ಲಕ್ನೋ: ಸಾರ್ವಜನಿಕ ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿ ನಮಾಜ್ ಮಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಡಕ್ ಎಚ್ಚರಿಕೆ ನೀಡಿದ್ದಾರೆ.
ಆದರೆ, ಪ್ರಾರ್ಥನೆ ಸಲ್ಲಿಸುವುದನ್ನು ಸರ್ಕಾರ ತಡೆಯುವುದಿಲ್ಲ, ಬದಲಿಗೆ ಜನರು ಶಿಫ್ಟ್‌ಗಳ ಆಧಾರದ ಮೇಲೆ ನಮಾಜ್ ನಿರ್ವಹಿಸಬಹುದು ಎಂದು ಅವರು ಪರ್ಯಾಯ ಪರಿಹಾರವನ್ನು ಪ್ರಸ್ತಾಪಿಸಿದ್ದಾರೆ.
ಲಕ್ನೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ರಸ್ತೆಗಳು ವ್ಯಾಪಾರಿಗಳು, ಕಾರ್ಮಿಕರು, ರೋಗಿಗಳು ಹಾಗೂ ತುರ್ತು ಸೇವೆಗಳ ಸಂಚಾರಕ್ಕಾಗಿ ಇವೆ. ಸಾರ್ವಜನಿಕ ಸ್ಥಳಗಳನ್ನು ದುರ್ಬಳಕೆ ಮಾಡಿಕೊಳ್ಳಲು ಯಾರಿಗೂ ಹಕ್ಕಿಲ್ಲ. ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತದೆ. ನಾವು ನಮಾಜ್ ತಡೆಯುವುದಿಲ್ಲ, ಆದರೆ ಅದು ರಸ್ತೆಗಳಲ್ಲಿ ನಡೆಯಬಾರದು” ಎಂದು ಸ್ಪಷ್ಟಪಡಿಸಿದರು. ಆರಂಭದಲ್ಲಿ ಪ್ರೀತಿಯಿಂದ ಮನವೊಲಿಸಲು ಪ್ರಯತ್ನಿಸಲಾಗುವುದು, ಮಾತು ಕೇಳದಿದ್ದರೆ ನಿಯಮ ಪಾಲನೆಗಾಗಿ ಬೇರೆ ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
AIMIM ತೀಕ್ಷ್ಣ ಪ್ರತಿಕ್ರಿಯೆ:
ಯೋಗಿ ಆದಿತ್ಯನಾಥ್ ಅವರ ಈ ಹೇಳಿಕೆಗೆ ಅಖಿಲ ಭಾರತ ಮಜ್ಲಿಸ್-ಎ-ಇತ್ತಿಹಾದುಲ್ ಮುಸ್ಲಿಮೀನ್ (AIMIM) ಪಕ್ಷ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಯುಪಿ ಸರ್ಕಾರವು ನಾಗರಿಕರನ್ನು ಧರ್ಮದ ಆಧಾರದ ಮೇಲೆ ನೋಡುತ್ತಿದೆ ಎಂದು ಎಐಎಂಐಎಂ ವಕ್ತಾರ ಆಸಿಮ್ ವಕಾರ್ ಆರೋಪಿಸಿದ್ದಾರೆ. “ರಸ್ತೆಗಳಲ್ಲಿ ನಮಾಜ್ ಮಾಡಲು ಅವಕಾಶವಿಲ್ಲ ಎಂದಾದರೆ, ಪೂಜೆ ಮತ್ತು ಆರತಿಗಳಿಗಾಗಿ ರಸ್ತೆಗಳನ್ನು ಏಕೆ ಮುಚ್ಚಲಾಗುತ್ತದೆ? ಇದು ಎಲ್ಲರಿಗೂ ಒಂದೇ ಆದ ಕಾನೂನೇ?” ಎಂದು ಅವರು ಪ್ರಶ್ನಿಸಿದ್ದಾರೆ.





Leave a comment