SUDDIKSHANA KANNADA NEWS/ DAVANAGERE/ DATE:18-08-2023
ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ದ ಟೀಕಿಸಿದವರನ್ನು ದಮನ ಮಾಡುವ ಸರ್ವಾಧಿಕಾರಿ ಧೋರಣೆ ಅನುಸರಿಸಲಾಗುತ್ತಿದೆ. ಮಾಧ್ಯಮಗಳ ಸ್ವಾತಂತ್ರ್ಯ ಹರಣ ಮಾಡಲಾಗುತ್ತಿದ್ದು, ಇದರ ವಿರುದ್ದ ದೊಡ್ಡ ಮಟ್ಟದಲ್ಲಿ
ಹೋರಾಟ ನಡೆಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ನಿವಾಸದಲ್ಲಿ ನಡೆದ ಪಕ್ಷದ ಬೆಂಗಳೂರು ಶಾಸಕರ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹನ್ನೊಂದು ಶಾಸಕರು ಫೇಕ್ ಪತ್ರ ಎಂದು ದೂರು ಕೊಟ್ಟ ತಕ್ಷಣ ಮಾಧ್ಯಮದವರಿಗೆ ನೊಟಿಸ್ ಕೊಡಲಾಗುತ್ತಿದೆ. ಮೊದಲು ಪತ್ರಕ್ಕೆ ಸಹಿ ಮಾಡಿದವರನ್ನು ಕರೆಯಿಸಿ ವಿಚಾರಣೆ ಮಾಡಬೇಕಿತ್ತು. ಅವರು ಸಹಿ ಮಾಡಿದ್ದು ಫೇಕಾ ಅಥವಾ ನಿಜಾನಾ ಅನ್ನುವುದನ್ನು ವಿಚಾರಣೆ ಮಾಡಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಶಾಸಕರು ಸಹಿ ಮಾಡಿರುವ ಬಗ್ಗೆ ಎಫ್ ಎಸ್ ಎಲ್ ಲ್ಯಾಬ್ ಗೆ ಕಳುಹಿಸಿ ತನಿಖೆ ನಡೆಸಲಿ, ಅದನ್ನು ಬಿಟ್ಟು ಸುದ್ದಿ ಪ್ರಸಾರ ಮಾಡಿದ ಮಾಧ್ಯಮಗಳನ್ನು ವಿಚಾರಣೆ ಕರೆಯುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಈ ರೀತಿ ಮಾಧ್ಯಮಗಳಿಗೆ ನೊಟಿಸ್ ಕೊಟ್ಟು ವಿಚಾರಣೆಗೆ ಕರೆದಿರುವುದು ಜಗತ್ತಿನಲ್ಲಿ ಎಲ್ಲಿಯೂ ನಡೆದಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕಾಂಟ್ರಾಕ್ಟರ್ ಗಳು ಬಿಲ್ ಆಗಿಲ್ಲ ಎಂದು ರಾಜ್ಯಪಾಲರಿಗೆ ದೂರು ನೀಡಿದರೆ, ಅವರ ವಿರುದ್ದವೂ ಕೇಸ್ ದಾಖಲಿಸಲಾಗುತ್ತಿದೆ. ನಮ್ಮ ಅವಧಿಯಲ್ಲಿ ಯೂ ಗುತ್ತಿಗೆದಾರರು ಆರೋಪ ಮಾಡಿದ್ದರು, ನಾವು ಇದೇ ರೀತಿ
ನಡೆದು ನುಡಿದ್ದೇವಾ ? ರಾಜ್ಯಪಾಲರಿಗೂ ಗೌರವ ಇಲ್ಲವೇ ? ಗುತ್ತಿಗೆದಾರರಿಗೆ ಒಂದು ಸಂಘ ಇದೆ. ಅವರು ಕೆಲಸ ಮಾಡಿದ್ದಾರೆ. ಅವರು ನಿಮ್ಮೆಲ್ಲರ ಮನೆ ಬಾಗಿಲು ತಟ್ಟಿದ್ದಾರೆ. ಕೊನೆಗೆ ರಾಜ್ಯಪಾಲರು, ಪ್ರತಿಪಕ್ಷದ ನಾಯಕರನ್ನು ಭೇಟಿ ಮಾಡಿದ್ದಾರೆ. ಅವರು ನಿಮ್ಮ ವಿರುದ್ದ ಧ್ವನಿ ಎತ್ತಿದರೆ ಅವರ ವಿರುದ್ದ ಕೇಸ್ ಹಾಕುತ್ತೀರಿ, ನಿಮ್ಮ ವಿರುದ್ದ ಯಾರೂ ಧ್ವನಿ ಎತ್ತಬಾರದು ಅನ್ನುವ ಧೋರಣೆ ತಾಳುತ್ತಿದ್ದೀರಿ ಅದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.