SUDDIKSHANA KANNADA NEWS/ DAVANAGERE/ DATE:21-11-2024
ದಾವಣಗೆರೆ: ರಾಷ್ಟ್ರೀಯ ಆರೋಗ್ಯ ಅಭಿಯಾನದ ಮೂಲಕ ಹೆರಿಗೆ ಸಮಯದಲ್ಲಿ ತಾಯಿ ಮಗುವಿನ ಸುರಕ್ಷೆಗೆ ಹೆಚ್ಚಿನ ಒತ್ತು ನೀಡಿದ್ದು ಮರಣ ಪ್ರಮಾಣವನ್ನು ಶೂನ್ಯಕ್ಕಿಳಿಸಬೇಕೆಂಬುದು ಇದರ ಉದ್ದೇಶವಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಕಳೆದ ಏಪ್ರಿಲ್ನಿಂದ ಅಕ್ಟೋಬರ್ ವರೆಗೆ 28 ಹೆರಿಗೆ ಸಮಯದಲ್ಲಿ ತಾಯಿ ಮರಣ ಪ್ರಕರಣಗಳು ಕಂಡುಬಂದಿದ್ದು ಸರಿಯಾಗಿ ಆಡಿಟ್ ಮಾಡಿ ತಾಯಿಯ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದರು.
ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಕಳೆದ 7 ತಿಂಗಳಲ್ಲಿ ಹೆರಿಗೆ ವೇಳೆ 28 ತಾಯಂದಿರು ಮೃತರಾಗಿದ್ದು ಇದರಲ್ಲಿ 23 ಸರ್ಕಾರಿ ಹಾಗೂ 5 ಖಾಸಗಿ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ. ಆದರೆ ಈ ಪ್ರಮಾಣ ಗಣನೀಯವಾಗಿ ಇಳಿಕೆಯಾಗಬೇಕಿದ್ದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿಯಲ್ಲಿ ಮರಣದ ಬಗ್ಗೆ ಆಡಿಟ್ ಮಾಡಿ ಸರಿಯಾದ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಸಿಜೆರಿಯನ್ ಪ್ರಮಾಣ ತಗ್ಗಿಸಲು ಎಸ್ಓಪಿ;
ದಾವಣಗೆರೆ ಜಿಲ್ಲೆಯಲ್ಲಿ ಏಪ್ರಿಲ್ ನಿಂದ ಅಕ್ಟೋಬರ್ ಅಂತ್ಯದವರೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಆದ 7676 ಹೆರಿಗೆ ಪ್ರಕರಣಗಳಲ್ಲಿ 3079 ಸಿಜೆರಿಯನ್ ಶೇ 40 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಆದ 4291 ಹೆರಿಗೆ ಪ್ರಕರಣಗಳಲ್ಲಿ 3093 ಸಿಜೆರಿಯನ್ ಹೆರಿಗೆಯಾಗಿದ್ದು ಶೇ 72 ರಷ್ಟು ಸಿಜೆರಿಯನ್ ಮಾಡಲಾಗಿದೆ. ಆದರೆ ಸಿಜೆರಿಯನ್ ಗಿಂತ ಸಹಜ ಹೆರಿಗೆಯಾದಲ್ಲಿ ಆರೋಗ್ಯವಂತ ಮಗು ಜನಿಸಲು ಸಾಧ್ಯವಿದ್ದು ಇದಕ್ಕೆ ಬೇಕಾದ ಮಾರ್ಗಸೂಚಿಯನ್ನು ಎಲ್ಲಾ ಆಸ್ಪತ್ರೆಗಳಿಗೆ ಕಳುಹಿಸಿಕೊಡಲಾಗುತ್ತದೆ. ಅಗತ್ಯವಿದ್ದಲ್ಲಿ ಮಾತ್ರ ಸಿಜೆರಿಯನ್ ಮಾಡಬೇಕಾಗುತ್ತದೆ. ಅನಾವಶ್ಯಕ ಸಿಜೆರಿಯನ್ ಹೆರಿಗೆಯನ್ನು ಗಣನೀಯವಾಗಿ ತಡೆಗಟ್ಟಬೇಕಾಗಿದೆ. ಗರ್ಭಿಣಿಯರಿಗೆ ಸಹಜ ಹೆರಿಗೆಯಾಗಲು ಕೈಗೊಳ್ಳಬೇಕಾದ ಚಟುವಟಿಕೆಗಳ ಬಗ್ಗೆ ಮತ್ತು ಮಾನೋಸ್ಥೈರ್ಯ ತುಂಬಲು ಕೌನ್ಸಿಲಿಂಗ್ ಮಾಡಬೇಕಾಗುತ್ತದೆ ಎಂದರು.
