ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿದೆ. ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಪಕ್ಷ ತೊರೆದು ಸ್ವಂತ ರಾಜಕೀಯ ಪಕ್ಷವನ್ನು ಸ್ಥಾಪಿಸಲಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ದಟ್ಟವಾಗಿ ಹರಡುತ್ತಿವೆ. ಆದರೆ, ಬಿಜೆಪಿ ಹೈಕಮಾಂಡ್ ಈ ಎಲ್ಲ ವದಂತಿಗಳನ್ನು ಅಲ್ಲಗಳೆದಿದ್ದು, ಅವರಿಗೆ ರಾಷ್ಟ್ರ ಮಟ್ಟದ ಜವಾಬ್ದಾರಿ ನೀಡುವ ಮುನ್ಸೂಚನೆ ನೀಡಿದೆ.
ಹೊಸ ಪಕ್ಷದ ಲೋಗೋ, ಧ್ವಜ ವೈರಲ್!
2026ರ ವಿಧಾನಸಭಾ ಚುನಾವಣೆಗಾಗಿ ಎಐಎಡಿಎಂಕೆ (AIADMK) ಜೊತೆ ಮೈತ್ರಿ ಮಾಡಿಕೊಳ್ಳುವ ಕೇಂದ್ರ ಬಿಜೆಪಿಯ ನಿರ್ಧಾರದಿಂದ ಅಣ್ಣಾಮಲೈ ತೀವ್ರ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ. ಸದ್ಯ ಅವರ ಬೆಂಬಲಿಗರು ಸಾಮಾಜಿಕ ಜಾಲತಾಣವಾದ ‘X’ ನಲ್ಲಿ ಹೊಸ ಪಕ್ಷದ ಹೆಸರುಗಳು ಮತ್ತು ಧ್ವಜದ ವಿನ್ಯಾಸಗಳನ್ನು ಹಂಚಿಕೊಳ್ಳುತ್ತಿದ್ದು, ಜೂನ್ ತಿಂಗಳಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ವಾದಿಸುತ್ತಿದ್ದಾರೆ.
ದೆಹಲಿ ನಾಯಕತ್ವದ ವಿರುದ್ಧ ಅಸಮಾಧಾನದ ಮುನ್ಸೂಚನೆ?
ಇತ್ತೀಚೆಗೆ ಕೇಂದ್ರ ಸರ್ಕಾರದ CBSE 9ನೇ ತರಗತಿಯ ತ್ರಿಭಾಷಾ ನೀತಿಯನ್ನು ಅಣ್ಣಾಮಲೈ ಬಹಿರಂಗವಾಗಿ ವಿರೋಧಿಸಿದ್ದರು. ಅಷ್ಟೇ ಅಲ್ಲದೆ, ಪ್ರಧಾನಿ ಮೋದಿಯವರ ‘ಮನ್ ಕಿ ಬಾತ್’ ಕಾರ್ಯಕ್ರಮದ ಬಗ್ಗೆಯೂ ಅವರು ಯಾವುದೇ ಪೋಸ್ಟ್ ಹಾಕದಿರುವುದು ಈ ಸಂಶಯಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.
ಬಿಜೆಪಿಯಿಂದ ಸ್ಪಷ್ಟನೆ
ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿಯ ಹಿರಿಯ ನಾಯಕರೊಬ್ಬರು, “ಅಣ್ಣಾಮಲೈ ಅವರು ಪಕ್ಷ ಬಿಡುವ ಅಥವಾ ಹೊಸ ಪಕ್ಷ ಕಟ್ಟುವ ಯಾವುದೇ ಮಾಹಿತಿ ನಮಗಿಲ್ಲ. ಶೀಘ್ರದಲ್ಲೇ ಅವರಿಗೆ ಪಕ್ಷದಲ್ಲಿ ರಾಷ್ಟ್ರೀಯ ಮಟ್ಟದ ಪ್ರಮುಖ ಹುದ್ದೆಯನ್ನು ನೀಡಲಾಗುವುದು” ಎಂದು ತಿಳಿಸಿದ್ದಾರೆ. 2021ರಲ್ಲಿ ಕಿರಿಯ ವಯಸ್ಸಿಗೆ ತಮಿಳುನಾಡು ಬಿಜೆಪಿ ಸಾರಥ್ಯ ವಹಿಸಿಕೊಂಡಿದ್ದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರ ಮುಂದಿನ ನಡೆ ಈಗ ಇಡೀ ದೇಶದ ಗಮನ ಸೆಳೆದಿದೆ.





Leave a comment