ದಾವಣಗೆರೆ: ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಇಂಡಿ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ. 2023ರಲ್ಲಿಯೇ ಮಹಿಳಾ ಮೀಸಲಾತಿಗೆ ಒಪ್ಪಿಗೆ ಸಿಕ್ಕಿದ್ದರೂ, ರಾಜಕೀಯ ಲಾಭಕ್ಕೋಸ್ಕರ ವಿಪಕ್ಷಗಳು ಮಹಿಳಾ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕೇಂದ್ರ ಸರ್ಕಾರ ಹೊರಟಿದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇಂಡಿ ಒಕ್ಕೂಟವು ಮಹಿಳಾ ವಿರೋಧಿ ಎಂದು ಬಿಜೆಪಿ ಆರೋಪಿಸುತ್ತಿದೆ. ಐದು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಬಿಲ್ ಜಾರಿಗೆ ತರಲು ಮುಂದಾಗಿತ್ತು. ಕ್ಷೇತ್ರ ಪುನರ್ವಿಂಗಡಣೆ ಸ್ವರೂಪ, ರೂಪುರೇಷೆ, ಯಾವ ಸಮುದಾಯಕ್ಕೆ ಎಷ್ಟೆಷ್ಟು ಮೀಸಲಾತಿ ನೀಡಲಾಗುತ್ತದೆ, ದಕ್ಷಿಣ ರಾಜ್ಯಗಳಿಗೆ ಆಗುವ ಅನ್ಯಾಯ ಸರಿಪಡಿಸುವ ಕುರಿತಂತೆ ಯಾವುದೇ ಸಭೆ ಕರೆದಿಲ್ಲ. ವಿಪಕ್ಷಗಳ ಅಭಿಪ್ರಾಯವನ್ನೂ ಕೇಳದೇ ಐದು ರಾಜ್ಯಗಳ ಚುನಾವಣೆ ಗಮನದಲ್ಲಿಟ್ಟುಕೊಂಡು ತುರ್ತು ಅಧಿವೇಶನ ಕರೆದು ಬಿಲ್ ಮಸೂದೆ ಮಾಡಲು ಹೊರಟಿದ್ದ ಎನ್ ಡಿಎ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸೋಲಾಗಿದೆ. ನಮ್ಮದು ದೇಶದ ಜನರ ಗೆಲುವು ಎಂದು ಬಣ್ಣಿಸಿದರು.
ಪಂಚ ರಾಜ್ಯಗಳ ಚುನಾವಣೆ ಮುಗಿದ ಬಳಿಕ ಸುದೀರ್ಘವಾಗಿ ಚರ್ಚಿಸಿ, ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಕ್ಷೇತ್ರ ಮರುವಿಂಗಡಣೆ ಮಸೂದೆ ಅನುಷ್ಠಾನಕ್ಕೆ ಮುಂದಾಗಬಹುದಾಗಿತ್ತು. ಆದರೆ, ಮಹಿಳಾ ಮೀಸಲಾತಿ ಹೆಸರಿನಲ್ಲಿ ಗೊಂದಲ ಸೃಷ್ಟಿಸಿ, ಮಹಿಳೆಯರ ಭಾವನೆಗಳ ಜೊತೆ ಆಟವಾಡುವಂಥ ಮಾತುಗಳನ್ನು ಪ್ರಧಾನಿ ನರೇಂದ್ರ ಮೋದಿ ಆಡಿದ್ದಾರೆ. ಇವರ ವಿರುದ್ಧ ಕ್ರಮಕ್ಕೆ ಕೇಂದ್ರ ಚುನಾವಣಾ ಆಯೋಗವು ಕ್ರಮ ಕೈಗೊಳ್ಳಬೇಕು. ಮಹಿಳಾ ವಿರೋಧಿ ಕಾಂಗ್ರೆಸ್ ಎಂಬಂತೆ ಪ್ರಚಾರ ನಡೆಸುತ್ತಿದ್ದು, ಇದರಲ್ಲಿ ಸತ್ಯಾಂಶವಿಲ್ಲ ಎಂದು ತಿಳಿಸಿದರು.