ಲಿಂಗಾನುಪಾತದಲ್ಲಿ ಕುಸಿತ:
ದಾವಣಗೆರೆ ಜಿಲ್ಲೆಯಲ್ಲಿ ಹೆಣ್ಣು ಮತ್ತು ಗಂಡಿನ ಲಿಂಗಾನುಪಾತದಲ್ಲಿ ಇಳಿಕೆಯತ್ತ ಸಾಗುತ್ತಿದ್ದು ಇದಕ್ಕೆ ನಿಖರವಾದ ಕಾರಣ ವಿಶ್ಲೇಷಿಸುವ ಅಗತ್ಯವಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯನ್ವಯ 2001 ರಲ್ಲಿ 946, 2011 ರಲ್ಲಿ 948, 2015-16 ರಲ್ಲಿ 1029 ಹಾಗೂ 2019-20 ರಲ್ಲಿ 797 ಇದೆ. ಸಿವಿಲ್ ರಿಜಿಸ್ಟ್ರೇಷನ್ ಸಿಸ್ಟಂ ಅನ್ವಯ 2020 ರಲ್ಲಿ 957, 2021 ರಲ್ಲಿ 946, 2022 ರಲ್ಲಿ 929 ಇದ್ದರೆ 2023 ರಲ್ಲಿ ಲಿಂಗಾನುಪಾತ 935 ಕ್ಕೆ ಕುಸಿದಿದೆ. ಇದನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಂಡು ಭ್ರೂಣಹತ್ಯೆ ಪ್ರಕರಣಗಳು ನಡೆಯುತ್ತಿವೆಯೋ ಇಲ್ಲವೋ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುವ ಜೊತೆಗೆ ಕಠಿಣ ಕ್ರಮಕ್ಕೆ ಮುಂದಾಗಬೇಕೆಂದು ತಿಳಿಸಿದರು.
ಕ್ಷಯ ಪತ್ತೆಯಲ್ಲಿ ಹಿಂದೆ:
ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ 2018 ಜನರನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡಲಾಗಿದೆ. ಇದರಿಂದ 132 ಜನರು ಮರಣ ಹೊಂದಿದ್ದು ಜಿಲ್ಲೆಯು ರಾಜ್ಯಕ್ಕಿಂತ ಕಡಿಮೆ ಪ್ರಗತಿ ಸಾಧಿಸಿದ್ದು ರಾಜ್ಯದಲ್ಲಿ 27 ನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಬೇಕೆಂದು ಸೂಚನೆ ನೀಡಿದರು.
ಎಬಿಆರ್ಕೆಯಡಿ ರೆಫರೆಲ್ ಸಮಸ್ಯೆ ನಿವಾರಣೆಗೆ ಕ್ರಮ:
ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಎಬಿಆರ್ಕೆಯಡಿ ರೆಫರಲ್ ಕಡ್ಡಾಯವಾಗಿದ್ದು ಇದರಿಂದ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಿಂದ ಹೊರಗಿರಬೇಕಾಗುತ್ತದೆ. ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪನವರು ರೆಫರಲ್ ಬಗ್ಗೆ ಪ್ರಸ್ತಾಪಿಸಿದಾಗ ಈ ಸಮಸ್ಯೆ ಇಲಾಖೆ ಗಮನದಲ್ಲಿದ್ದು ಪರಿಹಾರ ಮಾರ್ಗೋಪಾಯ ಕಂಡುಕೊಳ್ಳಲಾಗುತ್ತದೆ. ಮತ್ತು ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಗೆ ಮುನ್ನಾ ಗರ್ಭಿಣಿ ತಾಯಂದಿರ ಯುನಿಕ್ ಐಡಿ ದಾಖಲಿಸುವ ಡಿಜಿಟಲ್ ವ್ಯವಸ್ಥೆಯನ್ನು ಅನುಷ್ಟಾನ ಮಾಡಲು ದಾವಣಗೆರೆ ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ ಪ್ರಸ್ತಾಪಿಸಿದರು, ಸಚಿವರು ಈ ಬಗ್ಗೆ ಇಲಾಖಾ ಮಟ್ಟದಲ್ಲಿ ಪರಿಶೀಲನೆ ಮಾಡಲಾಗುತ್ತದೆ ಎಂದರು.
ಜಗಳೂರು ತಾಲ್ಲೂಕು ಆಸ್ಪತ್ರೆ ಕಟ್ಟಡ ಹಳೆಯದಾಗಿದ್ದು ಈಗಾಗಲೇ 5 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಮುಂದೆ ಕಟ್ಟಡ ನಿರ್ಮಾಣ ಮಾಡುವಾಗ ಜಗಳೂರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತದೆ ಎಂದರು. ಈ ಬಗ್ಗೆ ಶಾಸಕರಾದ ಬಿ.ದೇವೇಂದ್ರಪ್ಪನವರು ಪ್ರಸ್ತಾಪಿಸಿದರು.
ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಾದ ಶಿವಕುಮಾರ್, ಆರೋಗ್ಯ ಅಭಿಯಾನ ನಿರ್ದೇಶಕರಾದ ಡಾ; ನವೀನ್ ಭಟ್ ವೈ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ; ಷಣ್ಮುಖಪ್ಪ, ಜಿಲ್ಲಾಅ ಸರ್ಜನ್ ಡಾ; ನಾಗೇಂದ್ರಪ್ಪ ಹಾಗೂ ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳು, ಕಾರ್ಯಕ್ರಮ ಅಧಿಕಾರಿಗಳು ಉಪಸ್ಥಿತರಿದ್ದರು.