Home ಕ್ರೈಂ ನ್ಯೂಸ್ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ: ಅಸಾರಾಂ ಬಾಪು ಆಜೀವ ಜೈಲು ಶಿಕ್ಷೆ ಎತ್ತಿಹಿಡಿದ ರಾಜಸ್ಥಾನ ಹೈಕೋರ್ಟ್
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ: ಅಸಾರಾಂ ಬಾಪು ಆಜೀವ ಜೈಲು ಶಿಕ್ಷೆ ಎತ್ತಿಹಿಡಿದ ರಾಜಸ್ಥಾನ ಹೈಕೋರ್ಟ್

Share
ಅಸಾರಾಂ
Share

ಜೋಧ್‌ಪುರ: ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಆಜೀವ ಕಾರಾವಾಸ (ಜೀವಾವಧಿ) ಶಿಕ್ಷೆಯನ್ನು ರಾಜಸ್ಥಾನ ಹೈಕೋರ್ಟ್ ಎತ್ತಿಹಿಡಿದಿದೆ. ಈ ಮೂಲಕ ಶಿಕ್ಷೆ ರದ್ದುಗೊಳಿಸುವಂತೆ ಕೋರಿ ಅಸಾರಾಂ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಭಾಗಶಃ ರಿಲೀಫ್: ಗ್ಯಾಂಗ್‌ರೇಪ್ ಆರೋಪ ಮುಕ್ತ

ಹೈಕೋರ್ಟ್‌ನ ಜೋಧ್‌ಪುರ ಪೀಠವು ಅಸಾರಾಂ ಬಾಪುಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಮುಂದುವರಿಸಿದೆಯಾದರೂ, ಅವರ ಮೇಲಿದ್ದ ‘ಗ್ಯಾಂಗ್‌ರೇಪ್’ (ಸಾಮೂಹಿಕ ಅತ್ಯಾಚಾರ) ಮತ್ತು ಕ್ರಿಮಿನಲ್ ಪಿತೂರಿ ಆರೋಪಗಳನ್ನು ಕೈಬಿಟ್ಟಿದೆ. ಈ ಆರೋಪಗಳನ್ನು ಸಾಬೀತುಪಡಿಸಲು ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ನ್ಯಾಯಮೂರ್ತಿಗಳಾದ ಅರುಣ್ ಕುಮಾರ್ ಮೊಂಗಾ ಮತ್ತು ಯೋಗೇಂದ್ರ ಕುಮಾರ್ ಪುರೋಹಿತ್ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ. ಆದರೆ ಭಾರತೀಯ ದಂಡ ಸಂಹಿತೆ (IPC) ಅಡಿಯ ಅತ್ಯಾಚಾರ, ಪೋಕ್ಸೊ (POCSO) ಕಾಯ್ದೆ ಮತ್ತು ಬಾಲನ್ಯಾಯ ಕಾಯ್ದೆಯಡಿಯ ಅಪರಾಧಗಳು ಸಾಬೀತಾಗಿವೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಸಹ ಆರೋಪಿಗಳು ಸಂಪೂರ್ಣ ಖುಲಾಸೆ

ಇದೇ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದಿಂದ 20 ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಒಳಗಾಗಿದ್ದ ಅಸಾರಾಂನ ಸಹಚರರಾದ ಶರತ್‌ಚಂದ್ರ ಮತ್ತು ಶಿಲ್ಪಿ ಅವರನ್ನು ಹೈಕೋರ್ಟ್ ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿ, ಸಂಪೂರ್ಣವಾಗಿ ಖುಲಾಸೆಗೊಳಿಸಿದೆ.

ತಕ್ಷಣ ಶರಣಾಗತಿಗೆ ಆದೇಶ

ಪ್ರಸ್ತುತ ವೈದ್ಯಕೀಯ ಕಾರಣಗಳಿಗಾಗಿ ಮಧ್ಯಂತರ ಜಾಮೀನಿನ ಮೇಲೆ ಹೊರಗಿರುವ ಅಸಾರಾಂ ಬಾಪುಗೆ ತಕ್ಷಣವೇ ಶರಣಾಗುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಅವರ ಮಧ್ಯಂತರ ಜಾಮೀನನ್ನು ಜುಲೈ 7ರವರೆಗೆ ವಿಸ್ತರಿಸಿದ್ದವು.

ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಾಧ್ಯತೆ

ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಸಂತ್ರಸ್ತೆಯ ಪರ ವಕೀಲ ಪಿ.ಸಿ. ಸೋಲಂಕಿ ಪ್ರತಿಕ್ರಿಯಿಸಿದ್ದು, “ಅಸಾರಾಂಗೆ ವಿಧಿಸಲಾದ ಜೀವಾವಧಿ ಶಿಕ್ಷೆ ಮುಂದುವರಿದಿದೆ. ಆದರೆ ಸಹ ಆರೋಪಿಗಳ ಖುಲಾಸೆ ಹಾಗೂ ಗ್ಯಾಂಗ್‌ರೇಪ್ ಆರೋಪ ಕೈಬಿಟ್ಟಿರುವುದರ ವಿರುದ್ಧ ಸಂತ್ರಸ್ತೆಯೊಂದಿಗೆ ಚರ್ಚಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು” ಎಂದು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

2013 ರಲ್ಲಿ ಜೋಧ್‌ಪುರದ ಆಶ್ರಮದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಅಸಾರಾಂ ವಿರುದ್ಧ ಕೇಳಿಬಂದಿತ್ತು. ಸುದೀರ್ಘ ವಿಚಾರಣೆ ನಡೆಸಿದ್ದ ವಿಶೇಷ ಪೋಕ್ಸೊ ನ್ಯಾಯಾಲಯವು 2018ರ ಏಪ್ರಿಲ್‌ನಲ್ಲಿ ಅಸಾರಾಂ ಬಾಪು ದೋಷಿ ಎಂದು ತೀರ್ಪು ನೀಡಿ, ಆಜೀವ ಕಾರಾವಾಸ ಶಿಕ್ಷೆ ವಿಧಿಸಿತ್ತು.

Share

Leave a comment

Leave a Reply

Your email address will not be published. Required fields are marked *