Home ದಾವಣಗೆರೆ ಸೈಬರ್ ವಂಚನೆ ಜಾಲ ಭೇದಿಸಿದ ದಾವಣಗೆರೆ ಖಾಕಿ: ಅಮೆಜಾನ್ ಟಾಸ್ಕ್ ಹೆಸರಲ್ಲಿ ವಂಚಿಸುತ್ತಿದ್ದ ಗುರುಮೂರ್ತಿ ಬಂಧನ!
ದಾವಣಗೆರೆಕ್ರೈಂ ನ್ಯೂಸ್ಬೆಂಗಳೂರು

ಸೈಬರ್ ವಂಚನೆ ಜಾಲ ಭೇದಿಸಿದ ದಾವಣಗೆರೆ ಖಾಕಿ: ಅಮೆಜಾನ್ ಟಾಸ್ಕ್ ಹೆಸರಲ್ಲಿ ವಂಚಿಸುತ್ತಿದ್ದ ಗುರುಮೂರ್ತಿ ಬಂಧನ!

Share
ದಾವಣಗೆರೆ
Share

ದಾವಣಗೆರೆ: ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಟೆಲಿಗ್ರಾಂ (Telegram App) ಮೂಲಕ ಸಾರ್ವಜನಿಕರಿಗೆ ಪಾರ್ಟ್ ಟೈಮ್ ಕೆಲಸದ ಆಮಿಷ ಒಡ್ಡಿ ಲಕ್ಷಾಂತರ ರೂಪಾಯಿ ಲೂಟಿ ಮಾಡುತ್ತಿದ್ದ ಸೈಬರ್ ವಂಚನೆ ಜಾಲದ ಮತ್ತೊಬ್ಬ ಪ್ರಮುಖ ಆರೋಪಿಯನ್ನು ದಾವಣಗೆರೆ ಸೈಬರ್ ಕ್ರೈಂ ಪೊಲೀಸ್ ತಂಡ ಯಶಸ್ವಿಯಾಗಿ ಬಂಧಿಸಿದೆ.

ಬಂಧಿತ ಆರೋಪಿಯನ್ನು ಬೆಂಗಳೂರು ನಿವಾಸಿ ಗುರುಮೂರ್ತಿ ಎಸ್. (24 ವರ್ಷ) ಎಂದು ಗುರುತಿಸಲಾಗಿದೆ. ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಆರೋಪಿ ಹರೀಶ್ ಕುಮಾರ್ ಎಂ. ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಈಗ ಎರಡನೇ ಆರೋಪಿಯೂ ಕಟಕಟೆ ಹತ್ತಿದ್ದಾನೆ.

ಅಮೆಜಾನ್ ಟಾಸ್ಕ್ ಹೆಸರಲ್ಲಿ ವಂಚನೆ:

2025ರ ಜನವರಿ 20 ರಂದು ದೂರುದಾರರು ತಮ್ಮ ಮೊಬೈಲ್‌ನಲ್ಲಿ ಟೆಲಿಗ್ರಾಂ ಆ್ಯಪ್ ಬಳಸುತ್ತಿದ್ದಾಗ ವಂಚಕರು ಸಂಪರ್ಕಿಸಿದ್ದರು. “Amazon Working Benefits Task – Work from Home Job” ನೀಡುವುದಾಗಿ ನಂಬಿಸಿ ಲಿಂಕ್ ಕಳುಹಿಸಿದ್ದರು.

ಆರಂಭದಲ್ಲಿ ಇದರಲ್ಲಿ ಹೂಡಿಕೆ ಮಾಡಿದರೆ ಅತಿ ಹೆಚ್ಚು ಲಾಭ ಗಳಿಸಬಹುದು ಎಂದು ನಂಬಿಸಿದ ಸೈಬರ್ ಕಳ್ಳರು, ದೂರುದಾರರಿಂದ ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆ ಹಾಗೂ ಯುಪಿಐ (UPI) ಐಡಿಗಳಿಗೆ ಒಟ್ಟು ರೂ. 5,60,000/- ವರ್ಗಾವಣೆ ಮಾಡಿಸಿಕೊಂಡು ಕೈಕೊಟ್ಟಿದ್ದರು. ಈ ಬಗ್ಗೆ ಜನವರಿ 25, 2025 ರಂದು ದಾವಣಗೆರೆ ಸೈಬರ್ ಠಾಣೆಯಲ್ಲಿ ಐಟಿ ಆಕ್ಟ್ ಹಾಗೂ ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಪೊಲೀಸ್ ತಂಡದ ಭರ್ಜರಿ ಕಾರ್ಯಾಚರಣೆ:

ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳ ನೇರ ಮಾರ್ಗದರ್ಶನದಲ್ಲಿ, ಸೈಬರ್ ಕ್ರೈಂ ಡಿವೈಎಸ್‌ಪಿ ಬಂಕಾಳಿ ನಾಗಪ್ಪ ನೇತೃತ್ವದ ಹೆಡ್ ಕಾನ್ಸ್‌ಟೇಬಲ್ ಹಾಗೂ ಕಾನ್ಸ್‌ಟೇಬಲ್‌ಗಳಾದ ಅಶೋಕ, ಲೋಹಿತ್, ನಿಜಲಿಂಗಪ್ಪ ಮತ್ತು ಯೋಗೀಶ್ ನಾಯ್ಕ್ ಅವರನ್ನೊಳಗೊಂಡ ವಿಶೇಷ ತಂಡ ಜೂನ್ 18, 2026 ರಂದು ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿ ಗುರುಮೂರ್ತಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಯಶಸ್ವಿ ಕಾರ್ಯಾಚರಣೆ ನಡೆಸಿದ ಇಡೀ ತಂಡಕ್ಕೆ ದಾವಣಗೆರೆ ಎಸ್‌ಪಿ  ಶೇಖರ್ ಹೆಚ್.ಟಿ, ಐಪಿಎಸ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *