ದಾವಣಗೆರೆ/ಶಿವಮೊಗ್ಗ: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ‘ಕೆಪಿಎಸ್ ಮ್ಯಾಗ್ನೆಟ್ ಯೋಜನೆ’ (KPS Magnet Scheme) ಗ್ರಾಮೀಣ ಭಾಗದ ಬಡ ಮಕ್ಕಳ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿ ಸಲಗನಹಳ್ಳಿ ಹಾಗೂ ಷಂಶಿಪುರ ಗ್ರಾಮಸ್ಥರು ಎಐಡಿಎಸ್ಓ (AIDSO) ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
80 ವರ್ಷಗಳ ಇತಿಹಾಸವಿರುವ ಶಾಲೆಗೆ ಬೀಗ?
1946 ರಲ್ಲಿ ಸ್ಥಾಪನೆಯಾಗಿ ಪ್ರಸ್ತುತ ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ಷಂಶಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಈ ಯೋಜನೆಯಡಿ ಮುಚ್ಚಲಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಯ ಸುಧಾರಣೆಗೆ ಕೊಡುಗೆ ನೀಡಬೇಕಾದ ಸರ್ಕಾರ, ಅದಕ್ಕೆ ವಿರುದ್ಧವಾಗಿ ಶಾಲೆಗೇ ಬೀಗ ಹಾಕಲು ಮುಂದಾಗಿದೆ ಎಂದು ಪ್ರತಿಭಟನಾಕಾರರು ಊರಿನ ದೇವಸ್ಥಾನದ ಮುಂದೆ ಜಮಾಯಿಸಿ ಸರ್ಕಾರದ ಜನವಿರೋಧಿ ನಡೆಯನ್ನು ಖಂಡಿಸಿದರು.
ಬಡವರನ್ನು ಅಜ್ಞಾನಕ್ಕೆ ತಳ್ಳುವ ಕುಕೃತ್ಯ: ಪೂಜಾ ನಂದಿಹಳ್ಳಿ ಆಕ್ರೋಶ
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಐಡಿಎಸ್ಓ ಜಿಲ್ಲಾ ಅಧ್ಯಕ್ಷರಾದ ಪೂಜಾ ನಂದಿಹಳ್ಳಿ, “ಆಳ್ವಿಕರ ಗದ್ದುಗೆಯು ಜನರ ಅಜ್ಞಾನದ ಮೇಲೆ ನಿಂತಿದೆ. ಹಳ್ಳಿಗಳಲ್ಲಿ ಶಾಲೆಗಳಿದ್ದರೆ ಬಡ ಮಕ್ಕಳು ಜ್ಞಾನಾರ್ಜನೆ ಮಾಡಿ, ವ್ಯವಸ್ಥೆಯನ್ನು ಪ್ರಶ್ನಿಸುತ್ತಾರೆ ಎಂಬ ಭಯ ಸರ್ಕಾರಕ್ಕಿದೆ. ಜ್ಞಾನದ ಈ ಭಯದಿಂದಲೇ ಸರ್ಕಾರ ಶಾಲೆಗಳನ್ನು ಮುಚ್ಚಿ ಬಡ ಮಕ್ಕಳನ್ನು ಅಜ್ಞಾನಕ್ಕೆ ತಳ್ಳುವ ಕುಕೃತ್ಯಕ್ಕೆ ಮುಂದಾಗಿದೆ,” ಎಂದು ಕಿಡಿಕಾರಿದರು. ವಿದ್ಯಾವಂತ ನಿರುದ್ಯೋಗಿಗಳ ಬಗ್ಗೆ ಇತ್ತೀಚೆಗೆ ಕೇಳಿಬಂದ ಟೀಕೆಗಳನ್ನು ಪ್ರಸ್ತಾಪಿಸಿದ ಅವರು, ಸರ್ಕಾರಕ್ಕೆ ಪ್ರಶ್ನಿಸುವ ಗುಣವಿರುವ ವಿದ್ಯಾವಂತರಿಗಿಂತ ಓದದ ನಿರುದ್ಯೋಗಿಗಳೇ ಬೇಕಾಗಿದ್ದಾರೆ ಎಂದು ಆಪಾದಿಸಿದರು.
40,000 ಶಾಲೆಗಳನ್ನು ಮುಚ್ಚುವ ಷಡ್ಯಂತ್ರ: ಅನಿಲ್
ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಸದಸ್ಯರಾದ ಅನಿಲ್ ಮಾತನಾಡಿ, “ದೇಶದಲ್ಲಿ ಹಸಿವು, ಬಡತನ, ನಿರುದ್ಯೋಗ ಹಾಗೂ ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿರುವಾಗ ಜನರ ಬದುಕು ಹಸನು ಮಾಡುವ ಯೋಜನೆಗಳು ಬರಬೇಕಿತ್ತು. ಆದರೆ ಸರ್ಕಾರ ಬಂಡವಾಳಶಾಹಿಗಳ ಹಿತಾಸಕ್ತಿ ಕಾಯಲು ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ತಂದಿದೆ. ರಾಜ್ಯಾದ್ಯಂತ 40,000ಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚಿ ಕೇವಲ 6,000 ಮ್ಯಾಗ್ನೆಟ್ ಶಾಲೆಗಳನ್ನು ಮಾಡಲು ಹೊರಟಿದ್ದಾರೆ. ಹಾಲಿ ಇರುವ ಶಾಲೆಗಳ ಅಭಿವೃದ್ಧಿಗೆ ಈ ಹಣ ಬಳಸಬಾರದು ಎಂಬ ಕಟ್ಟುನಿಟ್ಟಿನ ಆದೇಶವಿದೆ. ಜೀವ ಕೊಟ್ಟಾದರೂ ನಮ್ಮೂರ ಶಾಲೆಯನ್ನು ಉಳಿಸಿಕೊಳ್ಳಬೇಕು,” ಎಂದು ಕರೆ ನೀಡಿದರು.
