ದಾವಣಗೆರೆ: “ಆಡು ಮುಟ್ಟದ ಸೊಪ್ಪಿಲ್ಲ, ಸಿಗ್ಲಿ ಬಸ್ಯಾ ಕಳ್ಳತನ ಮಾಡದ ಮನೆಯಿಲ್ಲ” ಎನ್ನುವಷ್ಟರ ಮಟ್ಟಿಗೆ ಕುಖ್ಯಾತಿ ಪಡೆದಿರುವ ಖದೀಮ ಸಿಗ್ಲಿ ಬಸ್ಯಾ ಬಹಳ ದಿನಗಳ ನಂತರ ಮತ್ತೆ ದಾವಣಗೆರೆ ಜಿಲ್ಲೆಯಲ್ಲಿ ಪ್ರತ್ಯಕ್ಷನಾಗಿದ್ದು, ಸಾರ್ವಜನಿಕರೊಬ್ಬರಿಗೆ ಬರೋಬ್ಬರಿ 70 ಸಾವಿರ ರೂ. ಪಂಗನಾಮ ಹಾಕಿದ್ದಾನೆ.
ಶಾಮನೂರಲ್ಲಿ ಶುರುವಾದ ಪರಿಚಯ:
ನ್ಯಾಮತಿ ತಾಲೂಕಿನ ಸೂರಹೊನ್ನೆ ಗ್ರಾಮದ ಶಿವರಾಜ್ ಎಲ್.ಎನ್ (59) ಎಂಬುವವರಿಗೆ ಕಳೆದ ನವೆಂಬರ್ 12ರಂದು ದಾವಣಗೆರೆಯ ಶಾಮನೂರಿನಲ್ಲಿ ಸಿಗ್ಲಿ ಬಸ್ಯಾ ಪರಿಚಯವಾಗಿದ್ದ. ತಾನು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಈಸೂರು ಗ್ರಾಮದವನು ಎಂದು ಪರಿಚಯಿಸಿಕೊಂಡಿದ್ದ ಸಿಗ್ಲಿ, ತನ್ನ ಬಳಿ ಕಳ್ಳತನ ಮಾಡಿದ ಬಂಗಾರದ ದಾಸ್ತಾನು ಇದೆ ಎಂದು ನಂಬಿಸಿದ್ದ. ಕಡಿಮೆ ದರದಲ್ಲಿ 10 ಗ್ರಾಂ ಚಿನ್ನ ಸಿಗುತ್ತದೆ ಎಂಬ ಆಸೆಗೆ ಬಿದ್ದ ಶಿವರಾಜ್, ಅದನ್ನು ಖರೀದಿಸಲು ಒಪ್ಪಿಕೊಂಡಿದ್ದರು.
ಪೊಲೀಸ್ ಠಾಣೆ ಪಕ್ಕದಲ್ಲೇ ಡೀಲ್!
ನವೆಂಬರ್ 18ರಂದು 60 ಸಾವಿರ ರೂ. ನಗದಿನೊಂದಿಗೆ ಬಂದ ಶಿವರಾಜ್ನನ್ನು, ಚಿನ್ನ ಜಗಳೂರಿನಲ್ಲಿದೆ ಎಂದು ಹೇಳಿ ಸಿಗ್ಲಿ ಬಸ್ಯಾ ಜಗಳೂರಿಗೆ ಕರೆತಂದಿದ್ದಾನೆ. ಸಿಗ್ಲಿ ಬಸ್ಯಾನ ಧೈರ್ಯ ಎಷ್ಟಿತ್ತೆಂದರೆ, ಅವನು ವಂಚನೆ ಮಾಡಲು ಆರಿಸಿಕೊಂಡಿದ್ದು ಖುದ್ದು ಜಗಳೂರು ಪೊಲೀಸ್ ಠಾಣೆಯ ಪಕ್ಕದಲ್ಲೇ ಇದ್ದ ಹೋಟೆಲ್ ಅನ್ನು! ಹೋಟೆಲ್ನಲ್ಲಿ ಇಬ್ಬರೂ ಟೀ ಕುಡಿದು, ಶಿವರಾಜ್ ಕೈಯಿಂದ 60 ಸಾವಿರ ರೂ. ಹಣ ಪಡೆದ ಸಿಗ್ಲಿ ಬಸ್ಯಾ, “ನೀವು ಇಲ್ಲೇ ಇರಿ, ನಾನು ಚಿನ್ನ ತರುತ್ತೇನೆ” ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಹೋದವನೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ.
ಮತ್ತೆ ಫೋನ್ ಪೇ ಮೂಲಕ 10 ಸಾವಿರ ಲೂಟಿ:
ಅಷ್ಟಕ್ಕೇ ನಿಲ್ಲದ ಸಿಗ್ಲಿ ಬಸ್ಯಾ, ಒಂದು ಗಂಟೆಯ ನಂತರ ಶಿವರಾಜ್ಗೆ ಕರೆ ಮಾಡಿ ಬೇರೆ ನಂಬರ್ಗೆ 5 ಸಾವಿರ ರೂ. ಫೋನ್ ಪೇ ಮಾಡಿಸಿಕೊಂಡಿದ್ದಾನೆ. ಇದಾದ ಎರಡು-ಮೂರು ದಿನಗಳ ನಂತರ ಮತ್ತೆ ಕರೆ ಮಾಡಿ ಮತ್ತೊಮ್ಮೆ 5 ಸಾವಿರ ರೂ. ಪಡೆದು, ಒಟ್ಟು 70 ಸಾವಿರ ರೂ. ವಂಚಿಸಿದ್ದಾನೆ.
ತನಗೆ ವಂಚನೆಯಾಗಿರುವುದು ಖಚಿತವಾಗುತ್ತಿದ್ದಂತೆ ಶಿವರಾಜ್ ಅವರು ಮೊದಲು ಶಿಕಾರಿಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಘಟನೆ ನಡೆದ ಸ್ಥಳದ ವ್ಯಾಪ್ತಿಯ ಆಧಾರದ ಮೇಲೆ ಕೇಸ್ ಈಗ ಜಗಳೂರು ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದೆ. ಸದ್ಯ ಜಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಖದೀಮ ಸಿಗ್ಲಿ ಬಸ್ಯಾನ ಪತ್ತೆಗಾಗಿ ಬಲೆ ಬೀಸಿದ್ದಾರೆ.
- Davanagere breaking news
- Davanagere crime news
- DAVANAGERE NEWS
- gold fraud case karnataka
- gold scam Davanagere
- Jagalur police station
- Nyamathi Surahonne
- Shamanur Davanagere
- Shikaripura police
- Sigli Basya cheating case
- Sigli Basya thief
- ಆನ್ಲೈನ್ ವಂಚನೆ
- ಕಳ್ಳ ಸಿಗ್ಲಿ ಬಸ್ಯಾ
- ಚಿನ್ನದ ಆಸೆ
- ಜಗಳೂರು ಪೊಲೀಸ್ ಠಾಣೆ
- ದಾವಣಗೆರೆ ಕ್ರೈಮ್ ನ್ಯೂಸ್
- ದಾವಣಗೆರೆ ಬ್ರೇಕಿಂಗ್ ನ್ಯೂಸ್
- ನ್ಯಾಮತಿ ಸೂರಹೊನ್ನೆ
- ಶಾಮನೂರು ದಾವಣಗೆರೆ
- ಶಿಕಾರಿಪುರ ಪೊಲೀಸ್
- ಸಿಗ್ಲಿ ಬಸ್ಯಾ ವಂಚನೆ ಕೇಸ್





Leave a comment