ದಾವಣಗೆರೆ: ಜಿಲ್ಲೆಯ ಮಹಾನಗರ ಪಾಲಿಕೆ ಹಾಗೂ ವಿವಿಧ ಪುರಸಭೆ ವ್ಯಾಪ್ತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು ಮತ್ತು ಒಳಚರಂಡಿ ಕಾರ್ಮಿಕರ ಜ್ವಲಂತ ಸಮಸ್ಯೆಗಳನ್ನು ಸರ್ಕಾರದ ನಿಯಮಾವಳಿಗಳ ಚೌಕಟ್ಟಿನಲ್ಲಿ ಶೀಘ್ರವಾಗಿ ಬಗೆಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ನೇಮಕಾತಿ ನಿಷೇಧ ಮತ್ತು ಪುನರ್ ವಸತಿ ಕಾಯ್ದೆ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸದ್ಯ ಜಾರಿಯಲ್ಲಿರುವ ಟೆಂಡರ್/ಗುತ್ತಿಗೆ ಪದ್ಧತಿಯನ್ನು ಸ್ಥಗಿತಗೊಳಿಸಿ, ಕಾರ್ಮಿಕರಿಗೆ ಕಾಯಂ ಉದ್ಯೋಗಾವಕಾಶ ಕಲ್ಪಿಸಬೇಕೆಂಬ ಕಾರ್ಮಿಕರ ಬೇಡಿಕೆಯನ್ನು ಕಾನೂನಾತ್ಮಕವಾಗಿ ಪರಿಶೀಲಿಸಲಾಗುವುದು. ಎಪಿಎಂಸಿ ಆವರಣದಲ್ಲಿ ದೀರ್ಘಕಾಲದಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಕಾರ್ಮಿಕರನ್ನೂ ಈ ಪ್ರಕ್ರಿಯೆಯಲ್ಲಿ ಪರಿಗಣಿಸಲು ಸರ್ಕಾರದ ಆದೇಶ ಹಾಗೂ ನಿಯಮಾವಳಿಗಳ ನೇರ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲಾಗುವುದು. ಈ ಪ್ರಕ್ರಿಯೆಯಲ್ಲಿ ಮೀಸಲಾತಿ ರೋಸ್ಟರ್ ಬಿಂದುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಹಾಗೂ ಈ ಹಿಂದೆ ಹೊರಡಿಸಲಾಗಿದ್ದ ಅಧಿಸೂಚನೆಗಳನ್ನು ಪರಿಷ್ಕರಿಸಿ, ಹೊಸದಾಗಿ ಪ್ರಕ್ರಿಯೆ ಆರಂಭಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ನಗರಾಭಿವೃದ್ಧಿ ಹಾಗೂ ಗ್ರಾಮೀಣ ಭಾಗದ ಪೌರಕಾರ್ಮಿಕರು ಮತ್ತು ನೈರ್ಮಲ್ಯ ಕಾರ್ಮಿಕರ ಆರೋಗ್ಯ ರಕ್ಷಣೆ ಮತ್ತು ಸುರಕ್ಷತೆಗೆ ವಿಶೇಷ ಒತ್ತು ನೀಡಲಾಗುತ್ತಿದ್ದು, ಮುಂಬರುವ ಜುಲೈ ತಿಂಗಳಿನಲ್ಲಿ ದಾವಣಗೆರೆ ಜಿಲ್ಲೆ, ಹರಿಹರ ಹಾಗೂ ಹೊನ್ನಾಳಿ ಸೇರಿದಂತೆ ಎಲ್ಲಾ ತಾಲ್ಲೂಕು ಮಟ್ಟದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲು ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಿಯಮದಂತೆ ಗ್ಲೌಸ್, ಮಾಸ್ಕ್, ಗಡುಸು ಬೂಟುಗಳು (Shoes) ಸೇರಿದಂತೆ ಅಗತ್ಯ ಸುರಕ್ಷತಾ ಪರಿಕರಗಳನ್ನು ನಿರಂತರವಾಗಿ ವಿತರಿಸಲು ಸೂಚಿಸಿದರು. 