Home ದಾವಣಗೆರೆ ಕಫ್ ಸಿರಪ್ ಪ್ರಿಯರಿಗೆ ಶಾಕ್: ಇನ್ಮುಂದೆ ಡಾಕ್ಟರ್ ಚೀಟಿ ಇಲ್ಲದೆ ಕೆಮ್ಮಿನ ಸಿರಪ್ ಸಿಗಲ್ಲ! ಕೇಂದ್ರ ಸರ್ಕಾರ ಮಹತ್ವದ ಆದೇಶ
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಕಫ್ ಸಿರಪ್ ಪ್ರಿಯರಿಗೆ ಶಾಕ್: ಇನ್ಮುಂದೆ ಡಾಕ್ಟರ್ ಚೀಟಿ ಇಲ್ಲದೆ ಕೆಮ್ಮಿನ ಸಿರಪ್ ಸಿಗಲ್ಲ! ಕೇಂದ್ರ ಸರ್ಕಾರ ಮಹತ್ವದ ಆದೇಶ

Share
ಸಿರಪ್
Share

ನವದೆಹಲಿ: ದೇಶದಲ್ಲಿ ಕೆಮ್ಮಿನ ಸಿರಪ್ ಸೇರಿದಂತೆ ಎಲ್ಲಾ ರೀತಿಯ ಲಿಕ್ವಿಡ್ ಸಿರಪ್ (Syrup) ಆಧಾರಿತ ಔಷಧಿಗಳ ಮಾರಾಟಕ್ಕೆ ಕೇಂದ್ರ ಸರ್ಕಾರವು ಭಾರಿ ದೊಡ್ಡ ಬ್ರೇಕ್ ಹಾಕಿದೆ. ಇನ್ಮುಂದೆ ಯಾವುದೇ ಮೆಡಿಕಲ್ ಸ್ಟೋರ್‌ಗಳಲ್ಲಿ ವೈದ್ಯರ ಲಿಖಿತ ಚೀಟಿ (Prescription) ಇಲ್ಲದೆ ಓವರ್-ದಿ-ಕೌಂಟರ್ (OTC) ಮೂಲಕ ಸಿರಪ್‌ಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.

ಶೆಡ್ಯೂಲ್ ಕೆ (Schedule K) ನಿಯಮಕ್ಕೆ ತಿದ್ದುಪಡಿ:

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ‘ಡ್ರಗ್ಸ್ (ಐದನೇ ತಿದ್ದುಪಡಿ) ನಿಯಮಗಳು, 2026’ ರ ಅಡಿಯಲ್ಲಿ ಈ ಹೊಸ ನಿಯಮವನ್ನು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಿದೆ. ಈ ತಿದ್ದುಪಡಿಯ ಪ್ರಕಾರ, 1945 ರ ಡ್ರಗ್ಸ್ ನಿಯಮಾವಳಿಗಳ ‘ಶೆಡ್ಯೂಲ್ ಕೆ’ ನ ಐಟಂ 7 ರಲ್ಲಿ ಉಲ್ಲೇಖಿಸಲಾಗಿದ್ದ “ಸಿರಪ್ಸ್” (Syrups) ಎಂಬ ಪದವನ್ನು ಕೈಬಿಡಲಾಗಿದೆ. ಇದುವರೆಗೆ ಶೆಡ್ಯೂಲ್ ಕೆ ಅಡಿಯಲ್ಲಿ ಸಿರಪ್‌ಗಳ ಮುಕ್ತ ಮಾರಾಟಕ್ಕೆ ಇದ್ದ ವಿನಾಯಿತಿಯನ್ನು ಈಗ ರದ್ದುಗೊಳಿಸಲಾಗಿದೆ.

ಕಾರಣವೇನು?

ಕಳೆದ ಕೆಲವು ವರ್ಷಗಳಲ್ಲಿ ಜಾಗತಿಕವಾಗಿ ಹಾಗೂ ದೇಶದ ಕೆಲವು ರಾಜ್ಯಗಳಲ್ಲಿ ಕಲುಷಿತ ಕೆಮ್ಮಿನ ಸಿರಪ್ ಸೇವನೆಯಿಂದಾಗಿ ಮಕ್ಕಳು ಸಾವನ್ನಪ್ಪಿದ ಗಂಭೀರ ಪ್ರಕರಣಗಳು ವರದಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಔಷಧಿಗಳ ಗುಣಮಟ್ಟ ಕಾಯ್ದುಕೊಳ್ಳಲು, ನಕಲಿ ಔಷಧಿಗಳ ಹಾವಳಿ ತಡೆಯಲು ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು ಡ್ರಗ್ಸ್ ತಾಂತ್ರಿಕ ಸಲಹಾ ಮಂಡಳಿ (DTAB) ಯೊಂದಿಗೆ ಸಮಾಲೋಚನೆ ನಡೆಸಿ ಕೇಂದ್ರ ಸರ್ಕಾರ ಈ ಕಠಿಣ ನಿರ್ಧಾರ ಕೈಗೊಂಡಿದೆ.

ಗ್ರಾಹಕರು ಮತ್ತು ಫಾರ್ಮಸಿಗಳ ಗಮನಕ್ಕೆ:

ಹೊಸ ನಿಯಮಗಳು ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಯಾವುದೇ ಫಾರ್ಮಸಿ ಅಥವಾ ಮೆಡಿಕಲ್ ಶಾಪ್‌ಗಳು ನೋಂದಾಯಿತ ವೈದ್ಯರ ಚೀಟಿ ಇಲ್ಲದೆ ಸಿರಪ್ ಮಾರಾಟ ಮಾಡಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಆದರೆ, ಕೆಮ್ಮಿಗೆ ಬಳಸುವ ಮಾತ್ರೆಗಳು (Tablets) ಮತ್ತು ಲೋಜೆಂಜ್‌ಗಳು (Lozenges) ಎಂದಿನಂತೆ ವೈದ್ಯರ ಚೀಟಿ ಇಲ್ಲದೆಯೂ ಲಭ್ಯವಿರಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *