SUDDIKSHANA KANNADA NEWS/ DAVANAGERE/ DATE:01-12-2024
ಬೆಂಗಳೂರು: ನಾವು ಮಾಜಿ ಸಿಎಂ ಯಡಿಯೂರಪ್ಪರ ಭ್ರಷ್ಟಾಚಾರ ಹಾಗೂ ಫೋಕ್ಸೋ ಕೇಸ್ ಬಗ್ಗೆ ಮಾತನಾಡಿಲ್ಲ. ವಕ್ಫ್ ಬೋರ್ಡ್ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ನಮ್ಮನ್ನು ತಡೆದಿಲ್ಲ ಎಂದಾದರೆ ಹೈಕಮಾಂಡ್ ಆಶೀರ್ವಾದ ನಮ್ಮ ಮೇಲಿದೆ ಎಂಬ ಭಾವನೆ. ಶಿಸ್ತು ಕ್ರಮವಲ್ಲ, ಉಗ್ರ ಕ್ರಮ ಬೇಕಾದರೂ ತೆಗೆದುಕೊಳ್ಳಲಿ. ನ್ಯಾಷನಲ್ ಫಿಗರ್ ಮಾಡಲಿಕ್ಕೆ ಹೊರಟಿದ್ದಾರೆ. ಕೆಣಕುವವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರ ಬಗ್ಗೆ ಮಾತನಾಡಬೇಡಿ ಎಂದು ಹೈಕಮಾಂಡ್ ಹೇಳಿದೆ. ವಕ್ಫ್ ವಿಚಾರದಲ್ಲಿ ಧ್ವನಿ ಎತ್ತಿದ್ದೇನೆ. ಇದಕ್ಕೆ ತಡೆಯೊಡ್ಡಿಲ್ಲ. ಹಾಗಾದರೆ ಹೈಕಮಾಂಡ್ ಯಾರ ಪರ ಇದೆ ಎಂಬುದನ್ನು
ನೀವೇ ತಿಳಿದುಕೊಳ್ಳಿ ಎಂದು ಹೇಳಿದರು.
ನನ್ನ ವಿರುದ್ಧ ಬೇಕಾದ್ದನ್ನು ಮಾಡಲಿ, ಸ್ವಾಗತಿಸುತ್ತೇನೆ. ವಾಜಪೇಯಿ ಅವರು ದೇಶ ಮೊದಲು ಆಮೇಲೆ ಪಕ್ಷ ಎಂದಿದ್ದರು. ಭ್ರಷ್ಟಾಚಾರ ಕ್ಯಾನ್ಸರ್ ನಂತೆ ಹಬ್ಬುತ್ತಿದೆ. 38 ಲಕ್ಷ ಎಕರೆ ಜಮೀನನ್ನು ವಕ್ಫ್ ಬೋರ್ಡ್ ತನ್ನದೆಂದು ಹೇಳಿಕೊಳ್ಳುತ್ತಿದೆ.
ಮಠ, ಮಂದಿರಗಳ ಜಾಗ ವಶಪಡಿಸಿಕೊಳ್ಳಲು ಹುನ್ನಾರ ನಡೆಸುತ್ತಿದ್ದಾರೆ. ಬಸವಣ್ಣನವರ ಹೆಸರು ಹೇಳಿಕೊಂಡು ರಾಜಕೀಯ ಮಾಡುತ್ತಿರುವವರು ಯಾಕೆ ಮುಂದೆ ಬರುತ್ತಿಲ್ಲ ಎಂದು ಕಿಡಿಕಾರಿದರು.
ನನ್ನದು ಯಾರ ವಿರುದ್ಧವೂ ಹೋರಾಟ ಅಲ್ಲ. ದೂರು ಕೊಟ್ಟಾರೋ, ಹೋರಾಟದ ಬಗ್ಗೆ ಪ್ರಶಂಸೆ ಮಾಡಿದ್ದಾರೋ ಗೊತ್ತಿಲ್ಲ. ನಮ್ಮ ಹೋರಾಟ ಮಾಡುತ್ತಿದ್ದೇವೆ. ನಮ್ಮದಂತೂ ಕಾಂಗ್ರೆಸ್ ಜೊತೆ ಹೊಂದಾಣಿಕೆ ಇಲ್ಲ. ಹೋರಾಟ ಮಾಡುವುದಕ್ಕೂ ವಿರೋಧ ಮಾಡುತ್ತಿದ್ದಾರೆ ಎಂದರೆ ಯಾರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬುದು ಜನರಿಗೆ ಅರ್ಥವಾಗುತ್ತದೆ ಎಂದು ತಿಳಿಸಿದರು.
ಹಿಂದೂಗಳು ಒಂದಾಗಬೇಕು. ನಮ್ಮ ಆಸ್ತಿ ಉಳಿಯಬೇಕು. ಯಡಿಯೂರಪ್ಪ ಭ್ರಷ್ಟಾಚಾರ, ಫೋಕ್ಸೋ ಬಗ್ಗೆ ಮಾತನಾಡುತ್ತಿಲ್ಲ. ಮೂರು ಉಪಚುನಾವಣೆ ಗಂಭೀರವಾಗಿ ತೆಗೆದುಕೊಂಡಿಲ್ಲ. ದೆಹಲಿ, ಕರ್ನಾಟಕ ಇರಲಿ ಒಳ್ಳೆಯದಾಗಬೇಕು ಎಂಬುದು ನಮ್ಮ ಭಾವನೆ ಎಂದು ಟಾಂಗ್ ನೀಡಿದರು.