ನಮಗೆ ಬಸ್ ಬೇಡ, ಕಂಪ್ಯೂಟರ್ ಬೇಡ; ಶಾಲೆಯಷ್ಟೇ ಸಾಕು!
ಷಂಶಿಪುರ ಮಾಜಿ ಗ್ರಾ.ಪಂ. ಸದಸ್ಯ ರೇವಣಸಿದ್ದಪ್ಪ ಎಸ್. ಜಿ. ಮಾತನಾಡಿ, ಜ್ಯೋತಿಬಾ ಫುಲೆ ಹಾಗೂ ಸಾವಿತ್ರಿಬಾಯಿ ಫುಲೆಯವರ ಹೋರಾಟದ ಫಲವಾಗಿ ಇಂದು ಹೆಣ್ಣುಮಕ್ಕಳಿಗೆ ಶಿಕ್ಷಣ ಸಿಗುತ್ತಿದೆ, ಶಾಲೆ ಮುಚ್ಚಿದರೆ ಮಕ್ಕಳು ವಂಚಿತರಾಗುತ್ತಾರೆ ಎಂದರು. ಸಲಗನಹಳ್ಳಿ ಮಾಜಿ ಗ್ರಾ.ಪಂ. ಸದಸ್ಯ ವಿಜಯ ಕುಮಾರ್ ಮಾತನಾಡಿ, “ನಮ್ಮೂರ ಶಾಲೆ ನಮ್ಮ ಹಕ್ಕು. ನಮಗೆ ಉಚಿತ ಬಸ್ ಬೇಡ, ಕಂಪ್ಯೂಟರ್ ಬೇಡ; ನಮ್ಮೂರ ಶಾಲೆ ನಮ್ಮಲ್ಲೇ ಉಳಿಲಿ. ಯೋಜನೆ ರದ್ದಾಗುವವರೆಗೂ ಹೋರಾಟ ನಿಲ್ಲದು,” ಎಂದು ಎಚ್ಚರಿಸಿದರು.
‘ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ’ ರಚನೆ:
ಹೋರಾಟವನ್ನು ತೀವ್ರಗೊಳಿಸಲು ಎರಡೂ ಹಳ್ಳಿಗಳಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಸಲಗನಹಳ್ಳಿ ಸಮಿತಿಯ ಅಧ್ಯಕ್ಷರಾಗಿ ವಿಜಯ ಕುಮಾರ್, ಕಾರ್ಯದರ್ಶಿಯಾಗಿ ಬಸವರಾಜ ಹಾಗೂ ಷಂಶಿಪುರ ಸಮಿತಿಯ ಅಧ್ಯಕ್ಷರಾಗಿ ರೇವಣಸಿದ್ದಪ್ಪ ಎಸ್. ಜಿ., ಕಾರ್ಯದರ್ಶಿಯಾಗಿ ಕೆಂಚಮ್ಮ ರಾಜಪ್ಪ ಮರಾಠಿ ಆಯ್ಕೆಯಾಗಿದ್ದಾರೆ. ಪ್ರತಿಭಟನೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಗುರುಮೂರ್ತಿ, ಗ್ರಾಮಸ್ಥರಾದ ಕಾಂತೇಶ ವೈಜಿ, ಚಂದ್ರಶೇಖರ್, ಮಹೇಂದ್ರಪ್ಪ, ಹೆಚ್. ಎಸ್. ಶ್ರೀನಿವಾಸ, ಪಿ. ಎನ್. ಮೌನೇಶ, ಲತಾ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು
- AIDSO Protest Karnataka
- Government School Merger Karnataka
- Government Schools Closure
- Karnataka Education News.
- KPS Magnet Scheme
- Pooja Nandihalli
- Salaganahalli Protest
- Save Public Education Committee
- Shamshipura Govt School
- ಎಐಡಿಎಸ್ಓ ಪ್ರತಿಭಟನೆ
- ಕರ್ನಾಟಕ ಸರ್ಕಾರಿ ಶಾಲೆಗಳು ಮುಚ್ಚುವಿಕೆ
- ಕೆಪಿಎಸ್ ಮ್ಯಾಗ್ನೆಟ್ ಯೋಜನೆ
- ಪೂಜಾ ನಂದಿಹಳ್ಳಿ
- ಶಿಕ್ಷಣ ಹಕ್ಕು ಹೋರಾಟ
- ಷಂಶಿಪುರ ಸರ್ಕಾರಿ ಶಾಲೆ
- ಸರ್ಕಾರಿ ಶಾಲೆಗಳ ವಿಲೀನ
- ಸಲಗನಹಳ್ಳಿ ಪ್ರತಿಭಟನೆ
- ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ





Leave a comment