SUDDIKSHANA KANNADA NEWS/ DAVANAGERE/ DATE:23-11-2024
ದಾವಣಗೆರೆ: ರಾಜ್ಯದಲ್ಲಿ ನಡೆದ ಶಿಗ್ಗಾವಿ, ಸಂಡೂರು ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು ಸರ್ಕಾರದ ಜನಪರ ಆಡಳಿತಕ್ಕೆ ಸಾಕ್ಷಿ. ಬಿಜೆಪಿ ಹಾಗೂ ಜೆಡಿಎಸ್ ಅಪಪ್ರಚಾರಕ್ಕೆ ಮತದಾರರು ತಕ್ಕ ಉತ್ತರ ಕೊಟ್ಟಿದ್ದಾರೆ ಎಂದು ಅಖಿಲ ಭಾರತ ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಹೇಳಿದ್ದಾರೆ.
ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ವಕ್ಫ್ ವಿಚಾರ ಕೆದಕಿ ವಿನಾಕಾರಣ ಎರಡು ಧರ್ಮದವರ ನಡುವಿನ ಸಾಮರಸ್ಯ ಹದಗೆಡಲು ಪ್ರಯತ್ನಿಸಿದ ಎನ್ ಡಿ ಎ ಮೈತ್ರಿಕೂಟಕ್ಕೆ ತಕ್ಕ ಉತ್ತರ ನೀಡಿರುವ ಜನರು ಗ್ಯಾರಂಟಿ ಯೋಜನೆಗಳಿಗೆ ಜೈಕಾರ ಹಾಕಿದ್ದಾರೆ. ಸಿಎಂ ಸಿದ್ದರಾಮಯ್ಯರ ನೇತೃತ್ವದ ಜನಪರ ಆಡಳಿತಕ್ಕೆ ರಾಜ್ಯದ ಮತದಾರರು ಬಹುಪರಾಕ್ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಮುಡಾ, ವಾಲ್ಮೀಕಿ ಸೇರಿದಂತೆ ವಿನಾಕಾರಣ ಹಗರಣಗಳಲ್ಲಿ ಸಿದ್ದರಾಮಯ್ಯರ ಹೆಸರು ತಳುಕಿ ಹಾಕಿ ರಾಜಕೀಯ ಮಾಡಿದ ಬಿಜೆಪಿ ಹಾಗೂ ಜೆಡಿಎಸ್ ಗೆ ಮೂರು ಕ್ಷೇತ್ರಗಳ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಹೆಚ್. ಡಿ. ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಸೇರಿದಂತೆ ಎನ್ ಡಿ ಎ ನಾಯಕರು ಸುಳ್ಳು ಹೇಳುವುದು ಬಿಡಬೇಕು, ಜನರನ್ನು ಹಾದಿ ತಪ್ಪಿಸುವ ಕೆಲಸ ಮಾಡಬಾರದು. ಮತದಾರರ ತೀರ್ಪಿಗೆ ನಾವು ತಲೆಬಾಗುತ್ತೇವೆ. ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡುತ್ತೇವೆ ಎಂದವರಿಗೆ ಈ ಚುನಾವಣೆಯ ಫಲಿತಾಂಶ ಉತ್ತರ ಕೊಟ್ಟಂತಾಗಿದೆ ಎಂದು ಸೈಯದ್ ಖಾಲಿದ್ ಅಹ್ಮದ್ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಹೆಚ್. ಡಿ. ದೇವೇಗೌಡ, ಕುಮಾರಸ್ವಾಮಿ, ಯಡಿಯೂರಪ್ಪ ಸೇರಿದಂತೆ ಘಟಾನುಘಟಿಗಳು ಪ್ರಚಾರ ನಡೆಸಿದರು. ಜನರಲ್ಲಿ ತಪ್ಪು ಸಂದೇಶ ಮೂಡಿಸಿದ್ದಕ್ಕೆ ತಕ್ಕ ಪಾಠ ಎಂದರೆ ತಪ್ಪಾಗಲಾರದು ಎಂದು ಅವರು ಹೇಳಿದ್ದಾರೆ.