Home ಕ್ರೈಂ ನ್ಯೂಸ್ ಹರಿಹರ ಪಂಚಮಸಾಲಿ ಪೀಠದಲ್ಲಿ ಕಾನೂನು ಬಾಹಿರ ಸಮಾವೇಶಕ್ಕೆ ಸಂಚು: ಟ್ರಸ್ಟ್‌ನಿಂದ ಪೊಲೀಸರಿಗೆ ದೂರು!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಹರಿಹರ ಪಂಚಮಸಾಲಿ ಪೀಠದಲ್ಲಿ ಕಾನೂನು ಬಾಹಿರ ಸಮಾವೇಶಕ್ಕೆ ಸಂಚು: ಟ್ರಸ್ಟ್‌ನಿಂದ ಪೊಲೀಸರಿಗೆ ದೂರು!

Share
ಹರಿಹರ
Share

ದಾವಣಗೆರೆ: ​ಹರಿಹರ ತಾಲ್ಲೂಕಿನ ಹನಗವಾಡಿ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಆವರಣದಲ್ಲಿ ಕೆಲವು ವ್ಯಕ್ತಿಗಳು ಕಾನೂನು ಬಾಹಿರವಾಗಿ ಬೃಹತ್ ರಾಜ್ಯ ಸಮಾವೇಶ ನಡೆಸಲು ಸಂಚು ರೂಪಿಸಿದ್ದು, ಇದಕ್ಕೆ ಅವಕಾಶ ನೀಡಬಾರದು ಎಂದು ಪೀಠದ ಟ್ರಸ್ಟ್ ವತಿಯಿಂದ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ.

​ಪೀಠದ ಆವರಣದಲ್ಲಿ ಏಪ್ರಿಲ್ 24ರಂದು ಬಸವೋತ್ಸವ ಹಾಗೂ ಪೀಠದ ನಿಷ್ಠಾವಂತ ಭಕ್ತರ ಬೃಹತ್ ರಾಜ್ಯ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲಾಗಿದೆ. ಈ ಪ್ರಕಟಣೆಯಲ್ಲಿ ಪೀಠದಿಂದ ಈಗಾಗಲೇ ಉಚ್ಚಾಟನೆಗೊಂಡಿರುವ ವಚನಾನಂದ ಸ್ವಾಮಿಗಳ ಭಾವಚಿತ್ರ ಬಳಸಲಾಗಿದೆ. ಅಲ್ಲದೆ, ಪೀಠದ ಆಡಳಿತಾಧಿಕಾರಿ ಸ್ಥಾನದಿಂದ ಅಮಾನತುಗೊಂಡಿರುವ ಡಾ ರಾಜಕುಮಾರ್ ಹಾಗೂ ಟ್ರಸ್ಟ್‌ನಲ್ಲಿ ಯಾವುದೇ ಅಧಿಕಾರ ಹೊಂದಿರದ, ಸ್ವಯಂ ಘೋಷಿತ ಅಧ್ಯಕ್ಷ ಪರಮೇಶ್ವರ ಗೌಡ್ರು ಎಂಬುವವರು ಈ ಸಭೆಯ ನೇತೃತ್ವ ವಹಿಸಿರುವುದು ಕಂಡುಬಂದಿದೆ ಎಂದು ಟ್ರಸ್ಟ್ ನ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಮತ್ತು ಕಾರ್ಯದರ್ಶಿ ಜ್ಯೋತಿ ಪ್ರಕಾಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

​ಈ ವ್ಯಕ್ತಿಗಳಿಗೆ ಶ್ರೀಪೀಠದ ಆವರಣದಲ್ಲಿ ಯಾವುದೇ ಸಭೆ ಅಥವಾ ಪತ್ರಿಕಾಗೋಷ್ಠಿ ನಡೆಸುವ ನೈತಿಕ ಹಕ್ಕು ಮತ್ತು ಅಧಿಕಾರವಿಲ್ಲ ಎಂದು ಈಗಾಗಲೇ ಟ್ರಸ್ಟ್ ಸ್ಪಷ್ಟಪಡಿಸಿದೆ. ಸಮಾಜದ ಭಕ್ತರಲ್ಲಿ ಗೊಂದಲ ಮೂಡಿಸಿ, ಪರ-ವಿರೋಧದ ಗುಂಪುಗಳನ್ನಾಗಿ ವಿಂಗಡಿಸುವ ಮೂಲಕ ಅಶಾಂತಿ ಸೃಷ್ಟಿಸುವ ಹಾಗೂ ಪೀಠದ ಆಸ್ತಿಪಾಸ್ತಿಗೆ ಧಕ್ಕೆ ತರುವ ಹುನ್ನಾರ ಇದರ ಹಿಂದೆ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

​ಮುಂದಿನ ದಿನಗಳಲ್ಲಿ ಪೀಠದ ಟ್ರಸ್ಟ್ ಮತ್ತು ಸಮಾಜದ ಮುಖಂಡರು ಸೇರಿ ನಿಗದಿಪಡಿಸಿದ ದಿನಾಂಕದಂದು ಬಸವ ಜಯಂತಿಯನ್ನು ಸಂಭ್ರಮದಿಂದ ಆಚರಿಸಲು ನಿರ್ಧರಿಸಲಾಗಿದೆ. ಆದ್ದರಿಂದ, ಅನುಮತಿ ಇಲ್ಲದೆ ನಡೆಸಲು ಉದ್ದೇಶಿಸಿರುವ ಏಪ್ರಿಲ್ 24ರ ಸಭೆಯನ್ನು ತಡೆದು, ಶಾಂತಿ ಕಾಪಾಡಲು ಕಾನೂನು ಕ್ರಮ ಜರುಗಿಸಬೇಕು ಎಂದು ಪೊಲೀಸ್ ಇಲಾಖೆಯನ್ನು ಕೋರಿದ್ದಾರೆ.

Share

Leave a comment

Leave a Reply

Your email address will not be published. Required fields are marked *