50 ವರ್ಷ ಮೇಲ್ಪಟ್ಟ ಪಾಲಿಕೆಯ ಎಲ್ಲಾ ನೌಕರರು ಮತ್ತು ಕಾರ್ಮಿಕರಿಗೆ ಹರ್ಪಿಸ್ (ಸರ್ಪಸುತ್ತು) ಕಾಯಿಲೆ ನಿಯಂತ್ರಿಸುವ ‘ಶಿಂಗಲ್ಸ್’ ವ್ಯಾಕ್ಸಿನ್ ಅನ್ನು ಎರಡು ತಿಂಗಳ ಅಂತರದಲ್ಲಿ ಎರಡು ಡೋಸ್ಗಳನ್ನು ಕೊಡಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಪೌರಕಾರ್ಮಿಕರ ಮತ್ತು ಸ್ವಚ್ಛತಾ ಕಾರ್ಮಿಕರ ಮಕ್ಕಳಿಗೆ ಸಿಗಬೇಕಾದ ಶೈಕ್ಷಣಿಕ ವಿದ್ಯಾರ್ಥಿವೇತನ (Scholarship) ಮತ್ತು ಇತರ ಸೌಲಭ್ಯಗಳು ವಿಳಂಬವಿಲ್ಲದೆ ತಲುಪುವಂತೆ ನೋಡಿಕೊಳ್ಳಲಾಗುವುದು. ಡಿಪ್ಲೊಮಾ, ಮೆಡಿಕಲ್ ಮತ್ತು ಇಂಜಿನಿಯರಿಂಗ್ ಓದುತ್ತಿರುವ ಪೌರಕಾರ್ಮಿಕರ ಮಕ್ಕಳಿಗೆ ಲ್ಯಾಪ್ಟಾಪ್ ವಿತರಿಸುವ ಯೋಜನೆಯಡಿ ಪ್ರಸ್ತುತ ಇರುವ 10 ಲಕ್ಷ ರೂ.ಗಳ ಬಜೆಟ್ ಸಾಲುವುದಿಲ್ಲ, ಫಲಾನುಭವಿಗಳ ಸಂಖ್ಯೆ ಹೆಚ್ಚಿರುವುದರಿಂದ ಬಜೆಟ್ ಮೊತ್ತವನ್ನು ಇನ್ನಷ್ಟು ಹೆಚ್ಚಿಸಬೇಕು ಎಂದು ಸದಸ್ಯರು ಕೋರಿದರು. ಮಹಾನಗರ ಪಾಲಿಕೆ ಆಯುಕ್ತರು ಅನುದಾನ ಲಭ್ಯತೆಯನ್ನು ಪರಿಶೀಲಿಸಿಕೊಂಡು ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವ ಬಗ್ಗೆ ಕ್ರಮವಹಿಸುವಂತೆ ಸೂಚನೆ ನೀಡಿದರು.
ಚಿಕ್ಕಬುದ್ಧಿಹಾಳ್ನ ಸರ್ವೆ ನಂಬರ್ 12 ರಲ್ಲಿ ಮಂಜೂರಾಗಿರುವ 10 ಎಕರೆ ಜಾಗದಲ್ಲಿ ಉಳಿದಿರುವ ಜಾಗವನ್ನು ವಸತಿ ರಹಿತರಿಗೆ ಸದ್ಬಳಕೆ ಮಾಡಿಕೊಳ್ಳಲು ಹಾಗೂ ಅಶೋಕನಗರದ ‘C+2’ ಮಾದರಿಯ ವಸತಿ ಯೋಜನೆಗಳ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸಮಿತಿ ಸದಸ್ಯರು ಸಭೆಗೆ ತಿಳಿಸಿದರು. ಮಲೇಬೆನ್ನೂರಿನ ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿರುವ ಮ್ಯಾನುಯಲ್ ಸ್ಕ್ಯಾವೆಂಜರ್ಸ್ ಕುಟುಂಬಗಳಿಗೆ ಆಶ್ರಯ ಸಮಿತಿಯ ಹೊಸ ಲೇಔಟ್ನಲ್ಲಿ ಆದ್ಯತೆಯ ಮೇರೆಗೆ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು. ರಾಜೀವ್ ಗಾಂಧಿ ವಸತಿ ನಿಗಮ ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆ (PMAY-2) ಅಡಿಯೂ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಗಾಂಧಿನಗರ, ಹೊನ್ನಾಳಿಯ ಗಿಡ್ಡಪ್ಪ ಬಡಾವಣೆ ಹಾಗೂ ಗೋಮಾಳ ಜಮೀನಿನಲ್ಲಿ ವಾಸಿಸುತ್ತಿರುವ ಅರ್ಹ ಕುಟುಂಬಗಳಿಗೆ ನಿಯಮಾನುಸಾರ ಹಕ್ಕುಪತ್ರ ನೀಡಲು ಒಂದು ವಾರದೊಳಗೆ ಸರ್ವೆ ನಡೆಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಕಳೆದ ಮೂರು ವರ್ಷಗಳಿಂದ (2023 ರಿಂದ 2025ರವರೆಗೆ) ಸಫಾಯಿ ಕರ್ಮಚಾರಿಗಳು, ಮ್ಯಾನುಯಲ್ ಸ್ಕ್ಯಾವೆಂಜರ್ಸ್ ಹಾಗೂ ಎಸ್.ಸಿ/ ಸ್.ಟಿ ಸಮುದಾಯದ ಅಭಿವೃದ್ಧಿಗಾಗಿ ಮಂಜೂರಾದ ಸಾಲಗಳನ್ನು ನೀಡಲು ನಿರಾಕರಿಸುತ್ತಿರುವ ಕೆಲವು ಬ್ಯಾಂಕ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಮಿತಿ ಸದಸ್ಯರು ಸಭೆಯ ಗಮನಕ್ಕೆ ತಂದರು . ಫಲಾನುಭವಿಗಳ ಪಟ್ಟಿಯನ್ನು ನೇರವಾಗಿ ಲೀಡ್ ಬ್ಯಾಂಕ್ಗೆ ಹಸ್ತಾಂತರಿಸಲಾಗುವುದು. ಬ್ಯಾಂಕ್ಗಳು ಅನಗತ್ಯವಾಗಿ ಸಾಲ ನಿರಾಕರಿಸಿದರೆ ಡಿ.