್ಟ್ ಕಳೆದುಹೋಗಿದ್ದರೆ ಅಥವಾ ಹಾನಿಗೊಳಗಾಗಿದ್ದರೆ, ಅದರ ಬದಲಿಗೆ ಹೊಸ 36 ಪುಟಗಳ ಪಾಸ್‌ಪೋರ್ಟ್ ಪಡೆಯಲು ಸಾಮಾನ್ಯ ವಿಭಾಗದಲ್ಲಿ 5,000 ರೂ. ಮತ್ತು ತತ್ಕಾಲ್‌ನಲ್ಲಿ 7,500 ರೂ. ಪಾವತಿಸಬೇಕಾಗುತ್ತದೆ. ಅದೇ ರೀತಿ 60 ಪುಟಗಳ ಬದಲಿಗೆ ಪಡೆಯುವ ಪಾಸ್‌ಪೋರ್ಟ್‌ಗೆ ಕ್ರಮವಾಗಿ 6,000 ರೂ. ಮತ್ತು 8,500 ರೂ. ನಿಗದಿ ಮಾಡಲಾಗಿದೆ.

ಇತರ ಸೇವೆಗಳ ದರ:

ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ (PCC), ಸರೆಂಡರ್ ಸರ್ಟಿಫಿಕೇಟ್ ಹಾಗೂ ಗ್ಲೋಬಲ್ ಎಂಟ್ರಿ ಪ್ರೋಗ್ರಾಂ ವೆರಿಫಿಕೇಶನ್ ಸೇವೆಗಳ ಶುಲ್ಕವನ್ನು ಭಾರತದಲ್ಲಿ 750 ರೂ. ಮತ್ತು ವಿದೇಶಗಳಲ್ಲಿ 40 ಯುಎಸ್ ಡಾಲರ್ ಎಂದು ನಿಗದಿಪಡಿಸಲಾಗಿದೆ.

ಕಳೆದ 2012 ರ ಬಳಿಕ ದೇಶದಲ್ಲಿ ಪಾಸ್‌ಪೋರ್ಟ್ ಶುಲ್ಕದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಇದೀಗ ಜೂನ್ 20 ರಂದು ಹೊರಡಿಸಲಾದ ಅಧಿಕೃತ ಗೆಜೆಟ್ ನೋಟಿಫಿಕೇಶನ್ ಪ್ರಕಾರ, ಜುಲೈ 1 ಅಥವಾ ಅದಾದ ನಂತರ ಸಲ್ಲಿಕೆಯಾಗುವ ಎಲ್ಲಾ ಹೊಸ ಅರ್ಜಿಗಳಿಗೆ ಈ ಪರಿಷ್ಕೃತ ಶುಲ್ಕಗಳು ಅನ್ವಯವಾಗಲಿವೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

Share

Leave a comment

Leave a Reply

Your email address will not be published. Required fields are marked *

Related Articles