ಅಮಿತ್ ಶಾ ಎಲ್ ಕೆಜಿ ಮಕ್ಕಳಿಗೆ ಹೇಳಿಕೊಟ್ಟಂತೆ ಹೇಳಿಕೊಡುತ್ತೇವೆಂದು ನಮಗೆ ಹೇಳುವುದು ಬೇಡ. ಏಪ್ರಿಲ್‌ನಲ್ಲಿ ಜನಗಣತಿ ಮಾಡಲಾಗುತ್ತಿದೆ. ಕ್ಷೇತ್ರ ಪುನರ್ವಿಂಗಡಣೆ ಹೆಸರಿನಲ್ಲಿ ವಿಧಾನಸಭೆ, ಲೋಕಸಭೆಯಲ್ಲಿ ಸ್ಥಾನಗಳ ಹೆಚ್ಚಳದಲ್ಲಿ ನಮಗೆ ಅನುಮಾನ ಇದೆ. ರಾಜಕೀಯ ಲಾಭ ಮನಸಿನಲ್ಲಿಟ್ಟುಕೊಂಡು ಜಮ್ಮು ಕಾಶ್ಮೀರ, ಅಸ್ಸಾಂನಲ್ಲಿ ಮಾಡಲಾಗಿದೆ. ಇದೇ ಮಾನದಂಡ ಇಲ್ಲಿ ಅನುಸರಿಸಲು ಬಿಜೆಪಿಯು ಷಡ್ಯಂತ್ರ ರೂಪಿಸಿದೆ ಎಂದು ಕಿಡಿಕಾರಿದರು.
ಮಹಿಳಾ ಸಂಸದರಿಗೆ ಅಭಿಪ್ರಾಯ ಹಂಚಿಕೊಳ್ಳಲು ಕೇವಲ ನಾಲ್ಕೂವರೆ ನಿಮಿಷ ನೀಡಿದ್ದಾರೆ. ಹೆಚ್ಚಿನ ಸಂಸದರಿಗೆ ಮಾತನಾಡಲು ಅವಕಾಶವೇ ಸಿಕ್ಕಿಲ್ಲ. ಬಿಜೆಪಿಗೆ ಅನುಕೂಲವಾಗುವಂಥ ಬಿಲ್ ಪಾಸ್ ಮಾಡಲು ವಿಪಕ್ಷದವರ ಸೆಳೆಯಲು ಕಸರತ್ತು ನಡೆಸಿದ್ದರೂ ಇಂಡಿ ಒಕ್ಕೂಟವು ಗಟ್ಟಿಯಾಗಿದ್ದರಿಂದ ಆಗಿಲ್ಲ. ಒಂದು ವೇಳೆ ಎನ್ ಡಿಎ ಏನಾದರೂ 400 ಸ್ಥಾನಗಳನ್ನು ಪಡೆದಿದ್ದರೆ ವಿರೋಧಪಕ್ಷದವರನ್ನು ಲೆಕ್ಕಕ್ಕೇ ತೆಗೆದುಕೊಳ್ಳುತ್ತಿರಲಿಲ್ಲ. ಈಗಾಗಲೇ ಸರಳ ಬಹುಮತ ಇರುವುದರಿಂದ ಎಷ್ಟೋ ಬಿಲ್ ಅನ್ನು ಪಾಸ್ ಮಾಡಿದ್ದಾರೆ. ನಾವು ಪುನರ್ವಿಂಗಣೆ ಬಿಲ್ ಮಾತ್ರ ವಿರೋಧಿಸಿದ್ದೇವೆಯೇ ಹೊರತು ಮಹಿಳಾ ಮೀಸಲಾತಿ ಮಸೂದೆ ಅಲ್ಲ ಎಂದು ಸ್ಪಷ್ಟಪಡಿಸಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್. ಬಿ. ಮಂಜಪ್ಪ, ದಾವಣಗೆರೆ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಜಿ. ಶಿವಕುಮಾರ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಅನಿತಾ ಬಾಯಿ ಮತ್ತಿತರರು
ಹಾಜರಿದ್ದರು.
- Congress
- DAVANAGERE
- Delimitation Bill
- Dr. Prabha Mallikarjun
- INDIA Alliance
- Injustice to Southern States.
- NDA Government
- Political Gain
- Press Meet
- Women's Reservation Bill
- ಇಂಡಿ ಒಕ್ಕೂಟ
- ಎನ್ ಡಿಎ ಸರ್ಕಾರ
- ಕಾಂಗ್ರೆಸ್
- ಕ್ಷೇತ್ರ ಮರುವಿಂಗಡಣೆ ಮಸೂದೆ
- ಡಾ. ಪ್ರಭಾ ಮಲ್ಲಿಕಾರ್ಜುನ್
- ದಕ್ಷಿಣ ರಾಜ್ಯಗಳಿಗೆ ಅನ್ಯಾಯ.
- ದಾವಣಗೆರೆ
- ಪತ್ರಿಕಾಗೋಷ್ಠಿ
- ಮಹಿಳಾ ಮೀಸಲಾತಿ
- ರಾಜಕೀಯ ಲಾಭ






Leave a comment