ಎಲ್.ಬಿ.ಸಿ (DLBC) ಸಭೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮ್ಯಾನುವಲ್ ಸ್ಕ್ಯಾವೆಂಜಿಂಗ್ ಸಂಪೂರ್ಣ ನಿರ್ಮೂಲನೆ ಮತ್ತು ಪೌರಕಾರ್ಮಿಕರ ಹಕ್ಕುಗಳ ಕುರಿತು ಸಾರ್ವಜನಿಕರಲ್ಲಿ ಹಾಗೂ ಅಪಾರ್ಟ್ಮೆಂಟ್ ನಿವಾಸಿಗಳಲ್ಲಿ ಅರಿವು ಮೂಡಿಸಲು ಜಿಲ್ಲಾ ಮಟ್ಟ ಹಾಗೂ ತಾಲ್ಲೂಕು ಮಟ್ಟದಲ್ಲಿ ವಿಶೇಷ ಜಾಗೃತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪೌರಕಾರ್ಮಿಕರು ಹಾಗೂ ಮ್ಯಾನುಯಲ್ ಸ್ಕ್ಯಾವೆಂಜರ್ಸ್ಗಳ ಹಿತದೃಷ್ಟಿಯಿಂದ ಸರ್ಕಾರಿ ಯೋಜನೆಗಳ ಮತ್ತು ಸೌಲಭ್ಯಗಳ ಮಾಹಿತಿಯುಳ್ಳ ದೊಡ್ಡ ಫ್ಲೆಕ್ಸ್ ಹಾಗೂ ಕೈಪಿಡಿಗಳನ್ನು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಪ್ರದರ್ಶಿಸಬೇಕು ಎಂದು ಸಮಿತಿ ಸದಸ್ಯರು ಸಭೆಯ ಗಮನಕ್ಕೆ ತಂದರು.
ಮ್ಯಾನ್ಯುಯಲ್ ಸ್ಕ್ಯಾವೆಂಜರ್ ನೇಮಕಾತಿ ನಿಷೇಧ ಮತ್ತು ಪುನರ್ ವಸತಿ ಕಾಯ್ದೆ ಅನುಷ್ಠಾನ ಸಮಿತಿ ಸದಸ್ಯರುಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಗಿತ್ತೇ ಮಾಧವ ವಿಠ್ಠಲರಾವ್ , ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ್ ಹೆಗಡೆ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಸಿದ್ದಲಿಂಗೇಶ್, ಮಹಾನಗರ ಪಾಲಿಕೆ ಆಯುಕ್ತ ಡಾ.ಮಹಾಂತೇಶ್ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
- Davanagere DC
- DAVANAGERE NEWS
- GM Gangadharaswamy
- Hakku Patra Distribution
- Karnataka Local News.
- Manual Scavengers Rehabilitation Act
- Pourakarmika Direct Recruitment
- Pourakarmika Housing Scheme
- Safai Karmachari Loan
- Shingles Vaccine Pourakarmika
- ಜಿ.ಎಂ.ಗಂಗಾಧರಸ್ವಾಮಿ
- ದಾವಣಗೆರೆ ಜಿಲ್ಲಾಧಿಕಾರಿ.
- ದಾವಣಗೆರೆ ಸುದ್ದಿ
- ಪೌರಕಾರ್ಮಿಕರ ನೇರ ನೇಮಕಾತಿ
- ಪೌರಕಾರ್ಮಿಕರ ವಸತಿ ಯೋಜನೆ
- ಮ್ಯಾನುಯಲ್ ಸ್ಕ್ಯಾವೆಂಜರ್ಸ್ ನಿಷೇಧ ಕಾಯ್ದೆ
- ಲೀಡ್ ಬ್ಯಾಂಕ್ ಸಾಲ ಸೌಲಭ್ಯ
- ಶಿಂಗಲ್ಸ್ ವ್ಯಾಕ್ಸಿನ್
- ಸ್ವಚ್ಛತಾ ಕಾರ್ಮಿಕರ ಕಲ್ಯಾಣ
- ಹಕ್ಕುಪತ್ರ ವಿತರಣೆ





Leave a comment