Home ಕ್ರೈಂ ನ್ಯೂಸ್ ಚನ್ನಗಿರಿಯ ಅಮ್ಮನಗುಡ್ಡದಲ್ಲಿ ನೆಲೆಸಿರುವ ಶ್ರೀ ಕುಕ್ಕುವಾಡೇಶ್ವರಿ ಸನ್ನಿಧಿ ಸುತ್ತಮುತ್ತ ಹೆಚ್ಚಿದ ಪ್ಲಾಸ್ಟಿಕ್ ತ್ಯಾಜ್ಯ: ಕ್ರಮ ಕೈಗೊಳ್ಳದಿದ್ದರೆ ಅರಣ್ಯ ಸಚಿವರಿಗೆ ದೂರು ನೀಡುವ ಎಚ್ಚರಿಕೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಚನ್ನಗಿರಿಯ ಅಮ್ಮನಗುಡ್ಡದಲ್ಲಿ ನೆಲೆಸಿರುವ ಶ್ರೀ ಕುಕ್ಕುವಾಡೇಶ್ವರಿ ಸನ್ನಿಧಿ ಸುತ್ತಮುತ್ತ ಹೆಚ್ಚಿದ ಪ್ಲಾಸ್ಟಿಕ್ ತ್ಯಾಜ್ಯ: ಕ್ರಮ ಕೈಗೊಳ್ಳದಿದ್ದರೆ ಅರಣ್ಯ ಸಚಿವರಿಗೆ ದೂರು ನೀಡುವ ಎಚ್ಚರಿಕೆ!

Share
ಚನ್ನಗಿರಿ
Share

ದಾವಣಗೆರೆಚನ್ನಗಿರಿ ತಾಲ್ಲೂಕಿನ ಪ್ರಸಿದ್ಧ ಅರಣ್ಯ ಪ್ರದೇಶದ ಮಧ್ಯಭಾಗದಲ್ಲಿರುವ ಅಮ್ಮನಗುಡ್ಡ ಶ್ರೀ ಕುಕ್ಕುವಾಡೇಶ್ವರಿ ದೇವಸ್ಥಾನದ ಸುತ್ತಮುತ್ತ ಹೆಚ್ಚುತ್ತಿರುವ ಕಸ, ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಪರಿಸರ ಹಾನಿಯನ್ನು ತಕ್ಷಣ ತಡೆಗಟ್ಟಬೇಕು ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಹೋರಾಟಗಾರ ಹೆಚ್. ಚಂದ್ರಶೇಖರ್ ಅವರು ಶಿವಮೊಗ್ಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಅಮ್ಮನಗುಡ್ಡ ದೇವಸ್ಥಾನವು ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದ್ದು, ಪ್ರತಿದಿನ ಹಾಗೂ ವಿಶೇಷ ಸಂದರ್ಭಗಳಲ್ಲಿ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ದೇವಸ್ಥಾನದ ಸುತ್ತಮುತ್ತ ಅನಿಯಂತ್ರಿತವಾಗಿ ಅಡುಗೆ ಚಟುವಟಿಕೆಗಳನ್ನು ನಡೆಸುವುದು, ಪ್ಲಾಸ್ಟಿಕ್ ಕವರ್‌ಗಳು, ನೀರಿನ ಬಾಟಲಿಗಳು ಹಾಗೂ ಇತರೆ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವುದು ಆತಂಕಕಾರಿ ಮಟ್ಟಕ್ಕೆ ತಲುಪಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ವನ್ಯಜೀವಿಗಳಿಗೆ ಎದುರಾದ ಅಪಾಯ:

ಅರಣ್ಯ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯುವುದರಿಂದ ನೈಸರ್ಗಿಕ ಸೌಂದರ್ಯ ಮತ್ತು ಜೀವ ವೈವಿಧ್ಯತೆಗೆ ಗಂಭೀರ ಹಾನಿಯಾಗುತ್ತಿದೆ. ಅಲ್ಲದೆ, ಈ ವಿಷಕಾರಿ ತ್ಯಾಜ್ಯದಿಂದ ಕಾಡುಪ್ರಾಣಿಗಳ ಆರೋಗ್ಯ ಮತ್ತು ಸುರಕ್ಷತೆಗೆ ನೇರ ಅಪಾಯ ಉಂಟಾಗುವ ಸಾಧ್ಯತೆ ಇದ್ದು, ಭವಿಷ್ಯದಲ್ಲಿ ಪರಿಸರ ಮಾಲಿನ್ಯ ಮತ್ತಷ್ಟು ಹೆಚ್ಚುವ ಭೀತಿ ಎದುರಾಗಿದೆ. ಈ ಕುರಿತು ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳು ಹಲವು ಬಾರಿ ಇಲಾಖೆಯ ಗಮನ ಸೆಳೆದಿದ್ದರೂ ಯಾವುದೇ ಶಾಶ್ವತ ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿದ್ದಾರೆ.

ಹೋರಾಟಗಾರರು ಒತ್ತಾಯಿಸಿರುವ ಪ್ರಮುಖ ಬೇಡಿಕೆಗಳು:

ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸುವುದು.

ಅರಣ್ಯ ಪ್ರದೇಶದಲ್ಲಿ ಅನಿಯಂತ್ರಿತವಾಗಿ ಅಡುಗೆ ಮಾಡುವುದನ್ನು ನಿಯಂತ್ರಿಸುವುದು.

ಅಗತ್ಯ ಪ್ರಮಾಣದಲ್ಲಿ ಕಸದ ಬುಟ್ಟಿಗಳು ಹಾಗೂ ತ್ಯಾಜ್ಯ ಸಂಗ್ರಹಣಾ ವ್ಯವಸ್ಥೆಗಳನ್ನು ತಕ್ಷಣ ಅಳವಡಿಸುವುದು.

ಪರಿಸರ ಸಂರಕ್ಷಣೆ ಮತ್ತು ತ್ಯಾಜ್ಯ ನಿರ್ವಹಣೆ ಕುರಿತು ಸ್ಪಷ್ಟ ಜಾಗೃತಿ ಫಲಕಗಳನ್ನು ಹಾಕುವುದು.

ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ನಿರಂತರ ಮೇಲ್ವಿಚಾರಣೆ ನಡೆಸಿ, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದು.

ಅರಣ್ಯ ಸಚಿವರಿಗೆ ದೂರು ನೀಡುವ ಎಚ್ಚರಿಕೆ:

ಅಮ್ಮನಗುಡ್ಡವು ಅರಣ್ಯ ಪ್ರದೇಶದಲ್ಲಿರುವ ಅಮೂಲ್ಯ ಧಾರ್ಮಿಕ ಹಾಗೂ ಪರಿಸರ ಪರಂಪರೆಯ ತಾಣವಾಗಿದೆ. ಒಂದು ವೇಳೆ ಅರಣ್ಯ ಇಲಾಖೆಯು ಈ ಗಂಭೀರ ವಿಷಯದ ಕುರಿತು ತಕ್ಷಣ ಗಮನಹರಿಸಿ ಶೀಘ್ರ ಹಾಗೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ, ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಈ ವಿಷಯವನ್ನು ಉನ್ನತ ಅಧಿಕಾರಿಗಳ ಹಾಗೂ ಮಾನ್ಯ ಅರಣ್ಯ ಸಚಿವರ ಗಮನಕ್ಕೆ ತರಬೇಕಾಗುತ್ತದೆ ಎಂದು ಹೆಚ್. ಚಂದ್ರಶೇಖರ್ ಎಚ್ಚರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles