ದಾವಣಗೆರೆ: ರಾಜ್ಯದಲ್ಲಿ ಹೆಚ್ಚುತ್ತಿರುವ ನೈಸರ್ಗಿಕ ವಿಕೋಪಗಳಾದ ಮಿಂಚು ಮತ್ತು ಉಷ್ಣ ಅಲೆಗಳಿಂದ ಸಂಭವಿಸುವ ಜೀವಹಾನಿಯನ್ನು ತಡೆಗಟ್ಟಲು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ವತಿಯಿಂದ ವಿಶೇಷ ಜಾಗೃತಿ ಹಾಗೂ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕುರಿತು ಸಾರ್ವಜನಿಕರಿಗೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು ಎಂದು ವಿಪತ್ತು ನಿರ್ವಹಣಾ ಕೇಂದ್ರದ ಆಯುಕ್ತರು ಆದ ಎಸ್. ಹೊನ್ನಾಂಭ ಅವರು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ವತಿಯಿಂದ ಆನ್ ಲೈನ್ ನಲ್ಲಿ ಆಯೋಜಿಸಲಾಗಿದ್ದ ವಿಶೇಷ ಜಾಗೃತಿ ಹಾಗೂ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಿಂಚಿನ ಸಮಯದಲ್ಲಿ ಮರದ ಕೆಳಗೆ ಆಶ್ರಯ ಪಡೆಯುವುದು ಅಥವಾ ನೀರಿನ ಮೂಲಗಳ ಹತ್ತಿರ ಇರುವುದು ಅತ್ಯಂತ ಅಪಾಯಕಾರಿ. ರಾಜ್ಯದಲ್ಲಿ ವಾರ್ಷಿಕವಾಗಿ ಸರಾಸರಿ 60 ರಿಂದ 80 ಜನ ಮಿಂಚಿನಿಂದಾಗಿ ಸಾವನ್ನಪ್ಪುತ್ತಿದ್ದು, ಇದನ್ನು ಶೂನ್ಯಕ್ಕೆ ಇಳಿಸುವುದು ಇಲಾಖೆಯ ಮುಖ್ಯ ಗುರಿಯಾಗಿದೆ. ಬಯಲು ಪ್ರದೇಶದಲ್ಲಿರುವವರು ತಕ್ಷಣವೇ ಸುರಕ್ಷಿತ ಕಟ್ಟಡಗಳ ಒಳಗೆ ಹೋಗಬೇಕು. ಗುಡ್ಡಗಾಡು ಪ್ರದೇಶದಲ್ಲಿರುವವರು ತಗ್ಗು ಪ್ರದೇಶಕ್ಕೆ ಸ್ಥಳಾಂತರಗೊಳ್ಳಬೇಕು. ಮಿಂಚಿನ ಮುನ್ನೆಚ್ಚರಿಕೆ ಇದ್ದಾಗ ಪ್ರಯಾಣವನ್ನು ಮುಂದೂಡುವುದು ಸೂಕ್ತ ಎಂದರು.
ವಯೋವೃದ್ಧರು, ಮಕ್ಕಳು, ಗರ್ಭಿಣಿಯರು ಮತ್ತು ಬಯಲು ಪ್ರದೇಶದಲ್ಲಿ ಕೆಲಸ ಮಾಡುವ ಕಾರ್ಮಿಕರ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಉಷ್ಣಾಂಶ ಏರಿಕೆಯ ಆಧಾರದ ಮೇಲೆ ‘ಆರೆಂಜ್’ ಮತ್ತು ‘ರೆಡ್’ ಅಲರ್ಟ್ ಸೂಚನೆಗಳನ್ನು ನೀಡಲಾಗುತ್ತಿದೆ. ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ. ಹೆಚ್ಚಿನ ಪ್ರಮಾಣದ ನೀರನ್ನು ಸೇವಿಸಿ ಹಾಗೂ ನಿರ್ಜಲೀಕರಣ ಉಂಟುಮಾಡುವ ಪಾನೀಯಗಳನ್ನು ತಪ್ಪಿಸಿ ಎಂದರು.
ಗ್ರಾಮ ಪಂಚಾಯತ್ ಮಟ್ಟದಿಂದ ಶಾಲಾ ಮಕ್ಕಳವರೆಗೆ ಮಿಂಚು ಮತ್ತು ಉಷ್ಣ ಅಲೆ ತಡೆಗೆ ಸಂಬಂಧಿಸಿದ ಲಘು ವೀಡಿಯೊಗಳು ಮತ್ತು ಮಾಹಿತಿಯನ್ನು ಹಂಚಲಾಗುತ್ತಿದೆ. ಮಿಂಚಿನ ಮುನ್ಸೂಚನೆಗಾಗಿ ‘ದಮಿನಿ’ (Damini-Lightning Alert) ಮೊಬೈಲ್ ಆಪ್ ಬಳಸಲು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಸಾರ್ವಜನಿಕರು ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ನೈಸರ್ಗಿಕ ವಿಕೋಪಗಳಿಂದ ಸುರಕ್ಷಿತವಾಗಿರಲು ಕೋರಿದರು.
ರಾಜ್ಯದಲ್ಲಿ ಕಳೆದ ದಶಕದಿಂದ ಸಿಡಿಲು ಮತ್ತು ಮಿಂಚಿನ ಆರ್ಭಟ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಜಾಗೃತಿ ವಹಿಸುವ ಅಗತ್ಯವಿದೆ, 2011 ರಿಂದ ಜುಲೈ 2025 ರ ಅವಧಿಯಲ್ಲಿ ಕರ್ನಾಟಕದಲ್ಲಿ ಒಟ್ಟು 1,026 ಜನರು ಸಿಡಿಲು ಬಡಿತದಿಂದ ಮೃತಪಟ್ಟಿದ್ದಾರೆ. 2024ರ ಸಾಲಿನಲ್ಲಿಯೇ ಸುಮಾರು 80 ಸಾವುಗಳು ವರದಿಯಾಗಿವೆ. ಬೆಳಗಾವಿ -86 ಮರಣಗಳು, ಕಲಬುರಗಿ -80 ಮರಣಗಳು, ವಿಜಯಪುರ -79 ಮರಣಗಳು, ಬೀದರ್-75 ಮರಣಗಳು ಹಾಗೂ ಹಾಸನ-56 ಮರಣಗಳು ದಾಖಲಾಗಿವೆ, ಮಾರ್ಚ್ 2026 ರ ವೇಳೆಗೆ ಉತ್ತರ ಕರ್ನಾಟಕ ಭಾಗದಲ್ಲಿ ತೀವ್ರ ಗುಡುಗು ಸಹಿತ ಮಳೆಯಾಗಿದ್ದು, ಕಲಬುರಗಿಯಲ್ಲಿ ಸಾವುಗಳು ಮತ್ತು ಬೀದರ್ ಜಿಲ್ಲೆಯಲ್ಲಿ ಗಾಯಾಳುಗಳು ವರದಿಯಾಗಿದ್ದಾರೆ ಎಂದು ತಿಳಿಸಿದರು.
ಮಳೆಯ ಸಮಯದಲ್ಲಿ ತೆರೆದ ಮೈದಾನಗಳಲ್ಲಿ ಇರುವುದು. ಮರಗಳ ಕೆಳಗೆ ಆಶ್ರಯ ಪಡೆಯುವುದು. ಬಿರುಗಾಳಿಯ ಸಮಯದಲ್ಲಿ ದುರ್ಬಲ ಕಟ್ಟಡ ಅಥವಾ ಅಸುರಕ್ಷಿತ ಶೆಡ್‌ಗಳಲ್ಲಿ ಇರುವುದು ಅನಾಹುತಗಳಿಗೆ ಕಾರಣವಾಗುತ್ತದೆ, ಸಿಡಿಲು ಬರುವ ಮುನ್ಸೂಚನೆ ಸಿಕ್ಕಾಗ ಕೂಡಲೇ ಸುರಕ್ಷಿತ ಕಟ್ಟಡಗಳ ಒಳಗೆ ಆಶ್ರಯ ಪಡೆಯಬೇಕು. ವಿದ್ಯುತ್ ಉಪಕರಣಗಳಿಂದ ದೂರವಿರಬೇಕು ಮತ್ತು ಮೊಬೈಲ್ ಫೋನ್ ಬಳಕೆ ಕಡಿಮೆ ಮಾಡಬೇಕು. ರೈತರು ಮತ್ತು ಸಾರ್ವಜನಿಕರು ಹವಾಮಾನ ಇಲಾಖೆಯ ಮುನ್ಸೂಚನೆಗಳನ್ನು ಗಮನಿಸಬೇಕು ಎಂದು ತಿಳಿಸಿದರು.
ವಿಪತ್ತು ನಿರ್ವಹಣಾ ಕೇಂದ್ರದ ಮುಖ್ಯಸ್ಥರಾದ ಅಶೋಕ್ ಎಸ್ ಸಂಗನಾಲ್ , ಹಿರಿಯ ಉಪನ್ಯಾಸಕ ಡಾ.ವಿನಯ್ ಎಂ., ಶ್ರೀ ಸಿ.ಎಸ್.ಪಾಟೀಲ್ ನಿರ್ದೇಶಕರು, ಐ.ಎಂ.ಡಿ ರವರು ಉಪನ್ಯಾಸ ನೀಡಿದರು. ಎಟಿಐನ ಜಂಟಿ ನಿರ್ದೇಶಕರುಗಳಾದ ಸತ್ಯಶ್ರೀ , ಸಾಧನ ಎ ಪೋಟೆ ಹಾಗೂ ಜಿಲ್ಲೆಗಳ ವಿಪತ್ತು ನಿರ್ವಹಣಾ ಸಮಿತಿಯ ಅಧಿಕಾರಿಗಳು ಉಪಸ್ಥಿತರಿದ್ದರು.
- Damini App
- DAVANAGERE NEWS
- Disaster Awareness Training
- Heatwave Precautions
- Heatwave Safety
- KSNDMC Karnataka
- Lightning Alert
- Lightning Deaths Karnataka
- Natural Disaster Management
- S Honnambha
- Thunderstorm
- Weather Forecast
- ಉಷ್ಣ ಅಲೆ
- ಎಸ್ ಹೊನ್ನಾಂಭ
- ಕರ್ನಾಟಕ ವಿಪತ್ತು ನಿರ್ವಹಣೆ
- ಕೆಎಸ್ಎನ್ಡಿಎಂಸಿ
- ಗುಡುಗು
- ದಮಿನಿ ಆಪ್
- ದಾವಣಗೆರೆ ಸುದ್ದಿ
- ನೈಸರ್ಗಿಕ ವಿಕೋಪ
- ಮಿಂಚು
- ಮುನ್ನೆಚ್ಚರಿಕೆ ಕ್ರಮಗಳು
- ಸಿಡಿಲು ಬಡಿತ
- ಹವಾಮಾನ ಮುನ್ಸೂಚನೆ






Leave a comment