ಬೆಂಗಳೂರು: ರಾಜಧಾನಿ ಬೆಂಗಳೂರಿನ ಎಂ.ಎಸ್. ನಗರ ಅಗ್ರಹಾರ ಲೇಔಟ್ನ ಖಾಲಿ ಸೈಟ್ ಒಂದರಲ್ಲಿ ಶವವೊಂದು ಪತ್ತೆಯಾಗಿದ್ದು, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿಯನ್ನೇ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ:
ಅಗ್ರಹಾರ ಲೇಔಟ್ನಲ್ಲಿರುವ ಖಾಲಿ ಸೈಟ್ನಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಲು ಬಂದಿದ್ದ ಕಾರ್ಮಿಕರು, ಹಳೆಯ ಹಾಸಿಗೆಯೊಂದು ಬಿದ್ದಿರುವುದನ್ನು ಗಮನಿಸಿದ್ದಾರೆ. ಅದನ್ನು ತೆಗೆಯಲು ಹೋದಾಗ ಕಾಲಿನ ಬೆರಳುಗಳು ಹೊರ ಚಾಚಿರುವುದು ಕಂಡುಬಂದಿದೆ. ಗಾಬರಿಗೊಂಡ ಕಾರ್ಮಿಕರು ತಕ್ಷಣವೇ ಸ್ಥಳೀಯರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಟ್ಟೆಯ ಟ್ಯಾಗ್ ನೀಡಿತ್ತು ಪ್ರಮುಖ ಸುಳಿವು:
ಮೃತದೇಹವು ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿದ್ದು, ಗುರುತು ಹಿಡಿಯುವುದು ಕಷ್ಟವಾಗಿತ್ತು. ಆದರೆ, ಶವದ ಮೇಲಿದ್ದ ಬಟ್ಟೆಯ ಮೇಲಿನ ಶಾಪಿಂಗ್ ಟ್ಯಾಗ್ ಆಧರಿಸಿ ತನಿಖೆ ನಡೆಸಿದ ಪೊಲೀಸರು, ಮೃತರನ್ನು ಒಡಿಶಾ ಮೂಲದ ಅನುಸೂಯ (28) ಎಂದು ಗುರುತಿಸಿದ್ದಾರೆ.
ಸಂಬಳದ ವಿಚಾರಕ್ಕೆ ನಡೆದಿತ್ತು ಗಲಾಟೆ:
ಹೋಟೆಲ್ನಲ್ಲಿ ಕಿಚನ್ ಸೂಪರ್ವೈಸರ್ ಆಗಿ ಕೆಲಸ ಮಾಡುತ್ತಿದ್ದ ಆಕೆಯ ಪತಿ ಸಾಗರ್ ಚಂದ್ರ ರಾವತ್ (32) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ಸತ್ಯ ಹೊರಬಂದಿದೆ. ಆಗಸ್ಟ್ 11 ರಂದು ದಂಪತಿ ನಡುವೆ ಕೆಲಸ ಹಾಗೂ ಸಂಬಳದ ವಿಚಾರವಾಗಿ ತೀವ್ರ ಜಗಳ ನಡೆದಿದ್ದು, ಸಾಗರ್ ಆಕೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ 3 ದಿನ ಶವವನ್ನು ಮನೆಯಲ್ಲೇ ಇಟ್ಟು, ನಂತರ ಹಾಸಿಗೆಯಲ್ಲಿ ಸುತ್ತಿ ತಡರಾತ್ರಿ ಖಾಲಿ ಜಾಗದಲ್ಲಿ ಎಸೆದಿದ್ದ.
ಸದ್ಯ ಸಂಪಿಗೆಹಳ್ಳಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.





Leave a comment