ಸೇಲಂ (ತಮಿಳುನಾಡು): ಹೊಸ ಮಾದರಿಯ ಸಾಂಕ್ರಾಮಿಕ ರೋಗ ಹರಡುತ್ತಿದೆ ಎಂದು ನಂಬಿಸಿ, ತಲೆ ಬೋಳಿಸಿಕೊಂಡರೆ ಸರ್ಕಾರದಿಂದ ಪ್ರೋತ್ಸಾಹಧನ ನೀಡುವುದಾಗಿ ಹೇಳಿ ವಂಚಕನೊಬ್ಬ ಗ್ರಾಮೀಣ ಭಾಗದ ಮಹಿಳೆಯರನ್ನು ಏಮಾರಿಸಿರುವ ವಿಚಿತ್ರ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ನಡೆದಿದ್ದೇನು?
ಸೇಲಂ ಜಿಲ್ಲೆಯ ಗ್ರಾಮವೊಂದರ ಮಹಿಳೆಗೆ ಕರೆ ಮಾಡಿದ ವ್ಯಕ್ತಿಯೊಬ್ಬ, ತಾನು ಸರ್ಕಾರಿ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಆಕೆಯ ಕುಟುಂಬದ ವೈಯಕ್ತಿಕ ವಿವರಗಳನ್ನು ನೀಡಿ ನಂಬಿಕೆ ಗಳಿಸಿದ ಆತ, “ಕೊರೊನಾದಂತೆ ಮಾನವನ ಕೂದಲಿನ ಮೂಲಕ ಹೊಸ ಮಾದರಿಯ ಸಾಂಕ್ರಾಮಿಕ ರೋಗ ಹರಡುತ್ತಿದೆ. ಇದನ್ನು ತಡೆಯಲು ಪ್ರತಿಯೊಬ್ಬರೂ ತಲೆ ಬೋಳಿಸಿಕೊಳ್ಳುವುದು ಕಡ್ಡಾಯ” ಎಂದು ನಂಬಿಸಿದ್ದಾನೆ.
ಆಕರ್ಷಕ ಆಫರ್ ನೀಡಿ ವಂಚನೆ:
ಜನರನ್ನು ಪ್ರೇರೇಪಿಸಲು ತಮಿಳುನಾಡು ಸರ್ಕಾರ ಯೋಜನೆ ಜಾರಿಗೆ ತಂದಿದೆ ಎಂದು ಸುಳ್ಳು ಹೇಳಿದ ವಂಚಕ, ತಲೆ ಬೋಳಿಸಿಕೊಳ್ಳುವ ಮಹಿಳೆಯರಿಗೆ ₹15,000, ವಿದ್ಯಾರ್ಥಿನಿಯರಿಗೆ ₹45,000 ಜತೆಗೆ ಲ್ಯಾಪ್‌ಟಾಪ್ ಹಾಗೂ ಪುರುಷರಿಗೆ ₹6,000 ಪ್ರೋತ್ಸಾಹಧನ ನೀಡುವುದಾಗಿ ಭರವಸೆ ನೀಡಿದ್ದ. ಅಧಿಕಾರಿಗಳು ಮರುದಿನ ಪರಿಶೀಲನೆಗೆ ಬರುವಷ್ಟರಲ್ಲಿ ತಲೆ ಬೋಳಿಸಿಕೊಂಡಿರಬೇಕು ಎಂದು ಗಡುವು ನೀಡಿದ್ದ.
ಬೆಳಕಿಗೆ ಬಂದ ವಂಚನೆ:
ಈತನ ಮಾತುಗಳನ್ನು ಸತ್ಯವೆಂದು ನಂಬಿದ ಗ್ರಾಮದ ಸುಮಾರು 20 ಜನರು ತಲೆ ಬೋಳಿಸಿಕೊಳ್ಳಲು ಮುಂದಾಗಿದ್ದರು. ಅದರಲ್ಲಿ ಮೂವರು ಮಹಿಳೆಯರು ತಕ್ಷಣವೇ ಸಂಪೂರ್ಣವಾಗಿ ತಲೆ ಬೋಳಿಸಿಕೊಂಡಿದ್ದಾರೆ. ಆದರೆ, ಮಾರನೇ ದಿನ ಹಣ ಮತ್ತು ಸರ್ಕಾರಿ ಆಫರ್ ಪಡೆಯಲು ಕರೆಯನ್ನು ಮಾಡಿದಾಗ ವಂಚಕನ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಇದರಿಂದ ತಾವು ಮೋಸ ಹೋಗಿರುವುದನ್ನು ಅರಿತ ಇತರ ಗ್ರಾಮಸ್ಥರು ತಲೆ ಬೋಳಿಸಿಕೊಳ್ಳುವ ನಿರ್ಧಾರವನ್ನು ತಕ್ಷಣವೇ ಕೈಬಿಟ್ಟಿದ್ದಾರೆ.
ಘಟನೆ ಸಂಬಂಧ ಸಂತ್ರಸ್ತರು ಪೊಲೀಸರ ಮೆಟ್ಟಿಲೇರಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.





Leave a comment