SUDDIKSHANA KANNADA NEWS/ DAVANAGERE/ DATE:19-11-2024
ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ನಲ್ಲಿ ಮೋಸ, ವಂಚನೆ ಹೆಚ್ಚಾಗುತ್ತಿವೆ. ಮೊಬೈಲ್ ಫೋನ್ ಮಾಡಿ, ಒಟಿಪಿ ನಂಬರ್ ಪಡೆದು, ಸೈಬರ್ ಅರೆಸ್ಟ್ ಎಂದೆಲ್ಲಾ ಮೋಸ ಮಾಡುವ ವಿವಿಧ ಬಗೆಯನ್ನು ಕಾಣಬಹುದು.
ದಾವಣಗೆರೆ ಜಿಲ್ಲೆಯಲ್ಲಿಯೇ ಅದೆಷ್ಟೋ ಮಂದಿ ಈ ವಂಚನೆ ಜಾಲಕ್ಕೆ ಸಿಲುಕಿದ್ದಾರೆ. ಕೆಲವರು ಹೇಳಿಕೊಂಡರೆ, ಮತ್ತೆ ಕೆಲವರು ದೂರು ನೀಡಿದ್ದಾರೆ. ಮತ್ತೆ ಕೆಲವರಂತೂ ಹೇಳಿಕೊಳ್ಳಲು ಆಗದೇ
ಸುಮ್ಮನೆ ಇರಲೂ ಆಗದೇ ಒದ್ದಾಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆಯು ಸಾರ್ವಜನಿಕರು, ಆನ್ ಲೈನ್ ಹಣ ಹೂಡಿಕೆ ಮಾಡುವವರು, ಷೇರು ಮಾರುಕಟ್ಟೆ ವ್ಯವಹಾರ ನಡೆಸುವವರು ಸೇರಿದಂತೆ ಎಲ್ಲರಿಗೂ ಸಲಹೆ ಮತ್ತು ಸೂಚನೆ
ಕೊಟ್ಟಿದೆ.
ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಸ್ಕ್ಯಾಮ್ ಹೆಚ್ಚಾಗುತ್ತಿದೆ. ಇದರ ಬಗ್ಗೆ ಜಾಗರೂಕರಾಗಿರಿ, ವಂಚಕರು ನಿಮ್ಮ ಬ್ಯಾಂಕ್ ಖಾತೆಗಳಲ್ಲಿರುವ ಹಣವನ್ನು ಕದಿಯಲು ಹೊಂಚು ಹಾಕುತ್ತಿರುತ್ತಾರೆ. ವಿವಿಧ ಮಾದರಿಯ ಬಿಲ್ ಗಳನ್ನು ಆನ್ ಲೈನ್ ಮೂಲಕ ಪಾವತಿಸುವ ಮೊದಲು ಆ ಲಿಂಕ್ / ವೆಬ್ ಸೈಟ್ ಬಗ್ಗೆ ಖಚಿತಪಡಿಸಿಕೊಳ್ಳಿ ಎಂದು ಸಲಹೆ ನೀಡಿದೆ.
ಸೈಬರ್ ವಂಚಕರ ಸುಳಿಗೆ ಬೀಳದಿರಿ. ಸೈಬರ್ ವಂಚನೆಗೆ ಒಳಗಾದರೆ ಕೂಡಲೇ 1930 ಗೆ ಕರೆ ಮಾಡಿ ದೂರು ನೀಡಿ ಎಂದು ಜಿಲ್ಲಾ ಪೊಲೀಸ್ ಇಲಾಖೆಯು ತಿಳಿಸಿದೆ.